ರಾಜಕೀಯ ಎಂಬುದು ನಿಂತ ನೀರಲ್ಲ, ಇಲ್ಲಿ ಯಾರೂ ಶಾಶ್ವತವಲ್ಲ ಎಂಬುದು ನಿಜ, ಆಯಾ ಕಾಲಘಟ್ಟದಲ್ಲಿ ಹೊಸ ನಾಯಕರು ಪ್ರವೇಶಿಸುತ್ತಲೇ ಇರುತ್ತಾರೆ. ಕೆಲವರು ಮರುಭೂಮಿಯಲ್ಲಿ ಓಯಸಿಸ್‌ನಂತೆ ಅಚ್ಚರಿಯಾಗಿ ಮಿಂಚಿ ಹಲವು ದಾಖಲೆಗಳಿಗೂ ಸಾಕ್ಷಿಯಾಗುತ್ತಾರೆ. ಈ ಬಾರಿಯ ಲೋಕಸಭೆಯಲ್ಲಿ ಯುವ ಸಂಸದರ ದಂಡೇ ಇದೆ. ಅದರಲ್ಲೂ ಯುವತಿಯರ ಸಂಖ್ಯೆಯೂ ಹೆಚ್ಚಿರುವುದು ಅಚ್ಚರಿಯೂ, ಹೊಸ ದಾಖಲೆಯೂ ಹೌದು.
ರಾಜಸ್ಥಾನದ ಭರತಪುರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂಜನಾ ಜಾಟವ್ ಅವರು ಎದುರಾಳಿ ಬಿಜೆಪಿ ಅಭ್ಯರ್ಥಿ ರಾಮಸ್ವರೂಪ್ ಕೋಲಿ ವಿರುದ್ಧ 5,79,890 ಮತ ಪಡೆದು, 51,983 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಸಂಜನಾ ಪ್ರಸಕ್ತ ಲೋಕಸಭೆಗೆ ಆಯ್ಕೆಯಾದ ಅತಿ ಕಿರಿಯ ದಲಿತ ಸಂಸದೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ದಲಿತ ಸಮುದಾಯದ ಸಂಜನಾ ಜಾಟವ್ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದು 79,000 ಸಾವಿರ ಮತ ಪಡೆದರೂ ಬಿಜೆಪಿ ಅಭ್ಯರ್ಥಿ ರಮೇಶ ಖೇಡಿ ವಿರುದ್ಧ ಕೇವಲ 409 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆಗ ವಯಸ್ಸು ಬರೀ 25 ವರ್ಷವಾಗಿತ್ತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಫೀನಿಕ್ಸ್‌ನಂತೆ ಮೇಲೆದ್ದು, ಇದೀಗ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.
2019ರಲ್ಲಿ ಪದವಿ ಮುಗಿಸಿದ ಸಂಜನಾ ಜಾಟವ್ ಅವರ ಪತಿ ಕಪ್ತಾನ್ ಸಿಂಗ್ ರಾಜಸ್ಥಾನ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಂಸತ್ತಿನ ಆವರಣದಲ್ಲಿರುವ ಗಾಂಧಿ, ಅಂಬೇಡ್ಕರ್, ಶಿವಾಜಿ ಪುತ್ಥಳಿ ಸ್ಥಳಾಂತರ: ಕಾಂಗ್ರೆಸ್ ಆಕ್ರೋಶ
ರಾಜಾಸ್ಥಾನದ ಒಟ್ಟು 25 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ (14), ಕಾಂಗ್ರೆಸ್ (8) ಕ್ಷೇತ್ರಗಳಲ್ಲಿ ಜಯ ಕಂಡಿದೆ. ಇನ್ನುಳಿದ ನಾಲ್ಕು ಕ್ಷೇತ್ರಗಳಲ್ಲಿ ಸಿಪಿಐ(ಎಂ), ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿ(ಆರ್‌ಎಲ್‌ಟಿಪಿ) ಹಾಗೂ ಭಾರತ ಆದಿವಾಸಿ ಪಾರ್ಟಿ (ಬಿಎಸಿ) ತಲಾ ಒಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.