ಪ್ರಚಾರಕ್ಕೆ ತೆರೆ ಬಿದ್ದ ನಂತರವೂ ನಡೆದಿದೆ ಮತಬೇಟೆಯ ಬಕಧ್ಯಾನ!

Date:

Advertisements
ಚುನಾವಣಾ ಪ್ರಚಾರಕ್ಕೆ ಬುಧವಾರ ಸಂಜೆಯೇ ತೆರೆ ಬಿದ್ದಿದೆ. ಆದರೂ ಮತದಾನ ಮುಗಿಯುವ ತನಕವೂ ಪ್ರಚಾರದಲ್ಲಿರುವ ತಂತ್ರಗಳನ್ನು ಮೋದಿಯವರು ಕರಗತ ಮಾಡಿಕೊಂಡಿದ್ದಾರೆ. ಕಳೆದ ಸಲ ಕೇದಾರನಾಥದಲ್ಲಿ ಅವರ ಧ್ಯಾನದ ಚಿತ್ರಗಳು, ವಿಡಿಯೊಗಳು ಗೋದಿ ಮೀಡಿಯಾದಲ್ಲಿ ಅಬ್ಬರಿಸಿ ಕವಿದಿದ್ದವು.

 

ಲೋಕಸಭಾ ಚುನಾವಣೆಯ ಕಡೆಯ ಹಂತದ ಪ್ರಚಾರ ಮುಗಿಯುತ್ತಿದ್ದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಮಿಳುನಾಡಿನ ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಬುಧವಾರ ಸಂಜೆಯಿಂದ ಧ್ಯಾನ ಆರಂಭಿಸಿದ್ದಾರೆ. 45 ತಾಸುಗಳ ಈ ಧ್ಯಾನದ ಚಿತ್ರನಾಟಕ ಜೂನ್ ಒಂದರ ಶನಿವಾರ ಮತದಾನದ ತನಕ ಜನಮನವನ್ನು ಅಪ್ಪಳಿಸಲಿದೆ. ಅದುವೇ ಧ್ಯಾನದ ಅಸಲಿ ಉದ್ದೇಶ.

ಇಲ್ಲವಾದರೆ ಗುಂಪು ಗುಂಪು ಕ್ಯಾಮೆರಾಗಳು ಅವರ ಧ್ಯಾನವನ್ನು ಚಿತ್ರೀಕರಿಸುತ್ತಿರಲಿಲ್ಲ. ಬಿತ್ತರಗೊಂಡಿರುವ 47 ಸೆಕೆಂಡುಗಳ ಒಂದು ವಿಡಿಯೋ ತುಣುಕಿನಲ್ಲಿ 20 ಕಟ್ ಗಳು ಇವೆಯೆಂದರೆ ಈ ಚಿತ್ರೀಕರಣದ ಸಿರಿ ಸಮೃದ್ಧಿ ಪೂರ್ವಸಿದ್ಧತೆಗಳು ಎಷ್ಟಿರಬಹುದು!

ಮೋದಿಯವರ ಧ್ಯಾನವು ಪರೋಕ್ಷವಾಗಿ ಮತಗಳಿಗಾಗಿ ನಡೆಸಿರುವ ಚುನಾವಣಾ ಪ್ರಚಾರವಾಗಿದ್ದು, ಕ್ರಮ ಜರುಗಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಕಾಂಗ್ರೆಸ್ ಸಮಿತಿ ಮದ್ರಾಸ್ ಹೈಕೋರ್ಟನ್ನು ಕೋರಿದೆ.

Advertisements

ಚುನಾವಣಾ ಪ್ರಚಾರಕ್ಕೆ ಬುಧವಾರ ಸಂಜೆಯೇ ತೆರೆ ಬಿದ್ದಿದೆ. ಆದರೂ ಮತದಾನ ಮುಗಿಯುವ ತನಕವೂ ಪ್ರಚಾರದಲ್ಲಿರುವ ತಂತ್ರಗಳನ್ನು ಮೋದಿಯವರು ಕರಗತ ಮಾಡಿಕೊಂಡಿದ್ದಾರೆ. ಕಳೆದ ಸಲ ಕೇದಾರನಾಥದಲ್ಲಿ ಅವರ ಧ್ಯಾನದ ಚಿತ್ರಗಳು, ವಿಡಿಯೊಗಳು ಗೋದಿ ಮೀಡಿಯಾದಲ್ಲಿ ಅಬ್ಬರಿಸಿ ಕವಿದಿದ್ದವು. ‘ಬಹುಮುಖ್ಯ’ ಸುದ್ದಿಯಾಗಿ ಕೋಟಿ ಕೋಟಿ ಕಣ್ಣಾಲಿಗಳನ್ನು ಸೆಳೆದಿದ್ದವು.

2019ರ ಲೋಕಸಭಾ ಚುನಾವಣೆ ಪ್ರಚಾರ ಮುಕ್ತಾಯದ ನಂತರವೂ ಅವರು ಉತ್ತರಾಖಂಡದ ಕೇದಾರನಾಥ ಧಾಮಕ್ಕೆ ಎರಡು ದಿನಗಳ ಭೇಟಿ ನೀಡಿ ಅಲ್ಲಿನ ಗುಹೆಯೊಂದರಲ್ಲಿ ಕಾಷಾಯ ಧರಿಸಿ ನಡೆಸಿದ 15 ತಾಸುಗಳ ಏಕಾಂತವಾಸ ಭಾರೀ ಪ್ರಚಾರ ಪಡೆದಿತ್ತು.

‘ಮೆಡಿಟೇಷನ್’ ಅಲ್ಲವಿದು, ‘ಮೀಡಿಯಾಟೇಷನ್’. ಮತಗಳಿಗಾಗಿ ಮುಂದುವರೆಸಿರುವ ಚುನಾವಣಾ ಪ್ರಚಾರ. ಚುನಾವಣಾ ಆಚಾರ ಸಂಹಿತೆಯ ಉಲ್ಲಂಘನೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.

ಧ್ಯಾನದ ನಡುವೆಯೂ ಅವರು ಶುಕ್ರವಾರ ಮುಂಜಾನೆ ಟ್ವೀಟ್ ಮಾಡಿದ್ದಾರೆ. ರೀಮಲ್ ಚಂಡಮಾರುತವು ಅಸ್ಸಾಮ್, ಮಣಿಪುರ, ತ್ರಿಪುರ, ಮಿಜೋರಂ, ಮೇಘಾಲಯ ಹಾಗೂ ಪಶ್ಚಿಮ ಬಂಗಾಳದಲ್ಲಿ ಉಂಟು ಮಾಡಿರುವ ವಿನಾಶ ದುರದೃಷ್ಟಕರ ಎಂದಿದ್ದಾರೆ. ಪರಿಹಾರ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆಂದು ಭರವಸೆ ನೀಡಿದ್ದಾರೆ. ಈ ನೆಪದಿಂದಲಾದರೂ ಅವರು ಮಣಿಪುರವನ್ನು ನೆನೆದಿರುವುದು ಮೆಚ್ಚತಕ್ಕದ್ದು. ಮಣಿಪುರ ಹೊತ್ತಿ ಉರಿದರೂ ಅತ್ತ ತಲೆಹಾಕದ ಮೋದಿಯವರ ಮನಸಿನಲ್ಲಾದರೂ ಮಣಿಪುರ ಇದೆಯೆಂಬುದೇ ಸಮಾಧಾನದ ಸಂಗತಿ.

ಎರಡು ತಿಂಗಳ ಚುನಾವಣೆ ಪ್ರಚಾರದಲ್ಲಿ ಮ ಅಕ್ಷರದಿಂದ ಶುರುವಾಗುವ ಮಾಂಸ, ಮೀನು, ಮಂಗಳಸೂತ್ರ, ಮಹಿಷ, ಮುಜರಾ, ಮುಸ್ಲಿಮ್, ಮುಂತಾದ ಮುಸ್ಲಿಮ್ ದ್ವೇಷವನ್ನು ಬಿತ್ತುವ ಹಿಂದೂ-ಮುಸ್ಲಿಮ್ ಸಂವಾದವನ್ನೇ ಅವರು ಕಟ್ಟುತ್ತ ಬಂದಿದ್ದರು.

ಹಿಂದೀಯಲ್ಲಿ ಮ ಅಕ್ಷರದಿಂದ ಶುರುವಾಗುವ ಮತ್ತೊಂದು ಪದವಿದೆ. ಅದು ದೇಶದ ಬಹುತೇಕ ಜನರ ಬದುಕನ್ನು ಬೇಯಿಸುತ್ತಲಿದೆ. ಈ ಹಿಂದೀ ಪದ ‘ಮೆಹಂಗಾಯಿ’ಯ ಕನ್ನಡ ಅರ್ಥ ಬೆಲೆ ಏರಿಕೆ. ವಿಶೇಷವಾಗಿ ಕೋಟಿ ಕೋಟಿ ಬಡಜನರ ದೈನಂದಿನ ಬದುಕುಗಳನ್ನು ಮೂರಾಬಟ್ಟೆ ಮಾಡಿದೆ ಬೆಲೆ ಏರಿಕೆ. ದೇಶದ ಶೇ.80ಕ್ಕಿಂತಲೂ ಹೆಚ್ಚಿನ ಜನತೆಯನ್ನು ಕಾಡುತ್ತಿರುವ ಮತ್ತೊಂದು ಜ್ವಲಂತ ಸಮಸ್ಯೆ ನಿರುದ್ಯೋಗ. ಹಿಂದಿಯಲ್ಲಿ ‘ಬೇರೋಜ್ಗಾರಿ’ ಎಂದು ಕರೆಯುತ್ತಾರೆ. ಹಿಂದೀಯಲ್ಲೇ ಭಾಷಣ ಮಾಡುವ ಮೋದಿಯವರ ಬಾಯಿಂದ ‘ಬೇರೋಜ್ಗಾರಿ’. 2014ರ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಮೋದಿಯವರು ಯಥೇಚ್ಛವಾಗಿ ಬಳಸಿದ್ದ ಪದಗಳಿವು. ಆನಂತರ ಪ್ರಧಾನಿಯಾಗಿ ಹತ್ತು ವರ್ಷ ತುಂಬುತ್ತಿದೆ. ಬೆಲೆ ಏರಿಕೆ ಮತ್ತು ನಿರುದ್ಯೋಗದ ಸಮಸ್ಯೆಗಳು ಅವರ ಪಾಲಿಗೆ ಸಮಸ್ಯೆಗಳೇ ಅಲ್ಲ. ಹಿಂದು-ಮುಸ್ಲಿಮ್ ದ್ವೇಷವೇ ಅವರ ಪಾಲಿಗೆ ಪರಮ. ಮೆಹಂಗಾಯಿ- ಬೇರೋಜ್ಗಾರಿ ಪದಗಳು ತಪ್ಪಿಯೂ ಅವರ ಬಾಯಿಂದ ಹೊರಬಿದ್ದಿಲ್ಲ.

ಹಿಂದೂಮಹಾಸಾಗರ, ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯ ಸಂಗಮ ಕ್ಷೇತ್ರ ಕನ್ಯಾಕುಮಾರಿ. ಅಲ್ಲಿಂದ ಅರ್ಧ ಕಿ.ಮೀ.ದೂರದಲ್ಲಿರುವುದು ಸ್ವಾಮಿ ವಿವೇಕಾನಂದರು 132 ವರ್ಷಗಳ ಹಿಂದೆ ಜ್ಞಾನೋದಯ ಪಡೆದ ಶಿಲಾಗುಚ್ಛ.

1892ರಲ್ಲಿ ವಿವೇಕಾನಂದ ಕನ್ಯಾಕುಮಾರಿಯಿಂದ ಈ ಶಿಲಾಗುಚ್ಛವನ್ನು ಈಜಿ ತಲುಪಿದ್ದರು. ಈ ಧೀಮಂತ ಸನ್ಯಾಸಿ ಮೂರು ಹಗಲು ಮತ್ತು ಮೂರು ರಾತ್ರಿಗಳ ಕಾಲ ಧ್ಯಾನ ಮಾಡಿದರೆಂದು ಅವರ ಅನುಯಾಯಿಗಳು ಹೇಳುತ್ತಾರೆ. ನಾಲ್ಕು ವರ್ಷಗಳ ಕಾಲ ಭಾರತದ ಉದ್ದಗಲವನ್ನು ಸಂಚರಿಸಿದ ವಿವೇಕಾನಂದರ ತತ್ವಬೋಧೆ ಹರಳುಗಟ್ಟಿದ ತಾಣವಿದು. ‘ಹಸಿದ ಹೊಟ್ಟೆಗೆ ತತ್ವಬೋಧೆ ಸಲ್ಲದು. ನಮ್ಮ ಬಡಜನತೆ ಅಜ್ಞಾನದಿಂದಾಗಿ ಮೃಗಗಳಂತೆ ಬದುಕಿದ್ದಾರೆ. ಸರ್ವಕಾಲಕ್ಕೂ ಅವರ ರಕ್ತ ಹೀರುತ್ತ, ತುಳಿಯುತ್ತ ಬಂದಿದ್ದೇವೆ’ ಎಂದಿದ್ದರು ಅವರು.

vivekananda rock memorial
ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕ

ಮೋದಿಯವರು ತಮ್ಮನ್ನು ಸ್ವಾಮಿ ವಿವೇಕಾನಂದರ ಅಚ್ಚಿನಲ್ಲಿ ಎರಕ ಹೊಯ್ದುಕೊಳ್ಳಲು ಬಯಸುತ್ತಾರೆ. ಒಂದೊಮ್ಮೆ ತಾವು ರಾಮಕೃಷ್ಣ ಮಿಷನ್ನಿನ ಸದಸ್ಯರಾಗಿದ್ದನ್ನು ನೆನೆದಿದ್ದಾರೆ. ‘ತಾವು ಕಂಡಿದ್ದ ಭವ್ಯ ಭಾರತದ ಸ್ವಪ್ನವನ್ನು ಸಾಕಾರಗೊಳಿಸಲು ಭಾರತ ಶ್ರಮಿಸುತ್ತಿರುವುದನ್ನು ವಿವೇಕಾನಂದರು ಖಚಿತವಾಗಿಯೂ ಹೆಮ್ಮೆಯಿಂದ ಗಮನಿಸುತ್ತಿರುತ್ತಾರೆ’ ಎಂದು ಮೋದಿ ಕಳೆ ವರ್ಷ ಹೇಳಿದ್ದುಂಟು.

ದಕ್ಷಿಣದಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಊರಿಸುವ ಜೊತೆ ಜೊತೆಗೆ ಸ್ವಾಮಿ ವಿವೇಕಾನಂದರಂತಹ ಧೀಮಂತ ಹಿಂದೂ ಕಾಷಾಯಧಾರಿಯನ್ನು ಆವಾಹಿಸಿಕೊಳ್ಳುತ್ತಿದ್ದಾರೆ ಮೋದಿ. ದೇಶದ ಜನಮನ ತಮ್ಮನ್ನು ವಿವೇಕಾನಂದರಂತೆ ಸರಹದ್ದುಗಳನ್ನು ಮೀರಿದ ಹಿಂದೂ ಧೀಮಂತನಾಗಿ ನೋಡಬೇಕೆಂಬುದು ಅವರ ಅತ್ಯಾಸೆ ಮತ್ತು ಅಹವಾಲು. ಮತದಾನದ ಆಜೂಬಾಜಿನಲ್ಲೇ ಅವರು ಹೂಡಿರುವ ಈ ನಾಟಕೀಯ ದೃಶ್ಯಗಳ ಹಿಂದೆ ವಿವೇಕಾನಂದರು ಜನಿಸಿದ ನಾಡು ಪಶ್ಚಿಮ ಬಂಗಾಳದ ಕಡೆಯ ಹಂತದ ಮತದಾನ ನಡೆಯುತ್ತಿರುವ ಒಂಬತ್ತು ಲೋಕಸಭಾ ಕ್ಷೇತ್ರಗಳನ್ನು ಪ್ರಭಾವಿಸುವ ಅಪ್ಪಟ ಲೆಕ್ಕಾಚಾರವಿದೆ.

ಡಮ್ ಡಮ್, ಬಾರಾಸಾಟ್, ಬಸೀರ್ಹಾಟ್, ಜೊಯ್ ನಗರ್, ಮಥುರಾಪುರ್, ಡೈಮಂಡ್ ಹಾರ್ಬರ್, ಜಾಧವಪುರ್, ಕೊಲ್ಕತ್ತಾ ದಕ್ಷಿಣ ಹಾಗೂ ಕೊಲ್ಕತ್ತಾ ಉತ್ತರದ ಸೀಟುಗಳ ಪೈಕಿ ಬಿಜೆಪಿ 2019ರಲ್ಲಿ ಒಂದನ್ನೂ ಗೆದ್ದಿರಲಿಲ್ಲ. ಕಳೆದ ಮಂಗಳವಾರ ಕೊಲ್ಕತ್ತಾದಲ್ಲಿ ರೋಡ್ ಶೋ ಶುರು ಮಾಡುವ ಮುನ್ನ ಅವರು ಉತ್ತರ ಕೊಲ್ಕತ್ತಾದ ಶಿಮ್ಲಾ ರಸ್ತೆಯಲ್ಲಿರುವ ಸ್ವಾಮಿ ವಿವೇಕಾನಂದ ಅವರ ಪೂರ್ವಜರು ಬದುಕಿ ಬಾಳಿದ್ದ ಮನೆಗೆ ಭೇಟಿ ನೀಡಿದ್ದರು.

ಲೋಕಸಭೆಯ 543 ಸೀಟುಗಳ ಪೈಕಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣದಲ್ಲಿನ ಸಂಖ್ಯೆ 131. ಕ್ಷೇತ್ರಗಳಿವೆ. ತಮಿಳುನಾಡೊಂದೇ 39 ಸದಸ್ಯರನ್ನು ಲೋಕಸಭೆಗೆ ಕಳಿಸುತ್ತದೆ. ಕರ್ನಾಟಕದಲ್ಲಿ ಈಗಾಗಲೇ ನೆಲೆ ಕಂಡಿರುವ ಬಿಜೆಪಿಯನ್ನು ದಕ್ಷಿಣದ ಇತರೆ ರಾಜ್ಯಗಳಲ್ಲೂ ಬೇರೂರಿಸುವ ಹವಣಿಕೆ ಮೋದಿ ಮತ್ತು ಅವರ ಸಂಗಾತಿಗಳದು. ಹೀಗಾಗಿ ಕಳೆದ ಮೂರು ವರ್ಷಗಳಲ್ಲಿ ಅವರ ದಕ್ಷಿಣ ಭಾರತ ಪ್ರವಾಸ- ಭೇಟಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.

ಪ್ರತಿಪಕ್ಷಗಳು ಮೋದಿಯವರ ಕನ್ಯಾಕುಮಾರಿ ಧ್ಯಾನವನ್ನು ಬಕಧ್ಯಾನಕ್ಕೆ ಹೋಲಿಸಿವೆ. ಯಾರು ಬೇಕಾದರೂ ಹೋಗಿ ಧ್ಯಾನ ಮಾಡಬಹುದು, ಅದರಲ್ಲೇನಿದೆ? ಆದರೆ ಧ್ಯಾನ ಮಾಡುವವರ್ಯಾರೂ ಕ್ಯಾಮೆರಾಗಳನ್ನು ಜೊತೆಗೆ ಕರೆದೊಯ್ಯುವುದಿಲ್ಲ ಎಂದು ಅಣಕವಾಡಿದ್ದಾರೆ ಮಮತಾ ಬ್ಯಾನರ್ಜಿ.

ತಮ್ಮನ್ನು ಪರಮಾತ್ಮನ ಅಂಶ ಮತ್ತು ದೈವಾಂಶ ಸಂಭೂತ ಎಂದು ಕರೆದುಕೊಂಡವರಿಗೆ ಧ್ಯಾನದ ಅಗತ್ಯ ಎಲ್ಲಿದ್ದೀತು? ಆದರೂ ವಿನಮ್ರತೆ ತೋರಿದ್ದಾರೆ. ದ್ವೇಷ ಕಾರುವ ಚುನಾವಣಾ ಪ್ರಚಾರದ ನಂತರ ನಡೆಸುತ್ತಿರುವ ಈ ಧ್ಯಾನದಲ್ಲಿ ಅವರಿಗೆ ಸದ್ವಿವೇಕ ದೊರೆಯಲಿ. ದ್ವೇಷದ ಬೆಂಕಿಯಲ್ಲಿ ತಾವೂ ಬೇಯುತ್ತ ಹಿಂದೂ-ಮುಸ್ಲಿಮರನ್ನೂ ಬೇಯಿಸುತ್ತ ಬಂದವರ ದೇಹ ಮನಸುಗಳನ್ನು ಧ್ಯಾನವಾದರೂ ತಣಿಸಲಿ.

ವಾಹ್ ಮೋದೀಜೀ ವಾಹ್. ವಾಹ್ ಮೋದೀಜಿ ವಾಹ್! ಹಲವು ಭಾಷಣಗಳಲ್ಲಿ ಮೋದೀಜಿ ತಮ್ಮನ್ನು ತಾವೇ ಉದ್ದೇಶಿಸಿ ಮಾಡಿರುವ ಸ್ವಪ್ರಶಂಸೆಯ ಉದ್ಗಾರಗಳಿವು.

ಉಮಾಪತಿ ಡಿ
ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X