ಹಾಸನ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಭಷ್ಟ ಬಿಜೆಪಿ ಮತ್ತು ಸ್ವಾರ್ಥಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿ ಹಾಸನ ಲೋಕಸಭಾ ಕ್ಷೇತ್ರದ ಘನತೆ ಉಳಿಸಿದ ಜಿಲ್ಲಾ ಮತದಾರರಿಗೆ ‘ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟವು’ ಅಭಿನಂದನೆ ತಿಳಿಸಿದೆ.
ಹಾಸನ ನಗರದಲ್ಲಿ ದಲಿತ, ರೈತ, ಕಾರ್ಮಿಕ, ಮಹಿಳಾ, ಅಲ್ಪಸಂಖ್ಯಾತ, ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳ ಹಾಗೂ ಸಮಾನ ಮನಸ್ಕರ ಐಕ್ಯ ವೇದಿಕೆ ಒಳಗೊಂಡ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದಿಂದ ಮಾಧ್ಯಮಗೋಷ್ಟಿ ನಡೆಸಿ ಧನ್ಯವಾದ ಸಲ್ಲಿಸಿತು. ಹಾಸನದ ಸಂಸದರಾಗಿ ಆಯ್ಕೆಯಾಗಿರುವ ಶ್ರೇಯಸ್ ಪಟೇಲ್ ಅವರಿಗೂ ಅಭಿನಂದನೆ ತಿಳಿಸಿತು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಮಾತನಾಡಿ,”ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 31ರಂದು ಹಾಸನದಲ್ಲಿ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ ‘ಸಮಾನ ಮನಸ್ಕರ ಸಮಾಲೋಚನಾ ಸಭೆ’ ನಡೆಸಿ ‘ಭ್ರಷ್ಟ ಬಿಜೆಪಿ-ಸ್ವಾರ್ಥಿ ಜೆಡಿಎಸ್ ಸೋಲಿಸಿ; ಹಾಸನ ಉಳಿಸಿ’ ಎಂಬ ಅಭಿಯಾನವನ್ನು ಆರಂಭಿಸಲಾಗಿತ್ತು. ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ನಗರ ಗ್ರಾಮಾಂತರ ಮಟ್ಟದಲ್ಲಿ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ ಸ್ವತಂತ್ರ್ಯವಾಗಿ ಅಭಿಯಾನ ನಡೆಸಲಾಗಿತ್ತು” ಎಂದರು.
“ಈ ಅಭಿಯಾನದಲ್ಲಿ ಹಲವು ಸಾರ್ವಜನಿಕ ಸಭೆಗಳು, ಸಮಾಲೋಚನಾ ಸಭೆಗಗಳು, ಮಾಧ್ಯಮಗೋಷ್ಟಿಗಳು, ಸ್ಥಳೀಯ ಮಟ್ಟದ ಸಭೆಗಳು ಜತೆಗೆ ‘ಜನ ಸತ್ತಿಲ್ಲ’ ಎನ್ನುವ ಬೀದಿ ನಾಟಕದ ಮುಖಾಂತರ ಲೋಕಸಭಾ ಕ್ಷೇತ್ರಾದ್ಯಂತ ನಮ್ಮ ತಂಡ ಸಂಚರಿಸಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆ. ಈ ಅಭಿಯಾನದಲ್ಲಿ ನರೇಂದ್ರ ಮೋದಿಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಜನವಿರೋಧಿ ಮತ್ತು ಸಂವಿಧಾನ ವಿರೋಧಿ ದುರಾಡಳಿತ ಹಾಗೂ ಕೇವಲ ಒಂದೇ ಕುಟುಂಬದ ಸ್ವಾರ್ಥಕ್ಕಾಗಿ ಜೆಡಿಎಸ್ ನಡೆಸಿದ ಅವಕಾಶವಾದಿ ರಾಜಕಾರಣ ಮತ್ತು ಜೆಡಿಎಸ್‌ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಶೂನ್ಯ ಕೆಲಸದ ಕುರಿತು ಹಾಸನ ಲೋಕಸಭಾ ಕ್ಷೇತ್ರದ ಜನರಿಗೆ ಕರಪತ್ರ, ಸಭೆ, ಭಾಷಣ, ಚರ್ಚೆ ಮತ್ತು ಬೀದಿ ನಾಟಕದ ಮುಖಾಂತರ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಲಾಯಿತು” ಎಂದು ಹೇಳಿದರು.
“ನಮ್ಮ ಒಕ್ಕೂಟ ಸ್ವತಂತ್ರವಾಗಿ ನಡೆಸಿದ ಈ ಮಹತ್ವದ ಪ್ರಯತ್ನಕ್ಕೆ ಮತದಾರರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮತದಾರರು ಜಿಲ್ಲೆಯಲ್ಲಿನ ಒಂದೇ ಕುಟುಂಬದ ದುರಾಡಳಿತದ ವಿರುದ್ಧ ಮತಚಲಾಯಿಸಿ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಒಬ್ಬ ವಿಕೃತ ಮತ್ತು ದುಷ್ಟವ್ಯಕ್ತಿಯನ್ನು ಸೋಲಿಸಿ ಮಹಿಳೆಯರ ಘನತೆಯನ್ನು ಉಳಿಸಿ ಹಾಸನದ ಗೌರವವನ್ನು ಎತ್ತಿಹಿಡಿದ ಕಾರಣಕ್ಕೆ ನಮ್ಮ ಒಕ್ಕೂಟದ ಪರವಾಗಿ ಜನರಿಗೆ ಧನ್ಯವಾದ” ಎಂದರು.
“ಬಿಜೆಪಿಯ ದುರಾಡಳಿತ ಮತ್ತು ನರೇಂದ್ರ ಮೋದಿಯ ದುರಂಹಕಾರಕ್ಕೆ ಪ್ರತಿಯಾಗಿ ಸರ್ಕಾರ ರಚಿಸಲು ಸರಳ ಬಹುಮತದ ಹತ್ತಿರಕ್ಕೂ ಸುಳಿಯಲಾರದಂತೆ ಪ್ರತ್ಯುತ್ತರ ನೀಡಿದ ಭಾರತದ ಮತದಾರರಿಗೆ ಅಭಿನಂಧನೆ. ನಮ್ಮ ಅಭಿಯಾನದಲ್ಲಿ ದುಡಿದ ಎಲ್ಲ ಜನಪರ ಚಳುವಳಿಗಳ ಕಾರ್ಯಕರ್ತರಿಗೆ ಮತ್ತು ವ್ಯಾಪಕ ಪ್ರಚಾರ ನೀಡಿದ ಮಾಧ್ಯಮಗಳಿಗೂ ಧನ್ಯವಾದ. ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ನಡೆಸಿದ ಜಿಲ್ಲಾ ಚುನಾವಣಾ ಆಯೋಗ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳಿಗೆ ಧನ್ಯವಾದ” ಎಂದರು.
“ಹಾಸನದ ಗೆಲುವು ಕಾಂಗ್ರೆಸ್ ಗೆಲುವಲ್ಲ. ಬದಲಿಗೆ ಜಿಲ್ಲೆಯ ಜನರ ಗೆಲುವು ಎನ್ನುವುದು ನಮ್ಮ ಒಕ್ಕೂಟದ ಸ್ಪಷ್ಟ ಅಭಿಪ್ರಾಯವಾಗಿದೆ. ಈ ಚುನಾವಣೆಯಲ್ಲಿ ಸೋತವರಿಗೂ ಮತ್ತು ಗೆದ್ದವರಿಗೂ ಇಬ್ಬರಿಗೂ ಕಲಿಯುವ ಪಾಠವಿದೆ. ಪಾಳೆಗಾರಿಕೆ, ಜಾತಿವಾದಿ ಮತ್ತು ದುರಂಹಕಾರದ ಆಡಳಿತವನ್ನು ಜನರು ಹೆಚ್ಚು ಕಾಲ ಸಹಿಸುವುದಿಲ್ಲ ಎನ್ನುವ ಸಂದೇಶವನ್ನು ಜನರು ಈ ಚುನಾವಣೆಯ ಮೂಲಕ ನೀಡಿದ್ದಾರೆ” ಎಂದರು.
“ನೂತನವಾಗಿ ಹಾಸನದ ಸಂಸದರಾಗಿ ಆಯ್ಕೆಯಾಗಿರುವ ಶ್ರೇಯಶ್ ಪಟೇಲ್ ಅವರಿಗೆ ಅಭಿನಂಧನೆ ಸಲ್ಲಿಸುವುದರ ಜತೆಗೆ ಈ ಚುನಾವಣೆಯಲ್ಲಿ ಜನರು ನೀಡಿರುವ ಸ್ಪಷ್ಟ ಸಂದೇಶವನ್ನು ಅರ್ಥಮಾಡಿಕೊಂಡು ಸದಾ ಜನರೊಂದಿಗೆ ಇದ್ದುಕೊಂಡು ಜನಪರವಾಗಿ ಕೆಲಸ ಮಾಡುತ್ತಾ, ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು” ಎಂದು ಮನವಿ ಮಾಡಿದರು.
“ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಜನರ ಪರವಾಗಿ ನಿರಂತರವಾದ ಹೋರಾಟಗಳನ್ನು ನಡೆಸುತ್ತಾ ಸರ್ಕಾರಗಳು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಸದಾ ಜನಪರ ಕೆಲಸ ಮಾಡುವಂತೆ ಎಚ್ಚರಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಶಿಬು ಸೊರೇನ್ ಸೊಸೆಯಂದಿರ ಫೈಟ್ | ಬಿಜೆಪಿ ನಂಬಿ ಬಂದಿದ್ದ ಸೀತಾ ಸೊರೇನ್ ಸೋಲು; ಉಪಚುನಾವಣೆಗೆ ಸ್ಪರ್ಧಿಸಿದ್ದ ಕಲ್ಪನಾ ಸೊರೇನ್ ಗೆಲುವು
ಹಿರಿಯ ದಲಿತ ಮುಖಂಡ ಎಚ್ ಕೆ ಸಂದೇಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ ಸೋಮಶೇಖರ್, ಜಿಲ್ಲಾ ಸಂಯೋಜಕ ರಾಜಶೇಖರ್ ಹುಲಿಕಲ್, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ ಆರ್ ವಿಜಯಕುಮಾರ್, ದಸಂಸ ಜಿಲ್ಲಾ ಸಂಚಾಲಕ ಅಬ್ದುಲ್ ಸಮದ್, ನಿವೃತ್ತ ಸರ್ಕಾರಿ ಅಧಿಕಾರಿಗಳ ನೌಕರಕ ಸಂಘದ ನಿರ್ದೇಶಕ ರಾಜು ಗೊರೂರು, ಎದ್ದೇಳು ಕರ್ನಾಟಕ ಜಿಲ್ಲಾ ಪ್ರತಿನಿಧಿ ಇರ್ಷಾದ್ ಅಹಮದ್ ದೇಸಾಯಿ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ ಜಿ ಪೃಥ್ವಿ, ಆಜಾ಼ದ್ ಟಿಪ್ಪು ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮುಬಶಿರ್ ಅಹಮದ್ ಇದ್ದರು.
