ಸರ್ಕಾರದ ಆದೇಶವಿಲ್ಲದೆ ಸವರ್ಣಿಯ ವ್ಯಕ್ತಿಯೋರ್ವ ಮೊಬೈಲ್ ಟವರ್ ನಿರ್ಮಿಸಿದ್ದು, ಇದರಿಂದ ಮಕ್ಕಳು, ವೃದ್ಧರು ಸೇರಿದಂತೆ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ದಸಂಸ ಕಾರ್ಯಕರ್ತರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ತಹಶೀಲ್ದಾರ್ ಪರಶುರಾಂ ಸತ್ತಿಗೇರಿ ಅವರಿಗೆ ದೂರು ನೀಡಿದ್ದಾರೆ.
“ತಾಲೂಕಿನ ಬೋತಂಗಳ್ಳಿ ಗ್ರಾಮದ ದಲಿತ ಕಾಲೋನಿ ನಿವಾಸಿಗಳು ವಾಸಿಸುತ್ತಿರುವ ಪಕ್ಕದಲ್ಲಿ ಏರ್‌ಟೆಲ್ ಕಂಪನಿಯ ಮೊಬೈಲ್ ಟವರ್ ಅಳವಡಿಸಿರುವುದರಿಂದ ಸ್ಥಳೀಯರು ತೊಂದರೆಯಾಗಬಹುದೆಂಬ ಆತಂಕದಲ್ಲಿದ್ದಾರೆ” ಎಂದರು.
“ಸಾರ್ವಜನಿಕರ ಸ್ಥಳದಲ್ಲಿ ಏರ್‌ಟೆಲ್ ಕಂಪನಿಯ ಮೊಬೈಲ್ ಟವರ್ ಅಳವಡಿಸಲು ಯಾವುದೇ ಸರ್ಕಾರದ ಆದೇಶವಿಲ್ಲದೆ ಸವರ್ಣೀಯ ತಮ್ಮಡಿಗೌಡರ ಪುತ್ರ ಪುಟ್ಟೇಗೌಡ ದಲಿತ ನಿವಾಸಿಗಳು ವಾಸಿಸುತ್ತಿರುವ ಪಕ್ಕದಲ್ಲಿ ಏರ್‌ಟೆಲ್ ಕಂಪನಿಯ ಮೊಬೈಲ್ ಟವರ್ ನಿರ್ಮಿಸಿದ್ದಾರೆ” ಎಂದು ದಸಂಸ ಮುಖಂಡರು ಆರೋಪಿಸಿದರು.
“ಟವರ್‌ನಿಂದ ಬರುವ ಶಬ್ದ ಹಾಗೂ ತರಂಗಳಿಂದ ವಿದ್ಯಾಭ್ಯಾಸ ಮಾಡುವ ಮಕ್ಕಳ ಕಿವಿ ಮತ್ತು ಕಣ್ಣುಗಳಿಗೆ ತೊಂದರೆಯಾಗುತ್ತದೆ. ಜತೆಗೆ ಪ್ರಾಣಹಾನಿ ಉಂಟಾಗಿ, ವಯಸ್ಸಾದವರಿಗೆ ಹೃದಯಾಘಾತ ಆಗುವ ಸಂಭವವಿದೆ” ಎಂದು ದೂರಿದರು.
“ಟವರ್ ನಿರ್ಮಾಣ ಮಾಡಿರುವ ಕಂಪನಿ ಮತ್ತು ಪುಟ್ಟೇಗೌಡ ಹಾಗೂ ತಮ್ಮಡಿಗೌಡ ಅವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಿ ಕೂಡಲೇ ಟವರ್ ಸ್ಥಾವರವನ್ನು ತೆರವುಗೊಳಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಎಂಎಲ್‌ಸಿ ಚುನಾವಣೆ ನೆಪ; ಸಾರ್ವಜನಿಕರ ಕಾರ್ಯಕ್ಕೆ ನಿರ್ಬಂಧಿಸಿದ ಅಧಿಕಾರಿಗಳು
ದಸಂಸ ಸಂಚಾಲಕ ಕುಬೇರಪ್ಪ, ಸಂಘಟನಾ ಕಾರ್ಯದರ್ಶಿ ಶ್ರೀಕಂಠಯ್ಯ, ಮುಂಡುಗದೊರೆ ಗೋಪಿ ಸೇರಿದಂತೆ ಇತರರು ಇದ್ದರು.
