ನಾಪತ್ತೆಯಾಗಿದ್ದ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ದೊರೆತ ಬೆನ್ನಲ್ಲೆ, ಜೂನ್ 7ರಂದು ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾರೆ.
ವಕೀಲರ ಜತೆಗೆ ಸಿಐಡಿ ಕಚೇರಿಗೆ ತೆರಳಿರುವ ಭವಾನಿ ರೇವಣ್ಣ ಅವರನ್ನು ಸದ್ಯ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಭವಾನಿ ರೇವಣ್ಣ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಎಸ್‌ಐಟಿ ಅಧಿಕಾರಿಗಳು ವಿಚಾರಣೆಗಾಗಿ ಭವಾನಿ ರೇವಣ್ಣಗೆ ಮೂರು ಬಾರಿ ನೋಟಿಸ್ ನೀಡಿದ್ದರು. ಆದರೂ, ಸಹ ಪ್ರತಿಕ್ರಿಯೆ ನೀಡಿರಲಿಲ್ಲ.
ಹದಿನೈದು ದಿನಗಳಿಂದ ತಲೆಮರೆಸಿಕೊಂಡಿರುವ ಭವಾನಿಯವರನ್ನು ಬಂಧಿಸಲು ಎಸ್‌ಐಟಿ ಪೊಲೀಸ್ ತಂಡಗಳನ್ನು ರಚನೆ ಮಾಡಿತ್ತು. ಬೆಂಗಳೂರಿಗೆ ಹಿಂದಿರುಗುವ ಮೊದಲು ಎಸ್‌ಐಟಿ ಇತ್ತೀಚೆಗೆ ಹೊಳೆನರಸೀಪುರದ ಅವರ ನಿವಾಸದಲ್ಲಿ ಭವಾನಿಗಾಗಿ ಕನಿಷ್ಠ ಏಳು ಗಂಟೆಗಳ ಕಾಲ ಕಾದು ವಾಪಸಾಗಿತ್ತು.
ಮೈಸೂರು ಜಿಲ್ಲೆಯ ಕೆ.ಆರ್.ನಗರ ಪೊಲೀಸರು ಮಹಿಳೆಯ ಅಪಹರಣ ಮತ್ತು ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಗೆ ಬೇಕಾಗಿರುವ ಭವಾನಿ ರೇವಣ್ಣ ವಿರುದ್ಧ ಬೆಂಗಳೂರಿನ 42 ನೇ ಎಸಿಎಂಎಂ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ. ಪ್ರಕರಣದಲ್ಲಿ ಭವಾನಿ ಭಾಗಿಯಾಗಿರುವ ಬಗ್ಗೆ ಎಸ್‌ಐಟಿ ವಿವರವಾದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಬಂಧನ ಭೀತಿಯಲ್ಲಿದ್ದ ಭವಾನಿ ರೇವಣ್ಣ ಎಸ್‌ಐಟಿ ಕೈಗೆ ಇಷ್ಟು ದಿನ ಸಿಗದೇ ತಲೆಮರೆಸಿಕೊಂಡಿದ್ದರು. ಜಾಮೀನಿಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ರಾಜ್ಯಾದ್ಯಂತ ಗುಡುಗು ಸಿಡಿಲಿನ ಜತೆಗೆ ಮುಂದುವರೆದ ಮಳೆ
ಹೈಕೋರ್ಟ್ ಶುಕ್ರವಾರ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಇದರೊಂದಿಗೆ ಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ವಿಚಾರಣೆ ಹಾಜರಾಗಬೇಕು, ಎಸ್‌ಐಟಿ ಅಧಿಕಾರಿಗಳ ತನಿಖೆ, ವಿಚಾರಣೆಗೆ ಸಹಕರಿಸಬೇಕು ಎಂದು ಸೂಚನೆ ನೀಡಿದೆ. ಅಲ್ಲದೆ, ಭವಾನಿ ರೇವಣ್ಣ ಅವರು ಕೆ.ಆರ್.ನಗರ ಹಾಗೂ ಹಾಸನಕ್ಕೆ ಕಾಲಿಡುವಂತಿಲ್ಲ ಎಂದು ಹೈಕೊರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.