ಔರಾದ ಸಹಾಯಕ ಕೃಷಿ ನಿರ್ದೇಶಕ ಧುಳಪ್ಪ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಕಮಲನಗರ ರೈತ ಸಂಪರ್ಕ ಕೇಂದ್ರಕ್ಕೆ ತಮಗೆ ಬೇಕಾದವರಿಗೆ ಪ್ರಭಾರ ವಹಿಸಿಕೊಟ್ಟಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಯುನಿಟಿ ಮ್ಯೂವಮೆಂಟ್ ಆರೋಪಿಸಿದೆ.
ಔರಾದ ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಸುಭಾಷ ಲಾಧಾ ಹಾಗೂ ದಲಿತ ಯುನಿಟಿ ಮ್ಯೂವಮೆಂಟ್ ಸಂಸ್ಥಾಪಕ ವಿನೋದ ರತ್ನಾಕರ್ ನೇತ್ರತ್ವದಲ್ಲಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಕಮಲನಗರ ಕೃಷಿ ಅಧಿಕಾರಿ ವೈಜಿನಾಥ ಬಿರಾದಾರ ನಿವೃತ್ತರಾಗಿದ್ದು, ಅವರ ಸ್ಥಳದಲ್ಲಿ ಕೃಷಿ ಅಧಿಕಾರಿ ಸ್ವಾತಿ ಅವರಿಗೆ ಪ್ರಭಾರ ನೀಡಿದ್ದಾರೆ. ಇದು ಸಂಪೂರ್ಣ ನಿಯಮಬಾಹಿರ ಆಗಿರುವುದರಿಂದ ಸಹಾಯಕ ಕೃಷಿ ನಿರ್ದೇಶಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಕಮಲನಗರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೈಜಿನಾಥ ಬಿರಾದಾರ ನಿವೃತ್ತರಾದ ಹಿನ್ನೆಲೆಯಲ್ಲಿ ಜಂಟಿ ನಿರ್ದೇಶಕರಿಂದ ಅನುಮತಿ ಪಡೆದು ಠಾಣಾಕುಶನೂರ ಕೃಷಿ ಅಧಿಕಾರಿಗೆ ಪ್ರಭಾರ ವಹಿಸಿಕೊಡಲಾಗಿದೆ ಎಂದಿದ್ದಾರೆ.
“ಬೀದರ್ ಉಪ ಕೃಷಿ ನಿರ್ದೇಶಕ ರಾಘವೇಂದ್ರ ಅವರು ಅಧಿಕಾರ ಬಳಸಿ ನಿಯಮಬಾಹಿರವಾಗಿ ಸಂತಪುರ ಹಾಗೂ ಕಮಲನಗರ ಹೆಚ್ಚುವರಿ ಬೀಜ ವಿತರಣೆ ಕೇಂದ್ರಕ್ಕೆ ಕಾರ್ಯಭಾರ ವಹಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜೂ. 7ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಸಂವಿಧಾನದ 371(ಜೆ) ಕಲಂಗೆ ವಿರೋಧ; ಕಲಬುರಗಿಯಲ್ಲಿ ಸಿಡಿದ ಆಕ್ರೋಶ
ಈ ಸಂದರ್ಭದಲ್ಲಿ ಪ್ರಮುಖರಾದ ಗಣಪತಿ ವಾಸುದೇವ, ರಾಹುಲ್ ಖಂದಾರೆ, ಕಪಿಲ್ ಗೋಡಬಲೆ ಹಾಗೂ ದಮ್ ಸಂಘಟನೆಯ ರಾಜ್ಯಾಧ್ಯಕ್ಷ ಪ್ರಕಾಶ ರಾವಣ ಸೇರಿದಂತೆ ಗೌತಮ್ ಡಾಕುಳಗಿ, ಭಾಗವತ ಭೂತಾಳೆ ಇದ್ದರು.