ಉತ್ತರ ಕರ್ನಾಟಕದ ಕಲಾವಿದರು ಕೃಷ್ಣ ಪಾರಿಜಾತ ಜಾನಪದ ಕಲೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ್ದಾರೆ. ಈ ಜಾನಪದ ಕಲೆಗೆ ಸುಮಾರು 150 ವರ್ಷಗಳ ಇತಿಹಾಸವಿದೆ. ಸಂಗೀತವೇ ಕೃಷ್ಣ ಪಾರಿಜಾತದ ಜೀವಾಳ. ಇದೊಂದು ರಮ್ಯವಾದ ಗೀತರೂಪಕವಾಗಿದ್ದು, ಸ್ಮರಣ ಶಕ್ತಿ ಹಾಗೂ ಮೌಖಿಕ ಪರಂಪರೆಯೇ ಜಾನಪದ ಕಲಾವಿದರ ಆಸ್ತಿಯಾಗಿದೆ ಎಂದು ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ಧಾರವಾಡ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾ ಮಂಟಪವು ಕೃಷ್ಣ ಪಾರಿಜಾತದಲ್ಲಿ ಭಗವದ್ಗೀತೆ ಉಪನ್ಯಾಸ ಹಾಗೂ ಕೃಷ್ಣ ಪಾರಿಜಾತದ ಕೊರವಂಜಿ ಭಾಗ ಪ್ರದರ್ಶನದ ನಡೆಸಿದ ವೇಳೆ ಮಾತನಾಡಿದರು.
“ಕೃಷ್ಣನು ಪಾರಿಜಾತದ ಪುಷ್ಪವನ್ನು ರುಕ್ಮಿಣಿಗೆ ನೀಡಿದಾಗ ಅದನ್ನು ತಿಳಿದ ಸತ್ಯಭಾಮೆ ಕೋಪಿಸಿಕೊಂಡಾಗ ಕೃಷ್ಣನು ಸತ್ಯಭಾಮೆಯನ್ನು ಸಂತೈಸುವ ಪರಿ, ಅವನಾಡಿದ ನಾಟಕ ಪ್ರಸಂಗ ಕೃಷ್ಣ ಪಾರಿಜಾತದಲ್ಲಿ ಮನೋಜ್ಞವಾಗಿ ಮೂಡಿಬಂದಿದೆ. ಇದು ಕೃಷ್ಣನ ಲೀಲೆಯನ್ನೊಳಗೊಂಡ ಒಂದು ಬಯಲಾಟವಾಗಿದೆ” ಎಂದರು.
ಮಲ್ಲಿಕಾರ್ಜುನ ದಾದನಟ್ಟಿ ಅವರು ಕೃಷ್ಣ ಪಾರಿಜಾತದ ಭಗವದ್ಗೀತೆಯ ಆಯ್ದ ಪ್ರಸಂಗಗಳು ಮತ್ತು ಸಾರವನ್ನು ಉಪನ್ಯಾಸದಲ್ಲಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ತಂಬಾಕು ಸೇವನೆ ಹಲವು ರೋಗಗಳಿಗೆ ಆಹ್ವಾನ ಕೊಟ್ಟಂತೆ: ವೀಣಾ ಎನ್
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ಧನವಂತ ಹಾಜವಗೋಳ, ವಿಷಯಾ ಜೇವೂರ, ಆಶಾ ಸಯ್ಯದ್, ಸುನಿತಾ ವಾಸರದ, ಮಲ್ಲಿಕಾರ್ಜುನ ಹಿರೇಮಠ, ನಿಂಗಣ್ಣ ಕುಂಟಿ, ಎಂ ಎಸ್ ನರೇಗಲ್, ಸಂಗಮೇಶ ಮೆಣಸಿನಕಾಯಿ ಇದ್ದರು.
