ನಮ್ಮ ರಾಜ್ಯದಲ್ಲಿ ಯಾರೊಬ್ಬರ ಅಧಿಕಾರದ ಮದವೂ ನಡೆಯುವುದಿಲ್ಲ ಎಂಬ ಸಂದೇಶವನ್ನು ಇಡೀ ರಾಜ್ಯಕ್ಕೆ ರವಾನಿಸುವ ನಿಟ್ಟಿನಲ್ಲಿ ಈ ಹೋರಾಟ ರೂಪಿಸಲಾಗಿದೆ ಎಂದು ರೈತ ಸಂಘಟನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜ್ವಲ್ ಲೈಂಗಿಕ ಹಗರಣ ಖಂಡಿಸಿ ನಡೆದ ಹಾಸನ ಚಲೋ ಕಾರ್ಯಕ್ರಮದಲ್ಲಿ ಮಾತನಾಡಿ, “ಒಂದು ವೇಳೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಗೆದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮಗೆ ಅಧಿಕಾರ ಹೊಂದಲು ಅವಕಾಶವಿಲ್ಲವೆಂದು ತಿಳಿಸಲು ನಾವು ಹಾಸನದ ಮಹಿಳೆಯರೊಂದಿಗೆ ಮತ್ತೊಮ್ಮೆ ಹೋರಾಟ ಮಾಡೋಣ” ಎಂದು ಕರೆ ನೀಡಿದರು.
ಗುರುಪ್ರಸಾದ್ ಕೆರಗೋಡು ಮಾತನಾಡಿ, “ಮಾಜಿ ಪ್ರಧಾನಿಗಳೇ ನಿಮ್ಮ ಮೊಮ್ಮಗನ ಬಗ್ಗೆ ಮಾತನಾಡುವಾಗ ಕನಿಷ್ಟ ಕ್ಷಮೆ ಕೇಳುವ ವಿವೇಚನೆ ಇರಲಿಲ್ಲ ನಿಮಗೆ. ನಿಮ್ಮ ಹೇಳಿಕೆಗಳು ಖಂಡನೀಯ. ಕಾನೂನಿನ ವ್ಯವಸ್ಥೆಯಲ್ಲಿ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಕುಮಾರಸ್ವಾಮಿ ಹೇಳಿಕೆ ಕೊಡುತ್ತಿದ್ದಾರೆ. ಅಧಿಕಾರದ ದುರುಪಯೋಗ ಮಾಡಿಕೊಂಡು ಅತ್ಯಾಚಾರಗೈದ ನಿಮ್ಮ ಮೊಮ್ಮಗನನ್ನು ಕ್ಷಮಿಸಬಾರದು. ನೀವು ಇಡೀ ರಾಜ್ಯದ ಜನರ ಕ್ಷಮೆ ಕೇಳಬೇಕು. ದೇವೇಗೌಡರು ರಾಜಕೀಯ ನಿವೃತ್ತಿ ಪಡೆಯಬೇಕು. ಅವರ ಕುಟುಂಬಸ್ಥರ ರಾಜಕೀಯ ಅಂತ್ಯವಾಗಬೇಕು. ನಿಮ್ಮ ಅಧಿಕಾರ ದುರುಪಯೋಗದ ಕೆಲಸಗಳು ಸಾಕು” ಎಂದರು.
ಹೋರಾಟಗಾರ ಸ್ಟ್ಯಾನ್ಲಿ ಮಾತನಾಡಿ, “ಮಾನಗೆಟ್ಟ ರಾಜಕಾರಣದ ವಿರುದ್ಧ ಈ ಹೋರಾಟ ಸತ್ಯದ ಕನ್ನಡಿ ಹಿಡಿಯುತ್ತಿದೆ. ಪ್ರಜ್ವಲ್ ರೇವಣ್ಣನಿಗೆ ಮರ್ಯಾದೆ ಇದ್ದಿದ್ದರೆ ಇಷ್ಟೊತ್ತಿಗೆ ರಾಜೀನಾಮೆ ಕೊಡಬೇಕಿತ್ತು. ನಾಡಿನ ಜನರ ಕ್ಷಮೆ ಕೇಳಬೇಕಿತ್ತು. ಜನರ ಸಮ್ಮುಖದಲ್ಲಿ ನ್ಯಾಯ ಕೊಡಿಸಬೇಕಿತ್ತು. ನಿಮ್ಮ ಸಮರ್ಥನೆ ಖಂಡನೀಯ. ಇದು ನಿಮಗೆ ಯಾವುದೇ ಗೌರವ ತರುವುದಿಲ್ಲ. ಆತನನ್ನು ಕುಟುಂಬದಿಂದ ಹೊರಗೆ ಹಾಕದೆ ಇರುವುದಕ್ಕೆ ನಮಗೆ ಬೇಸರ ಇದೆ” ಎಂದರು.
“ಪ್ರಜ್ವಲ್ ವಿರುದ್ಧ ಹಾಕಿರುವ ಎಫ್‌ಐಆರ್‌ಗಳು ಸ್ಟೇಷನ್ ಬೇಲ್‌ನಿಂದಲೆ ಹೊರಬರುವಷ್ಟು ಸರಳವಾಗಿವೆ. ಎಸ್‌ಐಟಿ ಒಂದು ತಿಂಗಳ ಬಳಿಕ ಪ್ರಜ್ವಲ್ ಅವರ ಹಾಸಿಗೆ, ದಿಂಬು ವಶಪಡಿಸಿಕೊಂಡಿದೆ. ದಯವಿಟ್ಟು ಅದರಲ್ಲಿ ಒಂದು ಕೂದಲು ಇರದಂತೆ ನೋಡಿಕೊಳ್ಳಿ” ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದರು.
ಹಾಸನ ಚಲೋ ಚಳುವಳಿಯ ಅಧ್ಯಕ್ಷತೆ ವಹಿಸಿದ್ದ ರೂಪ ಹಾಸನ ಮಾತನಾಡಿ, “ಇದು ಅತ್ಯಾಚಾರ ಅಲ್ಲ. ಇಲ್ಲಿ ನಡೆದಿರುವುದು ವಿಕೃತ ಲೈಂಗಿಕ ಹತ್ಯಾಕಾಂಡ. ಒಬ್ಬ ಸಂಸದನ ನಿರ್ಲಜ್ಜತನ ಅಕ್ಷಮ್ಯ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಾಸನ ಚಲೋ | ಪ್ರಜ್ವಲ್ ಗೆದ್ದರೂ- ಸೋತರೂ ಆತನನ್ನು ಒಪ್ಪಿಕೊಳ್ಳಬೇಡಿ: ಹೋರಾಟಗಾರ್ತಿ ಕೆ ನೀಲಾ
ಇಂದು ಅನೇಕ ಹೋರಾಟಗಾರರು ಬಂದು ನಾವಿದ್ದೇವೆ ಎಂಬ ಸಂದೇಶ ಕೊಟ್ಟಿದ್ದಾರೆ. ಆದ್ದರಿಂದ ಸಂತ್ರಸ್ತೆಯರು ಧೈರ್ಯವಾಗಿ ಪ್ರಕರಣವನ್ನು ಎದುರಿಸಿ ಎಂದು ಸಂತ್ರಸ್ತೆಯರಿಗೆ ಧೈರ್ಯ ತುಂಬಿದರು.
ವಿಡಿಯೋ ಹಂಚಿಕೆ ನಿಲ್ಲಿಸಿ : “ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸಬೇಕು. ಹಾದಿ ಬೀದಿಯಲ್ಲಿ ಚೆಲ್ಲಾಡುತ್ತಿರುವ ವೀಡಿಯೊಗಳನ್ನು ನಿಲ್ಲಿಸಬೇಕು. ವಿಡಿಯೋ ಹಂಚಿಕೆಯನ್ನು ನಿಲ್ಲಿಸದಿದ್ದರೆ ಸರ್ಕಾರದ ಮೇಲಿನ ವಿಶ್ವಾಸ ಹೋಗಲಿದೆ. ಈ ಹತ್ಯಾಕಾಂಡಕ್ಕೆ ತಾರ್ಕಿಕ ಅಂತ್ಯ ಹಾಡದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ರೂಪಿಸಲಾಗುವುದು” ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
