ವಾಲ್ಮೀಕಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಯಾವುದೇ ಕಾರಣಕ್ಕೂ ತಪ್ಪಿತಸ್ಥರ ರಕ್ಷಣೆ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿ ಪ್ರವಾಸದಿಂದ ಮರಳಿದ ನಂತರ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜತೆ ಗುರುವಾರ ಮಾತನಾಡಿದರು.
“ರಾಜೀನಾಮೆ ಕೇಳುವುದು ವಿರೋಧ ಪಕ್ಷಗಳ ಧರ್ಮ, ಕೇಳುತ್ತಾರೆ. ನಾವು ಈ ಪ್ರಕರಣದ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಮುಖ್ಯಮಂತ್ರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸತ್ಯಾಸತ್ಯತೆ ಪರಿಶೀಲಿಸುತ್ತೇವೆ. ಆಧಾರವಿಲ್ಲದೇ ಆರೋಪ ಮಾಡಿದ ಮಾತ್ರಕ್ಕೆ ನಾವು ಪ್ರತಿಕ್ರಿಯೆ ನೀಡಲು ಆಗುವುದಿಲ್ಲ” ಎಂದರು.
“ತಪ್ಪು ಯಾರೇ ಮಾಡಿದರೂ ತಪ್ಪೇ. ತಕ್ಷಣವೇ ಎಫ್ಐಆರ್ ದಾಖಲಿಸಿ, ವ್ಯವಸ್ಥಾಪಕ ನಿರ್ದೇಶಕರ ಅಮಾನತು ಮಾಡಲಾಗಿದೆ. ತಪ್ಪು ಮಾಡಿರುವುದು ಸಾಬೀತಾದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಈಶ್ವರಪ್ಪ ರಾಜೀನಾಮೆ ಕೇಳಿದ್ದೀರಿ, ಈಗ ಬಿಜೆಪಿ ಕೂಡ ಈ ವಿಚಾರದಲ್ಲಿ ಸಚಿವರ ರಾಜೀನಾಮೆ ಕೇಳುತ್ತಿದೆ ಎಂದಾಗ, “ಆತ್ಮಹತ್ಯೆ ಪತ್ರದಲ್ಲಿ ಸಚಿವರ ಮೌಖಿಕ ಆದೇಶವಿದೆ ಎಂದು ಅಧಿಕಾರಿಗಳು ಹೇಳಿದ್ದರು ಎಂದು ಇದೆ. ನಾಗೇಂದ್ರ ಅವರ ವಿರುದ್ಧ ನೇರ ಆರೋಪವಿಲ್ಲ. ಈ ವಿಚಾರವಾಗಿ ಸರ್ಕಾರ ತನಿಖೆ ಮಾಡಲಿದೆ. ಇದು ಸಣ್ಣ ವಿಚಾರವಲ್ಲ. 10 ಲಕ್ಷ ಅಕ್ರಮ ನಡೆದರೂ ಅಕ್ರಮವೇ. ನಾನು ಪ್ರಕರಣದ ಎಫ್ಐಆರ್ ಓದಿದೆ. ಸಚಿವರನ್ನು ಕರೆಸಿ ಮಾಹಿತಿ ಪಡೆಯುತ್ತೇವೆ. ಸತ್ಯಾಸತ್ಯತೆ ಪರಿಶೀಲಿಸುತ್ತೇವೆ” ಎಂದರು.
