ದಲಿತ ವಿದ್ಯಾರ್ಥಿ ನಾಯಕನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಗುಜರಾತ್ ಬಿಜೆಪಿ ಶಾಸಕ ಗೀತಾಬಾ ಜಡೇಜಾ ಅವರ ಪುತ್ರ ಗಣೇಶ್ ಜಡೇಜಾ ಮತ್ತು ಇತರರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾದ ಬಳಿಕ ಹಲ್ಲೆಗೊಳಗಾದ ವಿದ್ಯಾರ್ಥಿ ನಾಯಕನ ತಂದೆಗೆ ಜುನಾಗಢದ ಬಿಜೆಪಿ ಮುಖಂಡನೊಬ್ಬ ರಾಜಿ ಮಾಡಿಕೊಳ್ಳಲು ಆಮಿಷವೊಡ್ಡಿರುವ ಆಡಿಯೋ ರೆಕಾರ್ಡಿಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಲಿತ ಮತ್ತು ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ಸಂಘಟನೆಯ ನಾಯಕ ಸಂಜಯ್ ಸೋಲಂಕಿ ಅವರನ್ನು ಬಿಜೆಪಿ ಶಾಸಕನ ಪುತ್ರ ಗಣೇಶ್ ಜಡೇಜಾ ಮತ್ತು ಇತರರು ಅಪಹರಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂಜಯ್ ಅವರ ತಂದೆ ರಾಜು ಸೋಲಂಕಿ ಅವರಿಗೆ ಬಿಜೆಪಿ ಮುಖಂಡ, ಜುನಾಗಢದ ಉಪಮೇಯರ್ ಗಿರೀಶ್ ಕೋಟೆಚಾ ಕರೆ ಮಾಡಿ, ಆಮಿಷವೊಡ್ಡಿದ್ದಾರೆ ಎಂದು ಹೇಳಲಾಗಿದೆ.
“ನಿಮ್ಮ ಹುಡುಗ ಯಾರೊಂದಿಗಾದರೂ ಜಗಳವಾಡಿದ್ದಾನೆಯೇ? ರಾಜೀ ಮಾಡಿಕೊಳ್ಳಲು ನಿಮಗೆ ಸಿಗಬೇಕದ್ದು, ಸಿಗುತ್ತದೆ. ತೆಗೆದುಕೊಳ್ಳಬೇಕಾದದ್ದನ್ನು ತೆಗೆದುಕೊಳ್ಳಿ. ಆದರೆ ಸಮಸ್ಯೆಯನ್ನು ಪರಿಹರಿಸಿ” ಎಂದು ಕೋಟೆಚಾ ಆಮಿಷವೊಡ್ಡಿರುವುದು ಆಡಿಯೋ ರೆಕಾರ್ಡ್‌ನಲ್ಲಿ ಸೆರೆಯಾಗಿದೆ.
ಇದಕ್ಕೆ ಕೋಪದಿಂದ ಪ್ರತಿಕ್ರಿಯಿಸಿದ ಸೋಲಂಕಿ, “ಒಮ್ಮೆ ನಾನು ಅವನನ್ನು (ಬಿಜೆಪಿ ಶಾಸಕನ ಪುತ್ರ) ಕೋಲಿನಿಂದ ಹೊಡೆದ ಬಳಿಕ, ಸಮಸ್ಯೆಯನ್ನು ಪರಿಹರಿಸುತ್ತೇನೆ” ಎಂದು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಎಫ್‌ಐಆರ್‌ನ ಪ್ರಕಾರ, 26 ವರ್ಷದ ಸಂಜಯ್ ಸೋಲಂಕಿ ಗುರುವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ, ಜಡೇಜಾ ಅವರ ಕಾರು ಆತನ ಮೇಲೆರಗಿದಂತೆ ಹಾದು ಹೋಗಿದೆ. ಹೀಗಾಗಿ, ಸೋಲಂಕಿ ಎಚ್ಚರಿಕೆಯಿಂದ ಚಲಾಯಿಸುವಂತೆ ಚಡೇಜಾಗೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಜಡೇನಾ ಮತ್ತು ಅತನ ಸಂಗಡಿಗರು ಸೋಲಂಕಿಯನ್ನು ಹಿಂಬಾಲಿಸಿ, ಅತನ ಮನೆಯಲ್ಲಿಯೇ ಹಲ್ಲೆ ನಡೆಸಿದ್ದಾರೆ.