ಲೋಕಸಭಾ ಚುನಾವಣೆಯ ಮತ ಎಣಿಕೆ ಅಂತಿಮ ಘಟ್ಟವನ್ನು ತಲುಪುತ್ತಿದೆ. ಮಂಗಳವಾರ ರಾತ್ರಿಯ ವೇಳೆಗೆ ಸಂಪೂರ್ಣ ಫಲಿತಾಂಶ ಪ್ರಕರಣವಾಗುವ ಸಾಧ್ಯತೆಗಳಿವೆ. ಈ ಡುವೆ, ಎಕ್ಸಿಟ್ ಪೋಟ್‌ಗಳ ಅಂಕಿ-ಸಂಖ್ಯೆಗಳನ್ನು ಬುಡಮೇಲು ಮಾಡಿ ‘ಇಂಡಿಯಾ’ ಒಕ್ಕೂಟ ಮುನ್ನಡೆಯುತ್ತಿದೆ. ಎನ್‌ಡಿಎ 295 ಸ್ಥಾನಗಳಲ್ಲಿ ಮುಂದಿದ್ದರೆ, ಇಂಡಿಯಾ 230 ಸ್ಥಾನಗಳನ್ನು ಮುನ್ನಡೆ ಕಾಯ್ದುಕೊಂಡಿದೆ.
ಅದರಲ್ಲೂ ಬಹುಮುಖ್ಯವಾಗಿ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಇಂಡಿಯಾ ತನ್ನದಾಗಿಸಿಕೊಳ್ಳುತ್ತಿದೆ. ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ, ಬಿಜೆಪಿಯನ್ನು ಮಣಿಸಿ, ಇಂಡಿಯಾ ಮುನ್ನಡೆದಿದೆ.
ಉತ್ತರ ಪ್ರದೇಶವು ದೇಶದಲ್ಲಿಯೇ ಅತಿ ಹೆಚ್ಚು ಸಂಸತ್ ಸ್ಥಾನಗಳನ್ನು ಹೊಂದಿದೆ. ಅಲ್ಲಿನ ಒಟ್ಟು 80 ಸ್ಥಾನಗಳ ಪೈಕಿ ಇಂಡಿಯಾ 45 (ಎಸ್‌ಪಿ-36, ಕಾಂಗ್ರೆಸ್ 9) ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 32 ಸ್ಥಾನಗಳಲ್ಲಿ ಮಾತ್ರವೇ ಮುಂದಿದ್ದು, ಮೂರು ಸ್ಥಾನಗಳಲ್ಲಿ ಇತರರು ಮುನ್ನಡೆಯಲ್ಲಿದ್ದಾರೆ.
ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುನ್ನಡೆಯಲ್ಲಿದ್ದರೆ, ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಕೂಡ ಮುನ್ನಡೆ ಸಾಧಿಸಿದ್ದಾರೆ. ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರನ್ನು ಗಾಂಧಿ ಕುಟುಂಬದ ಆಪ್ತ, ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಸೋಲಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ 2019ರಲ್ಲಿ ಬಿಜೆಪಿ 62 ಸ್ಥಾನಗಳನ್ನು ಗೆದ್ದಿತ್ತು. ಅದರ ಮುತ್ರಿ ಪಕ್ಷ ಅಪ್ನಾ ದಳ 2 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಸಮಾಜವಾದಿ ಪಕ್ಷ 5 ಕ್ಷೇತ್ರಗಳಲ್ಲಿ ಗೆದ್ದರೆ, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮಾತ್ರವೇ ಗೆದ್ದಿತ್ತು. ಈ ಬಾರಿ, ಎಸ್‌ಪಿ-ಕಾಂಗ್ರೆಸ್ ಒಗ್ಗೂಡಿ ಬಿಜೆಪಿಯನ್ನು ಮಣಿಸಿವೆ.
ಪಶ್ಚಿಮ ಬಂಗಾಳದಲ್ಲಿ, ಒಟ್ಟು 42 ಸ್ಥಾನಗಳ ಪೈಕಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ 32 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 9 ಸ್ಥಾನಗಳಲ್ಲಿ ಮಾತ್ರವೇ ಮುಂದಿದ್ದರೆ, ಕಾಂಗ್ರೆಸ್ ಒಂದರಲ್ಲಿ ಮುಂದಿದೆ.
ಮಹಾರಾಷ್ಟ್ರದಲ್ಲಿ, ಭಾರೀ ಹೋರಾಟ ನಡೆದಿದ್ದು, ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಿ, ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳನ್ನು ಒಡೆದು ಇಬ್ಬಾಗ ಮಾಡಿದ್ದ ಬಿಜೆಪಿ ವಿರುದ್ಧ ಮಹಾರಾಷ್ಟ್ರ ಜನರು ಮತ ಚಲಾಯಿಸಿದ್ದಾರೆ. ಮಹಾರಾಷ್ಟ್ರದ ಒಟ್ಟು 48 ಸ್ಥಾನಗಳ ಪೈಕಿ, ಇಂಡಿಯಾ ಮೈತ್ರಿಕೂಟ 29 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎನ್‌ಡಿಎ ಮೈತ್ರಿಕೂಟ 18 ಸ್ಥಾನಗಳಲ್ಲಿ ಮಾತ್ರವೇ ಮುಂದೆ ಇದೆ.
ಕಾಂಗ್ರೆಸ್ 12, ಶಿವಸೇನೆ (ಉದ್ಧವ್ ಬಣ) 10 ಹಾಗೂ ಎನ್‌ಸಿಪಿ (ಶರದ್ ಬಣ) 7 ಸ್ಥಾನಗಳಲ್ಲಿ ಗೆಲುವಿನ ಹಾದಿಯಲ್ಲಿವೆ. ಎನ್‌ಡಿಎ ಕೂಟದ ಬಿಜೆಪಿ 11, ಶಿವಸೇನೆ (ಶಿಂಧೆ ಬಣ) 6 ಹಾಗೂ ಎನ್‌ಸಿಪಿ (ಅಜಿತ್ ಬಣ) 1 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ. ಒಂದು ಸ್ಥಾನವನ್ನು ಸ್ವತಂತ್ರರು ಗೆಲ್ಲಬಹುದು ಎನ್ನಲಾಗಿದೆ.
ಹರಿಯಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಪಂಜಾಬ್‌ನಲ್ಲಿ ಕಾಂಗ್ರೆಸ್ ಏಳು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಮೂರು ಸ್ಥಾನಗಳಲ್ಲಿ, ಶಿರೋಮಣಿ ಅಕಾಲಿದಳ (ಎಸ್‌ಎಡಿ) ಒಂದರಲ್ಲಿ ಮತ್ತು ಸ್ವತಂತ್ರರು ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ತಮಿಳುನಾಡಿನಲ್ಲಿ ಇಂಡಿಯಾ ಒಕ್ಕೂಟ ಒಟ್ಟು 39ಕ್ಕೆ 39 ಸ್ಥಾನಗಳಲ್ಲಿಯೂ ಮುನ್ನಡೆ ಸಾಧಿಸಿದೆ. ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಸ್ಥಾನಗಳಲ್ಲಿ ಮುನ್ನಡೆಯಲ್ಲಿವೆ.