ಪೊಲೀಸ್ ಠಾಣೆಯಿಂದ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದೊಯ್ಯುವಾಗ ತಪ್ಪಿಸಿಕೊಳ್ಳುವ ಸಲುವಾಗಿ ರೌಡಿಶೀಟರ್ ರುಸೂಲ್ ಎಂಬಾತ ಸಿಪಿಐ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಬೀದರ್ ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ.
ನಗರದ ಸಾಯಿ ಸ್ಕೂಲ್ ಆವರಣದ ಬಳಿ ಘಟನೆ ನಡೆದಿದ್ದು, ನ್ಯೂಟೌನ್ ಪೊಲೀಸ್ ಠಾಣೆಯ ಸಿಪಿಐ ಸಂತೋಷ್ ಮೇಲೆ ಹಲ್ಲೆ ನಡೆದಿದೆ. ಆತ್ಮರಕ್ಷಣೆಗೆ ಸಿಪಿಐ ರೌಡಿಶೀಟರ್ ರುಸೂಲ್ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗಾಯಗೊಂಡ ಸಿಪಿಐ ಸಂತೋಷ್ ಅವರಿಗೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ರೌಡಿಶೀಟರ್ಗೂ ಚಿಕಿತ್ಸೆ ಮುಂದುವರೆದಿದೆ. ರೌಡಿಶೀಟರ್ ರಸೂಲ್ ಮಾರಕ ಖಾಯಿಲೆಗೆ ತುತ್ತಾಗಿದ್ದು, ಬ್ರಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಏನಿದು ಘಟನೆ :
ಜಿಲ್ಲಾ ಆಸ್ಪತ್ರೆ ಬಳಿ ಸಾರ್ವಜನಿಕರಿಗೆ, ಸೇವೆ ಮೇಲಿರುವ ವೈದ್ಯರಿಗೆ ತೊಂದರೆ ಕೊಡುತ್ತಿದ್ದ ರುಸೂಲ್ ಎಂಬಾತನಿಗೆ ಸಿಪಿಐ ಸಂತೋಷ ನೇತ್ರತ್ವದ ಪೊಲೀಸ್ ತಂಡ ಠಾಣೆಗೆ ಕರೆದ್ಯೊಯ್ದಿದ್ದಾರೆ. ಠಾಣೆಯಲ್ಲಿ ಕಿರಿಕ್ ತೆಗೆದ ಆತನಿಗೆ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ಕರೆದುಕೊಂಡು ತೆರಳುತವ ವೇಳೆ ನಗರದ ಸಾಯಿ ಸ್ಕೂಲ್ ಆವರಣದ ಬಳಿ ರಸೂಲ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸಿಪಿಐ ಸಂತೋಷ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದರು. ಈ ವೇಳೆ ರಸೂಲ್ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ರಸೂಲ್ ಮತ್ತೆ ತಪ್ಪಿಸಿಕೊಳ್ಳಲು ಯತ್ನಿಸಿ ಸಿಪಿಐಗೆ ಚಾಕು ಇರಿದಿದ್ದಾನೆ. ಚಾಕು ಇರಿತದ ಬಳಿಕ ಆತ್ಮರಕ್ಷಣೆಗಾಗಿ ರಸೂಲ್ ಬಲಗಾಲಿಗೆ ಸಿಪಿಐ ಸಂತೋಷ ಗುಂಡು ಹಾರಿಸಿದ್ದಾರೆ.