ಕೇರಳದಲ್ಲಿ ಕೇರಳ ಕುರಿ, ಕೋಳಿ, ಮೇಕೆ, ಎಮ್ಮೆ ಬಲಿಯ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಇನ್ನೊಂದು ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಇವರು ಪ್ರತಿಯೊಂದಕ್ಕೂ ಎಸ್ಐಟಿ ರಚನೆ ಮಾಡಿ ತನಿಖೆ ಮಾಡಿಸುತ್ತಾರೆ ಅಲ್ಲವೇ? ಬಲಿ ವಿಷಯಕ್ಕೂ ತನಿಖೆ ಮಾಡಿಸಲಿ” ಎಂದು ಲೇವಡಿ ಮಾಡಿದರು.
“ಡಿಕೆ ಶಿವಕುಮಾರ್ ನೀಡಿರುವ ನೀಡಿಕೆ ಅಲ್ಲವೇ? ನಾನು ಮಾಧ್ಯಮಗಳ ಮೂಲಕವೇ ಗಮನಿಸಿದೆ. ಸಿಎಂ ಮತ್ತು ನನ್ನ ವಿರುದ್ಧ ಮಾಡಿಸುತ್ತಿರುವ ಶತ್ರು ಭೈರವಿ ಯಾಗ ಎಂದು ಹೇಳಿದ್ದಾರೆ. ಸಿಎಂ, ಡಿಸಿಎಂ ವಿರುದ್ಧ ವಾಮಾಚಾರ ಎಂದರೆ ಸಾಮಾನ್ಯವೇ? ಹಾಗಾಗಿ ಅದರ ತನಿಖೆಗೂ ಒಂದು ಎಸ್ಐಟಿ ರಚನೆ ಮಾಡಲಿ” ಎಂದು ಕುಟುಕಿದರು.
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು
“ಡಿಸಿಎಂ ಅವರು ಹೇಳಿದ್ದಾರೆ. ಇದು ಮಾಟ ಮಂತ್ರ ಎಂದು ಕಥೆ ಕಟ್ಟಿದ್ದಾರೆ. ಅವರ ಅಷ್ಟೂ ಹೇಳಿಕೆಯನ್ನು ಗಮನಿಸಿದ್ದೇನೆ. ಒಂದು ಮಾತನ್ನು ಹೇಳಲು ಬಯಸುತ್ತೇನೆ. ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡುʼ ದಾಸಶ್ರೇಷ್ಠ ಪುರಂದರದಾಸರು ರಚಿಸಿರುವ ಪದವಿದು. ಅವರು ಹೇಳಿಕೆ ಕೊಡುವ ಮುನ್ನ ತಾವು ಅಲಂಕರಿಸಿರುವ ಹುದ್ದೆಯ ಘನತೆ ಅರಿಯಬೇಕಿತ್ತು. ಅವರಿಗೆ ಆ ಸ್ಥಾನದ ಮೌಲ್ಯ ಇನ್ನೂ ಅರ್ಥವಾಗಿಲ್ಲ” ಎಂದು ಅವರು ಟೀಕಿಸಿದರು.
‘ಲೋಕದ ಡೊಂಕ ನೀವೇಕೆ ತಿದ್ದುವಿರಿ..’ ಎಂದು ಈ ಹಿಂದೆ ಡಿಕೆಶಿ ಹೇಳಿದ್ದ ವಚನವನ್ನು ಉಲ್ಲೇಖಿಸಿ ಟಾಂಗ್ ಕೊಟ್ಟ ಕುಮಾರಸ್ವಾಮಿ ಅವರು, “ನಾನು ಅವರ ಮಾತನ್ನು ಅವರಿಗೇ ಹೇಳಲು ಬಯಸುತ್ತೇನೆ. ಮೊದಲು ನಿಮ್ಮ ಮನಸ್ಸು ಶುದ್ಧ ಮಾಡಿಕೊಳ್ಳಿ. ಅದೆಂತದೋ ಶತ್ರು ಭೈರವಿ ಯಾಗವಂತೆ. ಅವರಿಗೆ ಭಕ್ತಿ ಇದೆಯಂತೆ. ಪವಿತ್ರ ಪುಣ್ಯಕ್ಷೇತ್ರ ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಾನಕ್ಕೆ ಅವರೂ ಹೋಗಿದ್ದಾರೆ. ಅವರಿಗೆ ಈ ಯಾಗದ ಬಗ್ಗೆ ಪೂರ್ಣ ಮಾಹಿತಿ ಇರಬೇಕು. ಅಲ್ಲಿ ಯಾವ ರೀತಿಯ ಪೂಜೆ ನಡೆಯುತ್ತದೆ? ಆ ಕ್ಷೇತ್ರ ಮಹಿಮೆ ಏನು ಎನ್ನುವುದು ಅವರಿಗೆ ತಿಳಿದಿರುತ್ತದೆ ಅಲ್ಲವೇ? ಹಾಗಿದ್ದರೂ ಅವರು ಸುಳ್ಳು ಹೇಳಿ ರಾಜರಾಜೇಶ್ವರಿ ಅಮ್ಮನವರಿಗೆ ಅಪಪ್ರಚಾರ ಎಸಗಿದ್ದಾರೆ” ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
“ನಮ್ಮ ಕುಟುಂಬದ ಮೇಲೆ ಏನೆಲ್ಲಾ ಚಿತಾವಣೆ ನಡೆಸುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ನಮ್ಮ ಕುಟುಂಬದಲ್ಲಿ ಕುರಿ, ಮೇಕೆ, ಎಮ್ಮೆ, ಕೋಣ ಕಡಿಯೋದು ಯಾವತ್ತೂ ನಡೆದಿಲ್ಲ. ಅಂತಹ ಸಂಪ್ರದಾಯ ನಮ್ಮ ಕುಟುಂಬದಲ್ಲಿ ಇಲ್ಲ. ಪ್ರತಿ ತಿಂಗಳು ನಾನು ಜೆಪಿ ನಗರದಲ್ಲಿರುವ ಶ್ರೀ ತಿರುಮಲಗಿರಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುತ್ತೇನೆ. ನಮ್ಮ ತಂದೆಯವರು ಪೂಜೆ ಮಾಡಿಸುತ್ತಾರೆ. ಇನ್ನೊಬ್ಬರಿಗೆ ಕೇಡು ಬಯಿಸಲು ಪೂಜೆ ಮಾಡಿಲ್ಲ, ಮಾಡುವುದೂ ಇಲ್ಲ” ಎಂದರು.
