ಈಗೀನ ಕಾಲದಲ್ಲಿ ಮಕ್ಕಳು ಸಾಮಾಜಿಕ ಜಾಲತಾಣಕ್ಕೆ ಮಾರು ಹೋಗಿದ್ದಾರೆ. ಮೈದಾನಕ್ಕೆ ಇಳಿದು ಆಟ ಆಡಬೇಕಾದ ಮಕ್ಕಳು, ಈಗ ಮನೆಯ ಒಂದು ಮೂಲೆಯಲ್ಲಿ ಮೊಬೈಲ್ ಹಿಡಿದುಕೊಂಡು ಕುಳಿತಿರುತ್ತಾರೆ. ಕೆಲವು ಮಕ್ಕಳು ಗೇಮ್ ಆಟದ ಹಿಂದೆ ಬಿದ್ದಿದ್ದರೇ, ಇನ್ನು ಬಹುತೇಕ ಮಕ್ಕಳು ಸಾಮಾಜಿಕ ಜಾಲತಾಣದ ಅಕೌಂಟ್ ತೆರೆದು ಬಳಕೆದಾರರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷವಾಗಿ ‘ಇನ್‌ಸ್ಟಾಗ್ರಾಮ್’ನಲ್ಲಿ ಮಕ್ಕಳು ಸಕ್ರಿಯವಾಗಿದ್ದು, ಈ ಸಾಮಾಜಿಕ ಜಾಲತಾಣ ಬಳಸುವ ಅಪಾಯದ ಕುರಿತು ಬೆಂಗಳೂರಿನ ಹಲವು ಶಾಲೆಗಳು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಎಚ್ಚರಿಕೆ ನೀಡಿವೆ.
ಎರಡು ತಿಂಗಳ ಬೇಸಿಗೆ ರಜೆ ನಂತರ ಬುಧವಾರದಿಂದ ಶಾಲೆಗಳು ಪುನರಾರಂಭವಾಗಿವೆ. ಹಲವಾರು ಶಾಲೆಗಳು ಸಾಮಾಜಿಕ ಮಾಧ್ಯಮ ಬಳಕೆ ಮಾಡುತ್ತಿರುವ ಮಕ್ಕಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲು ‘ಓರಿಯಂಟೇಶನ್ ಸೆಷನ್’ ನಡೆಸಿದ್ದವು.
ಮಕ್ಕಳು ಫೋನ್ ಮತ್ತು ಕಂಪ್ಯೂಟರ್‌ನಂತರ ಸಾಧನಗಳನ್ನು ಬಳಕೆ ಮಾಡುವಾಗ ಪೋಷಕರು ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು ಎಂದು ಶಾಲಾ ಆಡಳಿತ ಮಂಡಳಿ ಪೋಷಕರಿಗೆ ತಿಳಿಸಿದೆ. ಹಾಗೆಯೇ, ಇನ್ನು ಕೆಲವು ಶಾಲೆಗಳು ತಮ್ಮ ಮಕ್ಕಳು ಸಾಮಾಜಿಕ ಮಾಧ್ಯಮದಲ್ಲಿ ವಿಶೇಷವಾಗಿ ಇನ್‌ಸ್ಟಾಗ್ರಾಮ್ ಬಳಕೆ ಮಾಡದಿರುವ ಬಗ್ಗೆ ತಿಳಿಸುವಂತೆ ಸೂಚಿಸಿದೆ.
“ಇನ್‌ಸ್ಟಾಗ್ರಾಮ್‌ನಲ್ಲಿ ಮಕ್ಕಳು ಚಾಟ್ ಮಾಡಲು, ಶಿಕ್ಷಕರನ್ನು ದೂಷಿಸಲು ಹಾಗೂ ಶಿಕ್ಷಕರ ಬಗ್ಗೆ ಅವಹೇಳನಕಾರಿಯಾಗಿ ಕಾಮೆಂಟ್ ಪೋಸ್ಟ್ ಮಾಡಲು ತಮ್ಮದೇ ಅಕೌಂಟ್ ಬಳಕೆ ಮಾಡುತ್ತಿದ್ದಾರೆ. ಇತ್ತೀಚೆಗೆ, ಕೆಲವು ಮಕ್ಕಳು ನಗ್ನ ಫೋಟೋಗಾಗಿ 9ನೇ ತರಗತಿಯ ಬಾಲಕಿಯ ಫೋಟೋವನ್ನು ಮಾರ್ಫ್ ಮಾಡಿ ಶಾಲೆಯ ಗುಂಪುವೊಂದರಲ್ಲಿ ಪೋಸ್ಟ್ ಮಾಡಿದ್ದರು. ನಮ್ಮ ಮಕ್ಕಳು ಸಾಮಾಜಿಕ ಜಾಲತಾಣವನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇನ್‌ಸ್ಟಾಗ್ರಾಮ್ ಅತ್ಯುತ್ತಮ ಉದಾಹರಣೆಯಾಗಿದೆ”ಎಂದು ನಗರದ ಶಾಲೆಯ ಪ್ರಾಂಶುಪಾಲರೊಬ್ಬರು ಹೇಳಿದರು.
“ಮಕ್ಕಳು ಇನ್‌ಸ್ಟಾಗ್ರಾಮ್ ಬಳಕೆ ಮಾಡುತ್ತಿರುವುದು ಕಂಡುಬಂದರೆ ಅಂತಹ ಮಕ್ಕಳನ್ನು ಶಾಲೆಯಿಂದ ಹೊರಹಾಕಲಾಗುವುದು” ಎಂದು ಪೋಷಕರಿಗೆ ಎಚ್ಚರಿಕೆ ನೀಡಿದರು.
ಪೋಷಕರಿಗೆ ಸಾಮಾಜಿಕ ಜಾಲತಾಣದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಕೆಲವು ಶಾಲೆಗಳು ಸೈಬರ್ ಅಪರಾಧ ತಜ್ಞರನ್ನೊಳಗೊಂಡ ಓರಿಯಂಟೇಶನ್ ಸೆಷನ್‌ಗಳಿಗೆ ಆಹ್ವಾನಿಸಿವೆ. ಈ ವಿಷಯದ ಬಗ್ಗೆ ಶಿಕ್ಷಣ ನೀಡಲು ಪೊಲೀಸ್ ಇಲಾಖೆಯ ಪ್ರತಿನಿಧಿಗಳನ್ನು ಸಹ ಆಹ್ವಾನಿಸಲಾಗಿದೆ.
ಬೆಂಗಳೂರು ದಕ್ಷಿಣದ ಪ್ರೆಸಿಡೆನ್ಸಿ ಶಾಲೆಯ ಪ್ರಾಂಶುಪಾಲರು ಮತ್ತು ನಿರ್ದೇಶಕಿ ಭುವನೇಶ್ವರಿ ಜೆ ಮಾತನಾಡಿ, “ನಾವು ಶಾಲೆಯಲ್ಲಿ ಮೊಬೈಲ್ ಬಳಕೆ ಹೊಂದಿದ್ದೇವೆ. ಆದರೆ, ಸಾಮಾಜಿಕ ಮಾಧ್ಯಮವನ್ನು ಬಳಸುವುದು ಮತ್ತು ಅದರ ದುರುಪಯೋಗದ ಪರಿಣಾಮಗಳ ಬಗ್ಗೆ ಸೈಬರ್ ಕ್ರೈಮ್ ತಜ್ಞರಿಂದ ಉಪನ್ಯಾಸಗಳನ್ನು ನೀಡಿದ್ದೇವೆ. ಅವರು ತಮ್ಮ ಹದಿಹರೆಯದ ಮಕ್ಕಳನ್ನು ನಿಯಂತ್ರಿಸುವಲ್ಲಿ ಅಸಹಾಯಕರಾಗಿದ್ದಾರೆ. ಆದ್ದರಿಂದ ಇತ್ತೀಚಿನ ಘಟನೆ ಮತ್ತು ಅದರ ನಂತರ ಏನಾಯಿತು ಮತ್ತು ಅಪರಾಧಿಗಳನ್ನು ಹೇಗೆ ಹಿಡಿಯಲಾಯಿತು ಎಂಬುದನ್ನು ಉಲ್ಲೇಖಿಸಿ ಅವರಲ್ಲಿ ಜಾಗೃತಿ ಮೂಡಿಸಲು ಸೂಚಿಸಿದ್ದೇವೆ” ಎಂದರು.
ಉತ್ತರಹಳ್ಳಿಯ ಸಾಧನಾ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಶೈಕ್ಷಣಿಕ ಮುಖ್ಯಸ್ಥೆ ಅವಂತಿ ರೆಡ್ಡಿ ಕೂಡ ಅಪ್ರಾಪ್ತರು ಶಾಲೆಗೆ ತೆರಳುವ ಹಾಗೂ ವಾಹನ ಚಲಾಯಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. “ಮಕ್ಕಳು ಕ್ಯಾಂಪಸ್‌ನೊಳಗೆ ತೆಗೆದುಕೊಂಡ ಹೋಗುವ ಗ್ಯಾಜೆಟ್‌ಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದಿರುತ್ತೇವೆ” ಎಂದು ಅವರು ಹೇಳಿದರು.
“ಓರಿಯಂಟೇಶನ್ ಸಮಯದಲ್ಲಿ ಸಹ ನಾವು ಸಾಮಾಜಿಕ ಜಾಲತಾಣದ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಹೇಳಿದ್ದೇವೆ. ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತರು ಡ್ರೈವಿಂಗ್ ಮಾಡುವುದು ಅಪಾಯಕಾರಿಯಾಗಿದೆ. ಇತ್ತೀಚೆಗೆ ಪುಣೆಯಲ್ಲಿ ಅಪ್ರಾಪ್ತ ವ್ಯಕ್ತಿಯೊಬ್ಬ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಇಬ್ಬರನ್ನು ಕೊಂದಿದ್ದ ಘಟನೆ ನಡೆದಿತ್ತು. ಈ ಘಟನೆಯ ಉದಾಹರಣೆ ನೀಡಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್-ವೇ | 28 ದಿನಗಳಲ್ಲಿ 74,915 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ
“ತಮ್ಮ ಮಕ್ಕಳು ಇನ್‌ಸ್ಟಾಗ್ರಾಮ್‌ನಲ್ಲಿ ಏನು ಪೋಸ್ಟ್ ಮಾಡುತ್ತಿದ್ದಾರೆ. ಅವರು ಯಾರೊಂದಿಗೆ ಸ್ನೇಹಿತರಾಗಿದ್ದಾರೆ. ಅವರ ಚಾಟ್ ಇತಿಹಾಸ ಮತ್ತು ಚಾಟಿಂಗ್ ವಿಷಯಗಳ ಮೇಲೆ ಪೋಷಕರು ನಿಯಂತ್ರಣ ಮತ್ತು ನಿಕಟ ನಿಗಾ ಇರಬೇಕು” ಎಂದು ಅವರು ಹೇಳಿದರು.
ಲಿಟ್ಲ್ ಫ್ಲವರ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲೆ ಗಾಯೆತ್ರಿ ದೇವಿ ಮಾತನಾಡಿ, “ಮಕ್ಕಳೊಂದಿಗೆ ಸಾಮಾಜಿಕ ಜಾಲತಾಣಗಳ ಬಗ್ಗೆ ಚರ್ಚಿಸಲು ಶಾಲೆಗಳು ಸಂದಿಗ್ಧ ಸ್ಥಿತಿಯಲ್ಲಿವೆ. ಸಾಮಾಜಿಕ ಮಾಧ್ಯಮದ ಬಳಕೆ ಬಗ್ಗೆ ಸೂಕ್ಷ್ಮವಾಗಿರಬೇಕು. ಈ ಬಗ್ಗೆ ಒಬ್ಬರಿಂದ ಒಬ್ಬರಿಗೆ ಸಲಹೆ ನೀಡಬೇಕು. ಪೋಷಕರು ತಮ್ಮ ಮಕ್ಕಳಿಗೆ ಸ್ಮಾರ್ಟ್‌ಫೋನ್ ಬದಲಿಗೆ ಕೀಪ್ಯಾಡ್ ಮೊಬೈಲ್ ಫೋನ್ ನೀಡಿ” ಎಂದರು.
ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಸಹ ಮಕ್ಕಳು ಗ್ಯಾಜೆಟ್‌ಗಳ ಬಳಕೆ ಮಾಡುವ ಬದಲು ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದೆ.
ಇತ್ತೀಚೆಗೆ, ರಾಜಧಾನಿ ಬೆಂಗಳೂರಿನಲ್ಲಿ ಅಪ್ರಾಪ್ತ ಬಾಲಕರು 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಮೂಲಕ ಡೌನ್‌ಲೋಡ್ ಮಾಡಿಕೊಂಡು, ಬಾಲಕಿಯ ಫೋಟೋವನ್ನು ಕೃತಕ ಬುದ್ಧಿಮತ್ತೆ (ಎಐ) ಬಳಸಿ ನಗ್ನ ಚಿತ್ರಗಳಾಗಿ ಮಾರ್ಫ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆ ಬಳಕೆ ಮಾಡಿ ಪೋಸ್ಟ್ ಮಾಡಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಅಪ್ರಾಪ್ತ ಬಾಲಕರು ಸೇರಿ ಮೂವರ ಬಂಧನ ಮಾಡಿದ್ದಾರೆ.
ಮೂಲ: ಡೆಕ್ಕನ್ ಹೆರಾಲ್ಡ್