ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವನ್ನು(ಕೆಆರ್‌ಡಿಸಿಎಲ್) ಕಂಪನಿಯ ಕಾಯಿದೆ, 1956ರ ನಿಬಂಧನೆಗಳ ಪ್ರಕಾರ 1999ರ ಜುಲೈ 21ರಂದು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಡಿಯಲ್ಲಿ ಸರ್ಕಾರವು 1999ರ ಜನವರಿ 06ರ ಸರ್ಕಾರಿ ಆದೇಶ ಸಂಖ್ಯೆ PWD 172 CRM 97ರ ಪ್ರಕಾರ “ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್” ಅನ್ನು ಸ್ಥಾಪಿಸಿದೆ.
ಇದರ ಮೂಲ ಉದ್ದೇಶ ರಸ್ತೆ ಕಾಮಗಾರಿಗಳು, ಸೇತುವೆಗಳು, ಬಸ್ ತಂಗುದಾಣ ಇತ್ಯಾದಿಗಳನ್ನು ಉತ್ತೇಜಿಸಲು ಮತ್ತು ಬಲಪಡಿಸಿ ಅಭಿವೃದ್ಧಿಗೊಳಿಸಲು, ರಸ್ತೆ ಜಾಲವನ್ನು ಸುಧಾರಿಸಲು ಮತ್ತು ರಾಜ್ಯದ ಎಲ್ಲ ಮೂಲೆ ಮೂಲೆಗಳಿಗೆ ಸಂಪರ್ಕವನ್ನು ಸ್ಥಾಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಅಧೀನದಲ್ಲಿ ರಚಿಸಲಾಗಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣದಿಂದ ಹಾಸನದವರೆಗೆ ಸರಿ ಸುಮಾರು 87 ಕಿಮೀ ರಸ್ತೆಯಲ್ಲಿ ಕೆಆರ್‌ಡಿಸಿಎಲ್ ಅಂದಾಜು 50 ಕ್ಕೂ ಹೆಚ್ಚು ಬಸ್ ನಿಲ್ದಾಣ ನಿರ್ಮಾಣ ಮಾಡಿದೆ. ಈ ರಸ್ತೆಗೆ ಪಿರಿಯಾಪಟ್ಟಣ ತಾಲೂಕು ಕೂರ್ಗಲ್ಲು, ಅರಕಲಗೂಡು ತಾ ನಿಲುವಾಗಿಲು, ಹಾಸನ ಗ್ರಾಮಾಂತರ ತಾ ಹನುಮಂತಪುರದಲ್ಲಿ ಟೋಲ್ ಸಂಗ್ರಹ ಕೂಡ ಮಾಡಲಾಗುತ್ತದೆ.
ರಸ್ತೆಯುದ್ದಕ್ಕೂ ಗ್ರಾಮಗಳ ಪರಿಮಿತಿಯಲ್ಲಿ, ಜನರಿಗೆ ಲಭ್ಯವಾಗುವಂತೆ ಯಾವುದೇ ಬಸ್ ನಿಲ್ದಾಣ ನಿರ್ಮಿಸಿಲ್ಲ. ಎಲ್ಲವೂ ಗ್ರಾಮಗಳು ಕಳೆದ ಬಳಿಕ, ಇಲ್ಲ ಗ್ರಾಮದ ಮುನ್ನ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ.
ಕೆಆರ್‌ಡಿಸಿಎಲ್ ನಿರ್ಮಿಸಿರುವ ಬಸ್ ನಿಲ್ದಾಣಗಳು ಮುಖ್ಯ ರಸ್ತೆಗೆ ಕೂಡುವ ಗ್ರಾಮ ಸಂಪರ್ಕ ರಸ್ತೆಗಾಗಲಿ, ಜನ ಬಳಕೆಯ ಗ್ರಾಮ ಪರಿಮಿತಿಯಲ್ಲಿ ಇಲ್ಲ. ಉಪಯೋಗಕ್ಕೆ ಬಾರದ ಹಾಗೆ ರಸ್ತೆಯ ಇಕ್ಕೆಲಗಳಲ್ಲಿ ಬಸ್ ನಿಲ್ದಾಣ ನಿರ್ಮಾಣ ಆಗಿದ್ದು, ಕುಡುಕರು, ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಭಿಕ್ಷುಕರು, ನಿರ್ಗತಿಕರು ವಾಸಕೇಂದ್ರ ಮಾಡಿಕೊಂಡಿದ್ದಾರೆ.
ದುರ್ದೈವ ಎಂದರೆ ಪಿರಿಯಾಪಟ್ಟಣ ಮಾರ್ಗವಾಗಿ ಹಾಸನವರೆಗೆ ಬರುವ ಪ್ರಮುಖ ಗ್ರಾಮಗಳಾದ ಹಲಗನಹಳ್ಳಿ, ರಾಗಿ ಮರೂರು, ಗಂಗೂರು, ಮಲ್ಲರಾಜ ಪಟ್ಟಣ, ಬರಗೂರಿನಲ್ಲಿ ಬಸ್ ನಿಲ್ದಾಣಗಳೇ ಇಲ್ಲ.
ಜನರಿಗೆ, ವಿದ್ಯಾರ್ಥಿಗಳಿಗೆ, ವಯಸ್ಸಾದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಬೇಕಿದ್ದ ಬಸ್ ನಿಲ್ದಾಣಗಳು ಊರ ಹೊರಗೆ, ಇಲ್ಲ ಊರಿಗೆ ಬರುವ ಮುನ್ನ ಎಲ್ಲೆಂದರಲ್ಲಿ ನಿರ್ಮಿಸಿ ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದಂತೆ ಮಾಡಿದ್ದಾರೆ.
ಈಚೂರಿನ ಸಹನಾ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ದಿನನಿತ್ಯ ಇಲ್ಲಿಂದ ಕಾಲೇಜಿಗೆ ಹೋಗಲು ಪಿರಿಯಾಪಟ್ಟಣ ಇಲ್ಲವೇ, ಬೆಟ್ಟದಪುರಕ್ಕೆ ಹೋಗಿ ಹೋಗಬೇಕು. ಅಲ್ಲಿ ಇರೋದು ಹಳೆಯ ಬಸ್ ನಿಲ್ದಾಣ. ಅದರಲ್ಲಿ ನಿಲ್ಲಲು ಭಯ ಆಗುತ್ತೆ. ಮಳೆ ಗಾಳಿ ಬಂದ್ರೆ ಬೀಳುವ ಸ್ಥಿತಿಯಲ್ಲಿದೆ. ಇನ್ನು ನಮ್ಮೂರಿಗೆ ಬರುವ ಮುನ್ನ ಎರಡು ಕಡೆ ಬಸ್ ನಿಲ್ದಾಣ ಇದೆ. ಇನ್ನ ಊರು ದಾಟಿದ ಮೇಲೂ ಬಸ್ ನಿಲ್ದಾಣವಿದೆ. ಅಲ್ಲಿ ಯಾರೂ ಹೋಗುವುದಿಲ್ಲ. ಹೋದರೂ ಕೂಡ ಅಲ್ಲಿ ಬಸ್ ನಿಲ್ಲಿಸುವುದಿಲ್ಲ. ನಿಲ್ಲಿಸಿದರೂ ಕೂಡ ಮತ್ತೆ ನಡೆದುಕೊಂಡು ಹೋಗಬೇಕು” ಎಂದು ಬೇಸರ ವ್ಯಕ್ತಪಡಿಸಿದರು.
ಹಲಗನಹಳ್ಳಿ ಮೊಹಮ್ಮದ್ ಇರ್ಫಾನ್ ಮಾತನಾಡಿ, “ನಮ್ಮೂರು ದೊಡ್ದೂರು. ಇಲ್ಲಿ ಬಸ್ ನಿಲ್ದಾಣ ಇಲ್ಲ. ಊರಾಚೆ ಮಾಡಿದ್ದಾರೆ. ಅದು ಉಪಯೋಗಕ್ಕೆ ಇಲ್ಲ. ಅಲ್ಲಿ ಭಿಕ್ಷುಕರು ಉಳಿದುಕೊಳ್ಳುತ್ತಾರೆ. ಆದರೆ ಗಾಳಿ ಮಳೆ ಬಂದರೆ ಅವರೂ ಕೂಡ ಇರಲು ಆಗುವುದಿಲ್ಲ. ಅದು ಶೆಲ್ಟರ್‌ನಲ್ಲಿ ಮಾಡಿದ ಬಸ್ ನಿಲ್ದಾಣ ಓಪನ್ ಇದೆ. ಮಳೆ ಬಂದರೆ, ಬಿಸಿಲು ಜಾಸ್ತಿ ಆದರೆ, ಅಂಗಡಿ ಮುಂಗಟ್ಟುಗಳ ಮುಂದೆ ನಿಲ್ಲಬೇಕು. ಬಸ್ಸಿಗೆ ಕಾಯಬೇಕು. ಲೋಕೋಪಯೋಗಿ ಇಲಾಖೆಯವರು ಒಂದು ಸರಿಯಾದ ಬಸ್ ನಿಲ್ದಾಣ ಮಾಡಿಲ್ಲ” ಎಂದು ಆರೋಪಿಸಿದರು.
ರಾಗಿ ಮರೂರು ಪುಟ್ಟಮ್ಮ ಮಾತನಾಡಿ, “ವಯಸ್ಸಾದವರು ನಿಲ್ಲೋಕೆ ಆಗಲ್ಲ ಮಗ, ಮಳೆ ಬಂದರೆ ನಿಲ್ಲುವುದಕ್ಕೂ ಜಾಗ ಇರುವುದಿಲ್ಲ. ಬಸ್ ನಿಲ್ದಾಣ ಇದ್ದರೆ ಬಸ್ ಬರವರೆಗೂ ಕೂತು ಕಾಯಬಹು.
ನಿಂತು ನಿಂತು ಕಾಲೆಲ್ಲ ನೋಯ್ತವೆ, ವಯಸ್ಸಾದವರು, ಗರ್ಭಿಣಿಯರು, ಹುಷಾರಿಲ್ಲದೆ ಇರೋರಿಗೆ ಕಷ್ಟ ಆಯ್ತದೆ” ಎಂದು ಅಳಲು ತೋಡಿಕೊಂಡರು.
ಬಸವೇಗೌಡ ಬರಗೂರು ಮಾತನಾಡಿ, “ಅಭಿವೃದ್ಧಿ ಹೆಸರಲ್ಲಿ ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ. ಜನ ನಿಲ್ಲುವ ಕಡೆ, ಬಸ್ ಬರುವ ಕಡೆ ಬಸ್ ನಿಲ್ದಾಣ ಇರಬೇಕು. ಇವರು ಊರು ಇಲ್ಲದ ಕಡೆ, ಜನ ಬರದೆ ಇರೋ ಕಡೆ ಬಸ್ ನಿಲ್ದಾಣ ಮಾಡಿದ್ದಾರೆ. ಅಧಿಕಾರಿಗಳಿಗೆ ತಲೆ ಇದೆಯಾ? ಅವರು ವಿದ್ಯಾವಂತರೋ ಅಲ್ವೋ? ಊರಿಂದಾಚೆ ಬಸ್ ನಿಲ್ದಾಣ ಮಾಡಿದರೆ, ಅಲ್ಲಿಗೆ ಯಾರು ಹೋಗುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರಿನ ಇಬ್ಬರು ಮಾಜಿ ಜಿಲ್ಲಾಧಿಕಾರಿಗಳು ಸಂಸದರಾಗಿ ಆಯ್ಕೆ
ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಈ ದಿನ.ಕಾಮ್ ಸಂಪರ್ಕಿಸಿದಾಗ ಅಧಿಕಾರಿಗಳು, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ರಸ್ತೆ ಅಭಿವೃದ್ಧಿ ನಿಗಮಕ್ಕೆ ಬರುತ್ತದೆ. ಅವರನ್ನು ಕೇಳಿ ಎನ್ನುತ್ತಾರೆ. ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಕೇಳಿದರೆ ಲೋಕೋಪಯೋಗಿ ಇಲಾಖೆಯವರನ್ನು ಕೇಳಿ ಎನ್ನುತ್ತಾರೆ. ಲೋಕೋಪಯೋಗಿ ಕೇಳಿದರೆ ಇದರ ವ್ಯಾಪ್ತಿ ನಮಗೆ ಬರುವುದಿಲ್ಲ. ಹಾಸನಕ್ಕೆ ಹೋಗಿ ಕೇಳಿ ಎನ್ನುತ್ತಾರೆ. ಅಲ್ಲಿ ಹೋಗಿ ಕೇಳಿದರೆ ಮೈಸೂರು ವಿಭಾಗದಲ್ಲಿ ಮಾಹಿತಿ ಕೇಳಿ ಎನ್ನುವ ಹಾರಿಕೆ ಉತ್ತರ ನೀಡುತ್ತಾರೆ. ಸಮರ್ಪಕವಾದ ಉತ್ತರ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು, ಇವರ ಅವೈಜ್ಞಾನಿಕ ಕೆಲಸಕ್ಕೆ ಹಿಡಿದ ಕೈಗನ್ನಡಿಯಾಗಿದೆ.
