ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಅಚ್ಚರಿಯೆಂಬಂತೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಬಿಜೆಪಿ ನೇತೃತ್ವದ ‘ಎನ್‌ಡಿಎ’ಗಿಂತ ಮುನ್ನಡೆ ಸಾಧಿಸಿದೆ.
ಉತ್ತರ ಪ್ರದೇಶದ ಒಟ್ಟು 80 ಲೋಕಸಭಾ ಸ್ಥಾನಗಳ ಪೈಕಿ 41 ಸ್ಥಾನಗಳಲ್ಲಿ ‘ಇಂಡಿಯಾ’ ಒಕ್ಕೂಟ ಮುನ್ನಡೆಯಲ್ಲಿದ್ದರೆ, ಎನ್‌ಡಿಎ 37 ಸ್ಥಾನಗಳಲ್ಲಿ ಮಾತ್ರವೇ ಮುನ್ನಡೆಯಲ್ಲಿದೆ. ಎನ್‌ಡಿಎಗಿಂತ ‘ಇಂಡಿಯಾ’ ಕೂಟ ಮೂರು ಸ್ಥಾನಗಳಲ್ಲಿ ಮುನ್ನಡೆಯಲಿದೆ.
ಇಂಡಿಯಾ ಕೂಟದ ಭಾಗವಾಗಿರುವ ಸಮಾಜವಾದಿ ಪಕ್ಷ 33 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 8 ಸ್ಥಾನಗಳಲ್ಲಿ ಮುಂದಿದೆ. ಎನ್‌ಡಿಎ ಭಾಗವಾಗಿರುವ ಬಿಜೆಪಿ 35 ಮತ್ತು ಆರ್‌ಎಲ್‌ಡಿ 2 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
2019ರ ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯದ 80 ಸ್ಥಾನಗಳಲ್ಲಿ 62 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷದ ಮೈತ್ರಿಯು 15 ಸ್ಥಾನಗಳನ್ನು ಗೆದ್ದಿದ್ದವು.
ಈ ಬಾರಿ, ಬಿಎಸ್‌ಪಿ ಏಕಾಂಗಿ ಸ್ಪರ್ಧೆ ಮಾಡಿದ್ದು, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಜೊತೆಗೂಡಿವೆ. ಸಮಾಜವಾದಿ ಪಕ್ಷ 62 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ 17 ಸ್ಥಾನಗಳಲ್ಲಿ ಸ್ಪರ್ಧಿಸಿದೆ.
ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಅಮೇಥಿ ಮತ್ತು ರಾಯ್ ಬರೇಲಿ ಗಾಂಧಿ ಕುಟುಂಬಕ್ಕೆ ಪ್ರತಿಷ್ಠೆಯ ಕದನವಾಗಿದೆ. ಕಳೆದ ಬಾರಿ, ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸೋತಿದ್ದರು. ಈ ಬಾರಿ, ಕ್ಷೇತ್ರದಲ್ಲಿ ಇರಾನಿ ವಿರುದ್ಧ ಗಾಂಧಿ ಕುಟುಂಬದ ನಿಷ್ಠಾವಂತ ಕಾಂಗ್ರೆಸ್‌ನ ಕಿಶೋರಿ ಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ. ಶರ್ಮಾ ಅವರು ಇರಾನಿಗಿಂತ 60,000 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ರಾಯ್‌ಬರೇಲಿಯಲ್ಲಿ ಸ್ಪರ್ಧಿಸಿರುವ ರಾಹುಲ್‌ಗಾಂಧಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕನೌಜ್ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮುನ್ನಡೆ ಸಾಧಿಸಿದ್ದಾರೆ.
ಇನ್ನು, ವಾರಣಾಸಿಯಲ್ಲಿ ಕಣದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅಜಯ್ ರಾವ್ ಅವರಿಂದ ಭಾರೀ ಪೈಪೋಟಿ ಎದುರಿಸುತ್ತಿದ್ದಾರೆ. ಈಗಾಗಲೇ ಮೋದಿ ಅವರು ಒಮ್ಮೆ 1,600 ಮತಗಳಿಂದ ಹಿನ್ನಡೆ ಅನುಭವಿಸಿ, ಮತ್ತೆ ಮುನ್ನಡೆ ಸಾಧಿಸಿದ್ದಾರೆ.
ಲಕ್ನೋದಲ್ಲಿ ಮೂರನೇ ಅವಧಿಗೆ ಆಯ್ಕೆಗೆ ಹೋರಾಟ ನಡೆಸುತ್ತಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುನ್ನಡೆಯಲ್ಲಿದ್ದಾರೆ. ಮಥುರಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮುಖೇಶ್ ಧಂಗರ್ ವಿರುದ್ಧ ಬಿಜೆಪಿಯ ನಟಿ-ರಾಜಕಾರಣಿ ಹೇಮಾ ಮಾಲಿನಿ ಮುಂದಿದ್ದಾರೆ.