ಮಲ್ಲೇಶ್ ಎಂಬ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ವಿರೇಶ್ ಎಂಬ ಯುವಕನಿಂದ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗ ಗ್ರಾಮಾಂತರ ಮಂಗೋಟೆ ಗ್ರಾಮದಲ್ಲಿ ನಡೆದಿದೆ.
ಮಂಗೋಟೆ ಯುವಕರ ಬಳಗ ವಾಟ್ಸಾಪ್ ಗ್ರೂಪ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿರೇಶ್ ಎಂಬ ಯುವಕ ತುಂಬಾ ಅವಾಚ್ಯ ಮತ್ತು ಅಸಭ್ಯ ಶಬ್ದಗಳಿಂದ ನಿಂದಿಸಿದ್ದನು. ಈ ಹಿನ್ನೆಲೆಯಲ್ಲಿ, ʼರಾಜ್ಯದ ಮುಖ್ಯಮಂತ್ರಿ ಬಗ್ಗೆ ಈ ರೀತಿ ವಾಟ್ಸಾಪ್ ಗ್ರೂಪ್‌ನಲ್ಲಿ ಮಾತನಾಡುವುದು ಅಸಭ್ಯ ಮತ್ತು ಅವಾಚ್ಯ ಶಬ್ದ ನಿಂದನೆ ಮಾಡುವುದು ತಪ್ಪುʼ ಎಂದು ತಿಳಿ ಹೇಳಿದ್ದಕ್ಕೆ ರಾತ್ರಿ ಸುಮಾರು 9-46ರಲ್ಲಿ ಮಲ್ಲೇಶ್ ಅವರ ಮನೆಗೆ ನುಗ್ಗಿದ ವಿರೇಶ್ ಮದ್ಯಪಾನ ಮಾಡಿಕೊಂಡು ಬಂದಿದ್ದ ಎನ್ನಲಾಗಿದೆ.
ಹಲ್ಲೆಗೊಳಗಾದ ಮಲ್ಲೇಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮಂಗೋಟೆ ಯುವಕರ ಬಳಗ ವಾಟ್ಸಾಪ್ ಗ್ರೂಪ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಾಚ್ಯವಾಗಿ ನಿಂದಿಸಿದ್ದರಿಂದ, ಅವರು ರಾಜ್ಯದ ಮುಖ್ಯಮಂತ್ರಿ ಹಾಗೆಲ್ಲ ಅವಾಚ್ಯ ಶಬ್ದಗಳಿಂದ ವಾಟ್ಸಾಪ್ ಗುಂಪಿನಲ್ಲಿ ಅವಾಚ್ಯ ಶಬ್ದ ಬಳಸುವುದು ತಪ್ಪು ಎಂದಿದ್ದಕ್ಕೆ, ಪಾನ ಮತ್ತನಾಗಿ ನಮ್ಮ ಮನೆಗೆ ಬಂದ ಆತ ಬಾಗಿಲು ತೆರೆಯುತ್ತಿದಂತೆ ನನ್ನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಮುಖ, ಕುತ್ತಿಗೆ, ಹೊಟ್ಟೆ ಭಾಗಕ್ಕೆ ತುಂಬಾ ಪೆಟ್ಟಾಗಿದೆ” ಎಂದು ತಿಳಿಸಿದ್ದಾರೆ.
“ತದನಂತರ ಊರಿನವರು ಮತ್ತು ಪಂಚಾಯತ್ ಅವರು ಎಲ್ಲರೂ ಬುದ್ದಿಮಾತು ಹೇಳಿ ರಾಜಿ ಮಾಡಿಸಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ನಿಷ್ಪಕ್ಷಪಾತ ಮತ ಎಣಿಕೆಗೆ ʼಎದ್ದೇಳು ಕರ್ನಾಟಕʼ ಆಗ್ರಹ
“ಸಮಾಜದಲ್ಲಿ ಇಂತಹ ನಡೆವಳಿಕೆ ಸಮಂಜಸವಲ್ಲ, ಇಂತಹ ಪುಂಡರಿಗೆ ಸರಿಯಾಗಿ ಬುದ್ದಿ ಹೇಳೋ ಕೆಲಸ ಮತ್ತು ಕ್ರಮವಾಗಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಪಕ್ಷ ಅಥವಾ ವ್ಯಕ್ತಿ ಅಭಿಮಾನ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆ ಇರುವುದು ಸಹಜ. ಅದನ್ನು ವಯಕ್ತಿಕ ದ್ವೇಷವಾಗಿ ಬೆಳಸಬಾರದು. ಸಮಾಜದಲ್ಲಿ ಶಾಂತಿ ಕಾಪಾಡಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ” ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.
