ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣವನ್ನು ನಾವಾಗಿಯೇ ಸಿಬಿಐಗೆ ವಹಿಸುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.
ಸದಾಶಿವನಗರದಲ್ಲಿ ಸುದ್ದಿಗಾರರು ಬ್ಯಾಂಕ್‌ನವರು ಸಿಬಿಐಗೆ ದೂರು ನೀಡಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನೂರು ಕೋಟಿ ರೂ. ಮೇಲು ಹಗರಣಗಳಾದಾಗ ಪ್ರಕರಣ ಸಿಬಿಐಗೆ ವರ್ಗಾವಣೆಯಾಗುತ್ತದೆ. ಈಗ ಸಿಐಡಿಯವರು ತನಿಖೆ ಆರಂಭಿಸಿದ್ದಾರೆ. ನೂರು ಕೋಟಿ ರೂ. ಅಧಿಕ ಅಕ್ರಮ ನಡೆದಿದೆಯೋ, ಏನಾಗಿದೆ ಎಂಬುದು ಸಿಐಡಿ ತನಿಖೆಯಿಂದ ಗೊತ್ತಾಗಲಿದೆ. ನೂರು ಕೋಟಿ ರೂ. ಮೇಲು ಅಕ್ರಮವಾಗಿದ್ದರೆ ಮುಂದೆ ಏನು ಆಗುತ್ತದೆ ಎಂಬುದನ್ನು ನೋಡೋಣ. ನಾವಾಗಿಯೇ ಸಿಬಿಐಗೆ ವರ್ಗಾವಣೆ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
“ನಾವು ಸಿಬಿಐಗೆ ವರ್ಗಾವಣೆ ಮಾಡುವುದಿಲ್ಲ. ಅಂತಹ ಸಂದರ್ಭ ಬಂದಾಗ ಸಿಎಂ ಜೊತೆ ಚರ್ಚೆ ಮಾಡಲೇ ಬೇಕಾಗುತ್ತದೆ. ಪ್ರತಿಭಟನೆ ಮಾಡುವುದು ವಿಪಕ್ಷದವರ ಹಕ್ಕು, ಮಾಡಲಿ. ಸರ್ಕಾರದಲ್ಲಿ ನಮಗೆ ಆದಂತಹ ಜವಾಬ್ದಾರಿಗಳಿವೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ” ಎಂದರು.
“ಪ್ರಜ್ವಲ್ ರೇವಣ್ಣ ಬಂಧನದ ನಂತರ ಪ್ರಕರಣದ ಕುರಿತು ಅಧಿಕಾರಿಗಳ ಜೊತೆ ಯಾವುದೇ ರೀತಿಯ ಚರ್ಚೆ ಮಾಡಿಲ್ಲ. ಚಂದ್ರಶೇಖರ್ ಕುಟುಂಬಕ್ಕೆ ಸಾಂತ್ವನ ಹೇಳಲು ನಿನ್ನೆ ಶಿವಮೊಗ್ಗಕ್ಕೆ ಹೋಗಿದ್ದೆ. ತಡವಾಗಿ ಬಂದ ಹಿನ್ನೆಲೆಯಲ್ಲಿ ಚರ್ಚಿಸಲು ಸಾಧ್ಯವಾಗಿಲ್ಲ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಎಸ್ಐಟಿ ನೋಡಿಕೊಳ್ಳುತ್ತದೆ” ಎಂದು ತಿಳಿಸಿದರು.
ಪ್ರಜ್ವಲ್ ಬಂಧನವಾಗಲು ತಡವಾಗಿದ್ದರಿಂದ ಸಾಕಷ್ಟು ಸಂತ್ರಸ್ತೆಯರು ದೂರು ಕೊಡಲು ಮುಂದೆ ಬಂದಿರಲಿಲ್ಲ. ಈಗ ಪ್ರಜ್ವಲ್ ಬಂಧನವಾಗಿದೆ. ಸಂತ್ರಸ್ತೆಯರಲ್ಲಿ ಏನಾದರು ಮನವಿ ಮಾಡುತ್ತೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಯಾರಿಗೆ ತೊಂದರೆ ಆಗಿದೆ ಅವರು ಪೊಲೀಸರ ಮುಂದೆ ಬಂದು ದೂರು ಕೊಡಬಹುದು. ಎಸ್ಐಟಿ ಮುಂದೆ ಹೇಳಬಹುದು ಎಂದು ಮೊದಲೇ ತಿಳಿಸಲಾಗಿದೆ. ಅಂತವರಿಗೆ ಎಲ್ಲ ರೀತಿಯ ರಕ್ಷಣೆ ಕೊಡುತ್ತೇವೆ ಎಂಬುದನ್ನು ಹೇಳಿದ್ದೇವೆ. ಸಂತ್ರಸ್ತೆಯರಿಗಾಗಿ ತೆರೆಯಲಾದ ಸಹಾಯವಾಣಿ ವಿಚಾರದ ಕುರಿತು ಹೆಚ್ಚು ತಿಳಿದುಕೊಳ್ಳಲು ಹೋಗಿಲ್ಲ. ಕೆಲವು ವಿಚಾರವನ್ನು ಎಸ್ಐಟಿಯವರು ಗೌಪ್ಯವಾಗಿ ಇಟ್ಟುಕೊಳ್ಳುತ್ತಾರೆ. ಅಂತಹ ವಿಚಾರಗಳ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳುವುದಿಲ್ಲ ಹೋಗಲ್ಲ” ಎಂದು ಹೇಳಿದರು.
ಪ್ರಜ್ವಲ್ ಬಂಧನ ಪ್ರಕ್ರಿಯೆ ವಿಳಂಬದ ಕುರಿತು ಪ್ರತಿಕ್ರಿಯಿಸಿ, “ಪ್ರಜ್ವಲ್ ನಮ್ಮ ದೇಶದಲ್ಲಿ ಅಥವಾ ಯಾವುದಾದರೂ ರಾಜ್ಯದಲ್ಲಿದ್ದರೆ ನಮ್ಮ ತಂಡವನ್ನು ಕಳುಹಿಸಿ ಕರೆದುಕೊಂಡು ಬರಬಹುದಿತ್ತು. ಹೊರ ದೇಶದಲ್ಲಿದ್ದ ಕಾರಣಕ್ಕಾಗಿ, ಬಂಧಿಸಲು ಅದಕ್ಕೆ ಆದಂತಹ ಪ್ರಕ್ರಿಯೆಗಳಿವೆ. ಇಲ್ಲಿಂದ ನಾಲ್ಕು ಜನ ಇನ್ಸ್‌ಪೆಕ್ಟರ್‌ಗಳನ್ನು ಅಥವಾ ಹಿರಿಯ ಅಧಿಕಾರಿಗಳನ್ನು ಕಳುಹಿಸಿ ಎತ್ತಾಕಿಕೊಂಡು ಬನ್ನಿ ಅಂತ ಹೇಳೋಕೆ ಆಗಲ್ಲ. ನಮ್ಮ ದೇಶಕ್ಕೂ ಬೇರೆ ದೇಶಕ್ಕೂ ರಾಜತಾಂತ್ರಿಕ ಒಪ್ಪಂದಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಅದನ್ನೆಲ್ಲ ಪಾಲಿಸಬೇಕಾಗುತ್ತದೆ. ಸಿಬಿಐ ಮೂಲಕ ಇಂಟರ್‌ಪೋಲ್‌ನವರಿಗೆ ನೋಟಿಸ್ ಕಳುಹಿಸಿ, ಅಲ್ಲಿಂದ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆಯನ್ನು ಮಾಡಲಾಗಿತ್ತು” ಎಂದು ತಿಳಿಸಿದರು.
