ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಆರ್ಭಟ ಬುಧವಾರವೂ ಮುಂದುವರೆದಿದೆ. ನಗರದ ಹಲವೆಡೆ ಮರಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಬೆಂಗಳೂರಿನ ಟೌನ್ ಹಾಲ್, ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ಬಸವೇಶ್ವರ ನಗರ, ಗೋವಿಂದರಾಜ ನಗರ, ಗಿರಿನಗರ, ವಿಜಯನಗರ, ಚಾಮರಾಜಪೇಟೆ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಮಳೆಯಿಂದ ರಸ್ತೆಗಳೆಲ್ಲ ತುಂಬಿದ್ದು, ಸವಾರರು ಹೈರಾಣಾಗಿದ್ದಾರೆ.
ತುಮಕೂರು ಜಿಲ್ಲೆಯಾದ್ಯಂತ ಬುಧವಾರವೂ ಎರಡು ಗಂಟೆಗಳ ಕಾಲ ಮಳೆಯಾಗಿದೆ. ಮಳೆಯಿಂದ ನಗರದ ಅಂತರಸನಹಳ್ಳಿ ಅಂಡರ್ ಪಾಸ್ ಜಲಾವೃತ್ತವಾಗಿತ್ತು. ಚಿತ್ರದುರ್ಗದ ಹಲವೆಡೆ ಮಳೆ ಸುರಿದಿದ್ದು, ಹಿರಿಯೂರು ತಾಲೂಕಿನ ಟಿಬಿ ವೃತ್ತದ ರಸ್ತೆ ಮಳೆ ನೀರಿನಿಂದ ಮುಚ್ಚಿ ಹೋಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುರಿದ ಮಳೆ ಅವಾಂತರ ಸೃಷ್ಟಿಸಿದೆ. ಚಿಂತಾಮಣಿಯ ಈಶ್ವರ ದೇವಸ್ಥಾನ ಹಿಂಭಾಗದ ಮನೆಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಹಾಸನ ಜಿಲ್ಲೆಯ ಅರಕಲಗೂಡಿನ ದೊಡ್ಡಮಗ್ಗೆಯಲ್ಲಿ ಹೊಲದಲ್ಲಿ ಜೋಳ ಬಿತ್ತನೆ ಮಾಡುವಾಗ ಮಳೆ ಬಂದ ಕಾರಣ ಮರದ ಕೆಳಗೆ ನಿಂತಿದ್ದಾರೆ. ಈ ವೇಳೆ, ಸಿಡಿಲಿಗೆ ಮುತ್ತಮ್ಮ, ಪುಟ್ಟಮ್ಮ ಎಂಬುವವರರು ಮೃತಪಟ್ಟಿದ್ದಾರೆ.
ವಿಜಯಪುರ ಜಿಲ್ಲೆ ಬಬಲೇಶ್ವರದ ಕಾಖಂಡಕಿ ಗ್ರಾಮದಲ್ಲಿ ಸಿಡಿಲಿಗೆ ಕುರಿಗಾಹಿ ಅಮೋಘ ಸೋಮನಿಂಗ ಕಣಮುಚನಾಳ ಎಂಬುವವರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ತಾಲೂಕಿನ ಜಾವಳ್ಳಿ ಗ್ರಾಮದಲ್ಲಿ ಅಂಗಡಿಗೆ ಸಿಡಿಲು ಬಡಿದಿದ್ದು, ವಸ್ತುಗಳು ಸುಟ್ಟು ಕರಕಲಾಗಿವೆ.
ಈ ಸುದ್ದಿ ಓದಿದ್ದೀರಾ? ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಎಲೆಕ್ಟ್ರಿಕ್ ಏರ್‌ಪೋರ್ಟ್ ಟ್ಯಾಕ್ಸಿ’ಗಳಿಗೆ ಚಾಲನೆ
ಜೂನ್ 6 ರಿಂದ ಜೂನ್ 10ರವರೆಗೆ ರಾಜ್ಯದ ಹಲವೆಡೆ ಮಳೆ
ಕರ್ನಾಟಕದ ಬಹುತೇಕ ಕಡೆಗಳಲ್ಲಿ ಮಳೆಯಾಗುತ್ತಿದೆ, ಜೂನ್ 6 ರಿಂದ ಜೂನ್ 10ರವರೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಗದಗ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನುಳಿದಂತೆ ವಿಜಯನಗರ, ತುಮಕೂರು,ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೊಪ್ಪಳ, ಯಾದಗಿರಿ, ಹಾವೇರಿ, ಧಾರವಾಡ, ಬೀದರ್ನಲ್ಲಿ ಕೂಡ ಮಳೆಯಾಗಲಿದೆ.
ಕಮಲಾಪುರ, ಸೇಡಬಾಳ, ಶಿರಹಟ್ಟಿ, ದೊಡ್ಡಬಳ್ಳಾಪುರ, ಚಿಕ್ಕೋಡಿ, ಕಲಬುರಗಿ, ಮಹಾಗೋವಾ, ಚಿಂತಾಮಣಿ, ಕೋಲಾರ, ಲಕ್ಷ್ಮೇಶ್ವರ, ರಬಕವಿ, ಸಂಕೇಶ್ವರ, ಶಿಗ್ಗಾಂವ್, ಹುಕ್ಕೇರಿ, ಭಾಲ್ಕಿ, ಅಫಜಲ್ಪುರ, ಹುಕ್ಕೇರಿ, ಮಹಾಲಿಂಗಪುರ, ಬಾಗಲಕೋಟೆ, ಆಗುಂಬೆ, ಹೊನಕೆರೆ, ಹೊಸಕೋಟೆ, ಗೌರಿಬಿಸನೂರಿನಲ್ಲಿ ಮಳೆಯಾಗಿದೆ.
ಕಲಬುರಗಿಯಲ್ಲಿ 37.4 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಬುಧವಾರ ಸಂಜೆ ಮಳೆಯಾಗಿದೆ. ಜೂನ್ 6ರಂದು ಕೂಡ ಮೋಡಕವಿದ ವಾತಾವರಣವಿದ್ದು, ಸಂಜೆ ವೇಳೆ ಮಳೆಯಾಗುವ ನಿರೀಕ್ಷೆ ಇದೆ.
ಎಚ್ಎಎಲ್ನಲ್ಲಿ 31.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 31.4ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 31.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 31.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಹೊನ್ನಾವರದಲ್ಲಿ 31.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 31.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 25.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಶಿರಾಲಿಯಲ್ಲಿ 35.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಬೀದರ್ನಲ್ಲಿ 35.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ವಿಜಯಪುರದಲ್ಲಿ 34.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬಾಗಲಕೋಟೆಯಲ್ಲಿ 33.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಧಾರವಾಡದಲ್ಲಿ 34.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಗದಗದಲ್ಲಿ 29.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಲಬುರಗಿಯಲ್ಲಿ 37.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹಾವೇರಿಯಲ್ಲಿ 29.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.