ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಪ್ರಧಾನಿ ಮೋದಿ ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಎರಡು ದಿನಗಳ ಧ್ಯಾನಕ್ಕೆ ತೆರಳಿದ್ದಾರೆ. ಅವರ ಧ್ಯಾನಕ್ಕಾಗಿ ಮಾಡಲಾದ ಎಲ್ಲ ಏರ್ಪಾಡುಗಳಿಗೆ ತಗುಲುವ ವೆಚ್ಚವನ್ನು ಬಿಜೆಪಿಯಿಂದ ವಸೂಲಿ ಮಾಡಲು ಮದ್ರಾಸ್ ಹೈಕೋರ್ಟ್ ಮಧ್ಯಸ್ಥಿಕೆ ಕೋರಿ ಕಾಂಗ್ರೆಸ್ ಅರ್ಜಿ ಸಲ್ಲಿಸಿದೆ.
ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ) ಸದಸ್ಯ ಎ.ಪಿ ಸೂರ್ಯಪ್ರಕಾಶ್ ನೇತೃತ್ವದ ವಕೀಲರ ತಂಡವು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. “ಪ್ರಧಾನಿ ಮೋದಿ ಅವರು ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕಕ್ಕೆ ವೈಯಕ್ತಿಕ ಭೇಟಿಗಾಗಿ ಬಂದಿದ್ದಾರೆ. ಭದ್ರತಾ ಅಂಶಗಳನ್ನು ಮರೆತು, ಮೋದಿಯವರ ಕನ್ನಿಕುಮಾರಿ ಭೇಟಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಭಾರಿ ಮೊತ್ತವನ್ನು ಖರ್ಚು ಮಾಡಿದೆ. ಆ ವೆಚ್ಚವನ್ನು ಬಿಜೆಪಿಯ ನಿಧಿಯಿಂದ ವಸೂಲಿ ಮಾಡಬೇಕಾಗಿದೆ” ಎಂದು ಸೂರ್ಯಪ್ರಕಾಶ್ ಹೇಳಿದ್ದಾರೆ.
“ಮೋದಿ ಅವರ ಧ್ಯಾನವು ಚುನಾವಣಾ ಪ್ರಚಾರದ ಭಾಗವಾಗಿದೆ. ಅವರು ಬಿಜೆಪಿಗೆ ಮತ ಸೆಳೆಯಲು ವಿವೇಕಾನಂದ ರಾಕ್‌ನಲ್ಲಿ ಮಾರುವೇಷ ಧರಿಸಿದ್ದಾರೆ. ಮೇ 30ರಂದು ಪ್ರಾರಂಭವಾದ ಮೋದಿಯವರ ಧ್ಯಾನವನ್ನು ದೂರದರ್ಶನ ಸೇರಿದಂತೆ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ. ಇದು, ವಿಪಕ್ಷಗಳಿಗೆ ಅನನುಕೂಲಕರವಾಗಿದೆ” ಎಂದು ಅವರು ಹೇಳಿದ್ದಾರೆ.
“ಅವರ ಕನ್ಯಾಕುಮಾರಿ ಭೇಟಿಗಾಗಿ ತಮಿಳುನಾಡು ರಾಜ್ಯ ಸರ್ಕಾರ ಖರ್ಚು ಮಾಡಿರುವ ಎಲ್ಲ ಹಣವನ್ನು ರಾಜ್ಯ ಸರ್ಕಾರವು ಬಿಜೆಪಿ ನಿಧಿಯಿಂದ ವಸೂಲಿ ಮಾಡುವಂತೆ ಹೈಕೋರ್ಟ್ ನಿರ್ದೇಶನ ನೀಡಬೇಕು. ಅದಕ್ಕಾಗಿ, ಮಧ್ಯಸ್ಥಿಕೆ ವಹಿಸಬೇಕು” ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.