ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಎಂದು ಬಿಜೆಪಿ ದಾಖಲಿಸಿದ್ದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜಾಮೀನು ದೊರೆತಿದೆ. ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಜಾಮೀನು ನೀಡಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ‘40% ಸರ್ಕಾರ’ ಎಂದು ಅಭಿಯಾನ ನಡೆಸಿತ್ತು. ಅಭಿಯಾನ ನಡೆಸಿದ್ದಕ್ಕಾಗಿ ತಮ್ಮ ಪಕ್ಷದ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ದೂರು ದಾಖಲಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ಜಾಮೀನು ನೀಡಿದೆ. ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿದೆ. ರಾಹುಲ್ ಅವರ ಜಾಮೀನಿಗೆ ಮಾಜಿ ಸಂಸದ ಡಿ.ಕೆ ಸುರೇಶ್ ಶ್ಯೂರಿಟಿ ನೀಡಿದ್ದಾರೆ.
ಸುಲ್ತಾನ್‌ಪುರ ನ್ಯಾಯಾಲಯದಲ್ಲೂ ವಿಚಾರಣೆ ಮುಂದೂಡಿಕೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನಷನಷ್ಟ ಪ್ರಕರಣದ ವಿಚಾರಣೆಯನ್ನು ಸುಲ್ತಾನ್‌ಪುರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೂನ್ 18ಕ್ಕೆ ಮುಂದೂಡಿದೆ.
2018ರ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ನಾಯಕ ವಿಜಯ್ ಮಿಶ್ರಾ ಅವರು ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ಈಗಾಗಲೇ ಫೆಬ್ರವರಿ 20ರಂದು ಜಾಮೀನು ದೊರೆತಿದೆ.
2005ರಲ್ಲಿ ಅಮಿತ್ ಶಾ ಅವರು ಗುಜರಾತ್ ಗೃಹ ಸಚಿವರಾಗಿದ್ದಾಗ ನಕಲಿ ಎನ್‌ಕೌಂಟರ್ ಮಾಡಿಸಿದ್ದರು ಎಂದು ರಾಹುಲ್ ಅರೋಪಿಸಿದ್ದರು. ಅಮಿತ್ ಶಾ ಅವರನ್ನು ರಾಹುಲ್ ‘ಕೊಲೆ ಆರೋಪಿ’ ಎಂದು ಕರೆದಿದ್ದರು. ಆದರೆ, ರಾಹುಲ್ ಆರೋಪಕ್ಕೂ ನಾಲ್ಕು ವರ್ಷ ಮೊದಲೇ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯವು ಅಮಿತ್ ಶಾ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು.