ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್-ವೇನಲ್ಲಿ ಪ್ರತಿ ಗಂಟೆಗೆ 100ಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆಗಳು ದಾಖಲಾಗುತ್ತಿವೆ. ಕಳೆದ 28 ದಿನಗಳಲ್ಲಿ ಒಟ್ಟು 74,915 ಸಂಚಾರ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ. ರಸ್ತೆಯ ಎರಡೂ ಬದಿಗಳಲ್ಲಿ ಅಳವಡಿಸಲಾಗಿರುವ 22 ಕ್ಯಾಮೆರಾಗಳು ಸಂಚಾರ ಉಲ್ಲಂಘನೆಗಳನ್ನು ಸೆರೆ ಹಿಡಿದಿವೆ.
ಪ್ರಕರಣಗಳಲ್ಲಿ, ಚಾಲಕರು ಮತ್ತು ಸಹ ಪ್ರಯಾಣಿಕರು ಸೀಟ್ ಬೆಲ್ಟ್ ಧರಸದ ಪ್ರಕರಣಗಳೇ ಹೆಚ್ಚಾಗಿವೆ. ಸೀಟ್ ಬೆಲ್ಟ್ ಧರಿಸದ ಕಾರಣ 57,057 ಪ್ರಕರಣಗಳು ದಾಖಲಾಗಿದ್ದರೆ, 10,945 ಅತಿವೇಗದ ಪ್ರಕರಣಗಳು, 6,046 ಲೇನ್ ಉಲ್ಲಂಘನೆ ಪ್ರಕರಣಗಳು ಹಾಗೂ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ 494 ಪ್ರಕರಣಗಳು ದಾಖಲಾಗಿವೆ.
ಅಪಘಾತಗಳು ಮತ್ತು ಸಂಚಾರ ಉಲ್ಲಂಘನೆಗಳನ್ನು ತಡೆಯಲು ಮೈಸೂರು-ಬೆಂಗಳೂರು ನಡುವಿನ NH-275ನಲ್ಲಿ ಪೊಲೀಸರು AI ಆಧಾರಿತ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ರಸ್ತೆಯ ಪ್ರತಿ ದಿಕ್ಕಿನಲ್ಲಿ ಆರು ಸ್ಥಳಗಳಲ್ಲಿ ಕ್ಯಾಮೆರಾಗಳಿವೆ. ಅಲ್ಲದೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪ್ರತಿ ದಿಕ್ಕಿನಲ್ಲಿಯೂ ಐದು ಇತರ ಸ್ಥಳಗಳಲ್ಲಿ ವೀಡಿಯೊ ಕ್ಯಾಮೆರಾಗಳನ್ನು ಅಳವಡಿಸಿದೆ. ಜೊತೆಗೆ, ಗಂಟೆಗೆ 100 ಕಿ.ಮೀ ವೇಗದ ಮಿತಿಯನ್ನು ನಿಗದಿಪಡಿಸಿದೆ.
ಕ್ಯಾಮೆರಾಗಳಿದ್ದರೂ ಹೆದ್ದಾರಿಯಲ್ಲಿ ಸಂಚರಿಸುವವರು ನಿಯಮ ಉಲ್ಲಂಘಿಸಿ ವೇಗದ ಮಿತಿಯನ್ನು ದಾಟುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದ್ದಾರೆ ಎಂದು ಹೇಳಲಾಗಿದೆ.
“ಕೇವಲ 28 ದಿನಗಳಲ್ಲಿ 74,000 ಕ್ಕೂ ಹೆಚ್ಚು ಅಪರಾಧಗಳು ದಾಖಲಾಗಿರುವುದು ರಸ್ತೆ ಸುರಕ್ಷತೆಯ ಬಗ್ಗೆ ಜನರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಕಾರು ಚಾಲಕರು ಸೀಟ್ ಬೆಲ್ಟ್ ಧರಿಸದಿರುವುದು, ಅತಿವೇಗ ಮತ್ತು ಲೇನ್ ಉಲ್ಲಂಘನೆಗಳು ಹೆಚ್ಚಾಗಿವೆ. ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಸೇರಿದಂತೆ ಭಾರೀ ಸರಕು ವಾಹನಗಳು ಕೂಡ ಸಂಚಾರ ನಿಯಮಗಳನ್ನು ಉಲ್ಲಂಘಿಸಿವೆ. ಎಲ್ಲ ಅಪರಾಧಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ಹೇಳಿದ್ದಾರೆ.
“ಸಂಚಾರ ನಿಯಮ ಉಲ್ಲಂಘಿಸುವವರ ವಾಹನಗಳು ಟೋಲ್‌ಗಳನ್ನು ದಾಟಿದಾಗ ಅವರ ಫಾಸ್ಟ್‌ಟ್ಯಾಗ್ ಖಾತೆಯ ಮೂಲಕ ದಂಡವನ್ನು ತಕ್ಷಣವೇ ಕಡಿತಗೊಳಿಸಬೇಕು. ಹೀಗೆ ಮಾಡುವುದರಿಂದ ಹೆದ್ದಾರಿಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಯನ್ನು ಕಡಿಮೆ ಮಾಡಬಹುದು” ಎಂದು ಎಡಿಜಿಪಿ ಅಭಿಪ್ರಾಯಪಟ್ಟಿದ್ದಾರೆ.