ತುಮಕೂರು | ಮುಟ್ಟಿನ ಅಂಧತ್ವ ಕಳೆದುಕೊಳ್ಳದ ಗೊಲ್ಲರಹಟ್ಟಿಗಳು; ಚಿಕ್ಕನಾಯಕನಹಳ್ಳಿಯಲ್ಲಿ ಮಗು, ಬಾಣಂತಿ ರಕ್ಷಣೆ

Date:

Advertisements

ಗೊಲ್ಲರಹಟ್ಟಿಗಳ ಕೆಲವು ಕಾಡುಗೊಲ್ಲರಲ್ಲಿಯಲ್ಲಿ ಇಂದಿಗೂ ಆಚರಣೆಯಲ್ಲಿರುವ ಹೆರಿಗೆ ಮತ್ತು ಮುಟ್ಟಿನ ಸಹಜ ಜೈವಿಕಕ್ರಿಯೆಗೆ ಒಳಗಾದ ಹೆಣ್ಣುಮಕ್ಕಳನ್ನು ʼಊರಾಚೆಗಿನ ಪಾಕೆ’ಗಳಲ್ಲಿ ಇಡುವ ಮುಟ್ಟು-ಹೆರಿಗೆ ಅನಿಷ್ಟ ಪದ್ಧತಿಯನ್ನು ನಿರ್ಬಂಧಿಸುವ ಕೆಲಸ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಜರುಗಿದೆ.

ತಾಲೂಕಿನ ದಸೂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಲ್ಲಪ್ಪನಹಟ್ಟಿ ಎಂಬ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ನಾಡಿನ ಪ್ರಗತಿಪರರು ಮತ್ತು ಚಿಂತಕರುಗಳ ಪುಟ್ಟ ತಂಡವೊಂದು ಅನಿಷ್ಟ ಪದ್ಧತಿ ಆಚರಣೆ ವಿರುದ್ಧ ಜಾಗೃತಿ ಮೂಡಿಸುವ ಸಭೆ ನಡೆಸುವಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಜಾಗೃತಿ ತಂಡ ಹುಳಿಯಾರು ಟೌನ್ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಬಸವರಾಜು ಅವರಿಗೆ ಮಾಹಿತಿ ನೀಡಿದೆ.

ತಿಳುವಳಿಕೆತಿಳುವಳಿಕೆ 1ಜಾಗೃತಿ ಸಭೆ 1ರಕ್ಷಣೆ

ಸಬ್ ಇನ್ಸ್‌ಪೆಕ್ಟರ್ ಬಸವರಾಜು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಊರಾಚೆಗಿನ ಹೊಲದ ಪಾಕೆಯಲ್ಲಿ ಬಿಟ್ಟಿದ್ದ ಒಂಟಿ ಬಾಣಂತಿ ಮತ್ತು ಆಕೆಯ ಮಗುವನ್ನು ಮತ್ತೆ ಊರೊಳಗಿನ ಆಕೆಯ ಮನೆಗೆ ಸುರಕ್ಷಿತವಾಗಿ ಸೇರಿಸಿದ್ದಾರೆ. ಬಳಿಕ ಊರಿನ ಎಲ್ಲರನ್ನೂ ಸೇರಿಸಿ ಜಾಗೃತಿ ಮತ್ತು ಅರಿವು ನಡಿಗೆ ನಡೆಸಿದ್ದಾರೆ. ಇಂಥ ಯಾವುದೇ ಬಗೆಯ ಮಹಿಳಾ ವಿರೋಧಿ ಅನಿಷ್ಟ ಪದ್ಧತಿಗಳನ್ನು ಆಚರಿಸದಂತೆ ಕಾನೂನಾತ್ಮಕವಾಗಿ ಎಚ್ಚರಿಕೆ ನೀಡಿದ್ದಾರೆ.

Advertisements

ತಾಯಿ ಮಗುವಿದ್ದ ಗುಡಿಸಲು

“ಇನ್ನು ಮುಂದೆ ನಮ್ಮ ಊರಿನಲ್ಲಿ ಇಂಥ ಘಟನೆ ಮರುಕಳಿಸದಂತೆ ನಾವು ಮಹಿಳಾ ಸಮಾನತೆ ಮತ್ತು ಮಹಿಳೆಯ ಗೌರವ ನೀಡಿಕೆಗೆ ಬದ್ಧರಾಗಿರುತ್ತೇವೆ. ಅಂಥದ್ದೇನಾದರೂ ಅನಿಷ್ಟ ಆಚರಣೆ ಕಂಡುಬಂದಲ್ಲಿ ಸ್ವತಃ ನಾವೇ ಪೊಲೀಸರು ಮತ್ತು ‌ಸಂಬಂಧಪಟ್ಟ ಇಲಾಖೆಗಳ ‌ಗಮನಕ್ಕೆ ತರುತ್ತೇವೆ” ಎಂದು ಹಟ್ಟಿಯ ಜನ ವಾಗ್ದಾನ ನೀಡಿ ಸಬ್‌ಇನ್ಸ್‌ಪೆಕ್ಟರ್ ಹಾಗೂ ಅಲ್ಲಿದ್ದ ಪ್ರಗತಿಪರ ಮುಖಂಡರ ಜೊತೆಗೆ ಸಾಮೂಹಿಕವಾಗಿ ಪ್ರಮಾಣ ಸ್ವೀಕರಿಸಿ ವಚನ ನೀಡಿದರು.

ಪ್ರಮಾಣ ಸ್ವೀಕಾರ

“ದಸೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಲಪ್ಪನಹಟ್ಟಿಯಲ್ಲಿ ಎಸ್‌ಎಸ್‌ಎಲ್‌ಸಿ ಬಳಿಕ ಕಾಲೇಜು ಮೆಟ್ಟಿಲೇರಿರುವ ಒಂದೇ ಒಂದು ಹೆಣ್ಣುಮಗಳೂ ಸಿಗಲಾರಳು. ಅದೇ ರೀತಿ ಒಬ್ಬನೇ ಒಬ್ಬ ಗಂಡು ಹುಡುಗನೂ ಸಿಗಲಾರನು. ಯಾಕೆಂದರೆ, ಪ್ರೌಢಶಾಲೆ ಮುಗಿಸಿದ ಹೆಣ್ಣುಮಕ್ಕಳನ್ನು ವಯಸ್ಸಿಗಿಂತ ಮುಂಚೆಯೇ ಇಲ್ಲಿ ಮದುವೆ ಮಾಡಲಾಗುತ್ತಿದೆ. ಗೊಲ್ಲರಹಟ್ಟಿಗಳಲ್ಲಿ ಬಾಲ್ಯ ವಿವಾಹಗಳು ಅವ್ಯಾಹತವಾಗಿ ನಡೆಯುತ್ತಿವೆ. ಹೈಸ್ಕೂಲ್ ಡ್ರಾಪ್ ಔಟ್ಸ್ ಎಂಬುದು ಇಲ್ಲಿ ಸಾಮಾನ್ಯವಾಗಿಬಿಟ್ಟಿದೆ” ಎಂದು ಡಾ.ಜಿ ಪ್ರೇಮಾ ಬೇಸರ ವ್ಯಕ್ತಪಡಿಸಿದರು.

ಡಾ ಜಿ ಪ್ರೇಮಾಜಿ ಪ್ರೇಮಾ ಮಾತುಕತೆಜಿ ಪ್ರೇಮಾಜಿ ಪ್ರೇಮಾ ಮಾತುಕತೆ 1

ಚಿಕ್ಕನಾಯಕನಹಳ್ಳಿ ತಹಶೀಲ್ದಾರ್‌ ಪಿ ವಿ ವಿನಾಯಕ ಸಾಗರ್ ಮಾತನಾಡಿ, “ತಾಲೂಕು ಆಡಳಿತದ ಕಡೆಯಿಂದ ಶಿಶು ಮತ್ತು ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆ ನಿರಂತರವಾಗಿ ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಆದರೂ, ಬಲ್ಲಪ್ಪನಹಟ್ಟಿಯಲ್ಲಿ ಭಾನುವಾರ ನಡೆದಿರುವ ಘಟನೆ ದುರದೃಷ್ಟಕರ. ಶೀಘ್ರದಲ್ಲೇ ಗ್ರಾಮಕ್ಕೆ ಭೇಟಿ ನೀಡಿ ಹೆರಿಗೆ-ಮುಟ್ಟು ಅನಿಷ್ಟ ಪದ್ಧತಿಯ ವಿರುದ್ಧ ಅರಿವು ಕಾರ್ಯಕ್ರಮಗಳನ್ನು ತೀವ್ರಗೊಳಿಸಲಾಗುವುದು. ಕಾನೂನಿನಲ್ಲಿ ಅವಕಾಶವಿರುವ ಕಠಿಣ ಕ್ರಮಗಳನ್ನು ಜರುಗಿಸಲಾಗುವುದು. ಮುಖ್ಯವಾಗಿ ಸಮಾಜದ ಎಲ್ಲರ ಸಹಕಾರದಿಂದಲೇ ಇಂಥ ಅನಿಷ್ಟ ಮೌಢ್ಯಾಚರಣೆಗಳು ಕೊನೆಗೊಳ್ಳಬೇಕು” ಎಂದು ಮನವರಿಕೆ ಮಾಡಿದರು.

ಚಿಕ್ಕನಾಯಕನಹಳ್ಳಿ ತಹಶೀಲ್ದಾರ್‌ ಪಿ ವಿ ವಿನಾಯಕ ಸಾಗರ್
ಚಿಕ್ಕನಾಯಕನಹಳ್ಳಿ ತಹಶೀಲ್ದಾರ್‌ ಪಿ ವಿ ವಿನಾಯಕ ಸಾಗರ್

ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯತ್‌ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವಸಂತ್ ಕುಮಾರ್ ಮಾತನಾಡಿ, “ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯತ್ ಹಾಗೂ ಶಿಶು ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಎಷ್ಟೆಲ್ಲಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಕೂಡಾ ಮತ್ತೆ ಮತ್ತೆ ಹೀಗಾಗುತ್ತಿದೆ. ಇಲಾಖೆಯ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಇನ್ನಷ್ಟು ಹೆಚ್ಚಿಸಿ ಹಟ್ಟಿಗಳಲ್ಲಿ ಹೆಚ್ಚಿನ ಎಚ್ಚರ ವಹಿಸಲಾಗುವುದು” ಎಂದು ಭರವಸೆ ನೀಡಿದರು.

ತಾಲೂಕು ಪಂಚಾಯತ್‌ ಎಇಒ ವಸಂತ್‌ ಕುಮಾರ್
ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯತ್‌ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವಸಂತ್ ಕುಮಾರ್

ಶಿಶು ಮತ್ತು ಮಹಿಳಾ ಕಲ್ಯಾಣಾಧಿಕಾರಿ ಹೊನ್ನಪ್ಪ ಮಾತನಾಡಿ, “ನ್ಯಾಯಾಧೀಶರ ಜತೆಗೆ ಇಲಾಖೆ ಹಟ್ಟಿ ಹಟ್ಟಿಗೂ ತೆರಳಿ ಜಾಗೃತಿ ಮತ್ತು ಅರಿವು ಶಿಬಿರಗಳನ್ನು ನಡೆಸುತ್ತಲೇ ಇದೆ. ಆದರೂ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುವುದು ವಿಷಾದನೀಯ. ಇನ್ನು ಮುಂದೆ ಇಂತಹ ಘಟನೆಗಳು ಮತ್ತೆ ಜರುಗದಂತೆ ಕಟ್ಟೆಚ್ಚರ ವಹಿಸಲಾಗುವುದು” ಎಂದರು.

ಹುಳಿಯಾರು ಟೌನ್‌ ಸಬ್‌ ಇನ್ಸ್‌ಪೆಕ್ಟರ್‌

ಹುಳಿಯಾರು ಟೌನ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಬಸವರಾಜ್ ಮಾತನಾಡಿ, “ಈ ಅನಿಷ್ಟ ಪದ್ಧತಿಯನ್ನು ಆಚರಿಸುವವರ ವಿರುದ್ಧ ವ್ಯಕ್ತಿ ಸ್ವಾತಂತ್ರ್ಯದ ದಮನ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ, ವ್ಯಕ್ತಿಯ‌ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಿದ ಆರೋಪ, ಲಿಂಗ ತಾರತಮ್ಯ, ಮಾನವ ಹಕ್ಕುಗಳ ಹರಣ, ಮಹಿಳಾ ದೌರ್ಜನ್ಯ, ಮಕ್ಕಳ ಮೇಲಿನ ದೌರ್ಜನ್ಯದಂತಹ ಅಪರಾಧಿಕ ಪ್ರಕರಣಗಳಡಿ ಮೊಕದ್ದಮೆ ದಾಖಲಿಸಲು ಅವಕಾಶವಿದೆ. ಅಪರಾಧಿಗೆ ಕಠಿಣ ದಂಡನೆಗಳೂ ಇವೆ” ಎಂದು ಕಾನೂನಿನ ಎಚ್ಚರಿಕೆ ನೀಡುವುದರ ಜತೆಗೆ ಹಟ್ಟಿಗರ ಮನವೊಲಿಸಿದರು.

ಪತ್ರಕರ್ತ ಮತ್ತು ಅಲೆಮಾರಿ ಬುಡಕಟ್ಟು ಮಹಾಸಭಾ ತುಮಕೂರು ಜಿಲ್ಲಾಧ್ಯಕ್ಷ ಉಜ್ಜಜ್ಜಿ ರಾಜಣ್ಣ ಮಾತನಾಡಿ, “ಪ್ರೌಢ ಶಾಲೆಗಳಲ್ಲಿರುವ ಮಕ್ಕಳ ಸುರಕ್ಷಾ ಸಮಿತಿಗಳು ಸಂಪೂರ್ಣ ನಿಷ್ಕ್ರಿಯಗೊಂಡಿವೆ. ಕನಿಷ್ಟ ಸುರಕ್ಷತೆಯ ಅರಿವು ಸಭೆಗಳಾಗಲಿ, ಮಕ್ಕಳ ಕುಂದು-ಕೊರತೆ ಸಭೆಗಳಾಗಲಿ ಜರುಗುತ್ತಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಈ ಬಗ್ಗೆ ಗಮನವೇ ಹರಿಸಿದಂತೆ ಕಾಣುತ್ತಿಲ್ಲ” ಎಂದು ದೂರಿದರು.

ಪತ್ರಕರ್ತ ಉಜ್ಜಜ್ಜಿ ರಾಜಣ್ಣ
ಪತ್ರಕರ್ತ ಮತ್ತು ಅಲೆಮಾರಿ ಬುಡಕಟ್ಟು ಮಹಾಸಭಾ ತುಮಕೂರು ಜಿಲ್ಲಾಧ್ಯಕ್ಷ ಉಜ್ಜಜ್ಜಿ ರಾಜಣ್ಣ

“ಎತ್ತಪ್ಪ ಮತ್ತು ಚಿತ್ತ್ರಯ್ಯ(ಚಿತ್ರಲಿಂಗೇಶ್ವರ) ದೇವರುಗಳ ಕೆಂಗಣ್ಣಿಗೆ ಗುರಿಯಾಗುವ ಭಯದಿಂದ ಆಚರಿಸಲಾಗುವ ಮುಟ್ಟು-ಹೆರಿಗೆ ಅನಿಷ್ಟ ಪದ್ಧತಿಯಿದು. ಇದು ಮೌಢ್ಯಾಚರಣೆಯ ಅನಿಷ್ಟ ಸಂಪ್ರದಾಯ. ಇದರಿಂದ ಮಹಿಳೆಯನ್ನು ಆಕೆ ಮಹಿಳೆ ಎಂಬ ಕಾರಣಕ್ಕೇ ಅಪಮಾನಿಸಲಾಗುತ್ತಿದೆ. ಇಲ್ಲಿ ಸ್ಪಷ್ಟವಾದ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ. ತಹಶೀಲ್ದಾರ್, ತಾ ಪಂ ಎಇಒ, ಸಿಡಿಪಿಒ, ಪೊಲೀಸ್ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯ ಹೊಣೆಗಾರಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಇದು ಸಲ್ಲದು” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎಸ್‌ ಕಾಂತರಾಜು
ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎಸ್ ಕಾಂತರಾಜು

ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎಸ್ ಕಾಂತರಾಜು ಮಾತನಾಡಿ, “ತಾಲೂಕಿನ ದಸೂಡಿ-ದಬ್ಬಗುಂಟೆ ಭಾಗದ ಎಲ್ಲ ಶಾಲೆಗಳಲ್ಲಿ ಮಕ್ಕಳ ಸುರಕ್ಷಾ ಸಮಿತಿಗೆ ವಿಶೇಷ ಒತ್ತು ನೀಡಲಾಗುವುದು. ಆ ಭಾಗದ ಶಾಲೆಗಳಿಗೆ ಸತತ ಭೇಟಿ ನೀಡುವುದರ ಮೂಲಕ ಸುರಕ್ಷಾ ಸಮಿತಿಯ ಕೆಲಸಗಳ ಮೇಲೆ ತೀವ್ರ ನಿಗಾ ಇಡಲಾಗುವುದು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ಗ್ರಾಮಾಂತರ | ಫೋಟೋಗ್ರಫಿ, ವಿಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ; ಜು.20 ಕೊನೆಯ ದಿನ

ಡೆಕ್ಕನ್ ಹೆರಾಲ್ಡ್ ಸಮೂಹ ನೀಡುವ ಪ್ರಶಸ್ತಿಗೆ‌ ಭಾಜನರಾಗಿರುವ ಮಹಿಳಾ ಮತ್ತು ಜನಪರ ಕಾರ್ಯಕರ್ತೆ ಡಾ.ಜಿ ಪ್ರೇಮಾ, ಪತ್ರಕರ್ತ ಉಜ್ಜಜ್ಜಿ ರಾಜಣ್ಣ, ಚಿಂತಕ ರಘುಪತಿ, ಸಮಾನತೆಯ ಹೋರಾಟಗಾರ ಕೂನಿಕೆರೆ ರಾಮಣ್ಣ, ಅಂಗನವಾಡಿ ಕಾರ್ಯಕರ್ತೆ ಸುನಂದಮ್ಮ, ಸಂಪತ್ ಕುಮಾರ್, ಅಂಕಸಂದ್ರ ರಾಜಪ್ಪ, ಈರೇಗೌಡ, ಗ್ರಾಮ ಪಂಚಾಯತಿ ಹಾಲಿ ಸದಸ್ಯ ಸಿದ್ಧಪ್ಪ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಚಿಕ್ಕಣ್ಣ ಮತ್ತಿತರ ಗ್ರಾಮಸ್ಥರು ಸೇರಿ ಕಟ್ಟಿಕೊಂಡಿರುವ ಕಾಡುಗೊಲ್ಲ ಸಮಾನಮನಸ್ಕ ವೇದಿಕೆಯ ಮೂಲಕ ಹಟ್ಟಿ ಅರಿವು ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಪ್ರಮುಖವಾಗಿ ಇವರು ಕ್ರಿಯಾಶೀಲರಾಗಿದ್ದಾರೆ.

ವಿಶೇಷ ವರದಿ : ನಾಸೆರ್ ಸೈಯ್ಯದ್ ಹುಸೇನ್

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X