ಯುಜಿಸಿ ನಿಯಮಾವಳಿ 2022ರ ಅನ್ವಯ ಯುಜಿಸಿಯಿಂದ ಸಂಶೋಧನಾ ವೇತನ ಪಡೆಯುತ್ತಿರುವ ಎಲ್ಲ ಪೂರ್ಣಕಾಲಿಕ ಸಂಶೋಧನಾರ್ಥಿಗಳು ಕಡ್ಡಾಯವಾಗಿ ವಿಶ್ವವಿದ್ಯಾಲಯದ ವಿಜ್ಞಾನ ಹಾಗೂ ಕಲಾ ಕಾಲೇಜುಗಳಲ್ಲಿ ವಾರಕ್ಕೆ ಕನಿಷ್ಟ 4 ಗಂಟೆಗಳ ಬೋಧನ ಕಾರ್ಯಭಾರವನ್ನು ನಿವರ್ಹಿಸಬೇಕು ಎಂದು ತುಮಕೂರು ವಿಶ್ವವಿದ್ಯಾಲಯ ಆದೇಶಿಸಿದೆ. ಅಲ್ಲದೆ, ಇದಕ್ಕೆ ಬದ್ಧರಾಗದವರ ಮೇಲೆ ಸೂಕ್ತ ಶಿಸ್ತು ಕ್ರಮ ಜರಗಿಸುವುದಾಗಿ ‘ಅಂತಿಮ ಎಚ್ಚರಿಕೆ ಪತ್ರ’ವನ್ನೂ ಕಳುಹಿಸಿರುವುದು ಸಂಶೋಧನಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಸಂಶೋಧನಾರ್ಥಿಗಳು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಯುಜಿಸಿ ನಿಯಮಾವಳಿಯ ಕ್ಲಾಸ್ 9(2) ಪ್ರಕಾರ ಬೋಧನ ಕಾರ್ಯಭಾರದ ಅಗತ್ಯ ಕೋರ್ಸ್ ವರ್ಕ್ ಸಂದರ್ಭಕ್ಕಷ್ಟೇ ಸೀಮಿತವಾಗಿದ್ದು, ಕೋರ್ಸ್ ವರ್ಕ್ ಮುಗಿಸಿದ ಸಂಶೋಧನಾರ್ಥಿಗಳು ಬೋಧನ ಕಾರ್ಯಭಾರ ನಿರ್ವಹಿಸುವ ಅಗತ್ಯವಿಲ್ಲ. ಈ ವಿಚಾರವಾಗಿ ವಿಶ್ವವಿದ್ಯಾಲಯಕ್ಕೆ ಅನೇಕ ಮನವಿ ಪತ್ರಗಳನ್ನು ಸಲ್ಲಿಸಿದ್ದರೂ, ಅವುಗಳಿಗೆ ಸೂಕ್ತ ಉತ್ತರ ನೀಡದೆ, ಮೊದಲು ಬೋಧನೆ ಆಮೇಲೆ ಸಂಶೋಧನೆ ಎಂಬ ಧಾಟಿಯಲ್ಲಿ ಉತ್ತರಿಸಿದೆ. ಇದರಿಂದ ನಮ್ಮ ಸಂಶೋಧನೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ” ಎಂದು ಅವಲತ್ತುಕೊಂಡಿದ್ದಾರೆ.
“ಕ್ಲಾಸ್ 9(2) ವಿಚಾರದಲ್ಲಿ ಸ್ಪಷ್ಟೀಕರಣ ಕೋರಿ ಯುಜಿಸಿಗೆ ಇಮೇಲ್ ಮಾಡಿದ್ದರೂ ಈವರೆಗೆ ಯುಜಿಸಿಯಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲ. ವಿಶ್ವವಿದ್ಯಾನಿಲಯ ಹಾಗೂ ಯುಜಿಸಿಯ ಈ ನಡೆಯಿಂದ ಸಂಶೋಧನಾರ್ಥಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ವಿಶ್ವವಿದ್ಯಾಲಯವು ದುರುದ್ದೇಶಪೂರಿತವಾಗಿ ಹಾಗೂ ನಿಯಮಬಾಹಿರವಾಗಿ, ಯುಜಿಸಿಯಿಂದ ಸಂಶೋಧನ ವೇತನ ಪಡೆಯುತ್ತಿದ್ದೇವೆ ಎಂಬುದನ್ನಷ್ಟೇ ಗುರಿಯಾಗಿಸಿಕೊಂಡು, ತಮ್ಮನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ” ಎಂದು ಸಂಶೋಧನಾರ್ಥಿಗಳು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳ್ತಂಗಡಿ| ಬಾಲಕಿಯ ಮಾನಭಂಗ ಯತ್ನ: ಬಿಜೆಪಿ ಮುಖಂಡನ ವಿರುದ್ಧ ಪೋಕ್ಸೋ ಕೇಸ್ ದಾಖಲು
ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ ಮಹೇಶ್ ಈ ದಿನ.ಕಾಮ್‌ನೊಂದಿಗೆ ಪ್ರತಿಕ್ರಿಯಿಸಿದ್ದು, “ಎಲ್ಲಾವನ್ನು ನಿಯಮಾನುಸಾರವೇ ಮಾಡಿದ್ದೇವೆ. ಯಾವುದನ್ನು ನಿಯಮ ಬಿಟ್ಟು ಮಾಡಿಲ್ಲ” ಎಂದು ಹೇಳಿದ್ದಾರೆ.
