- ಸೂರ್ಯ ನಡುನೆತ್ತಿಗೆ ಬರುವ ಸಮಯದಲ್ಲಿ ‘ಶೂನ್ಯ ನೆರಳಿನ ದಿನ’ ಘಟಿಸುತ್ತದೆ
- ರಾಜ್ಯದಲ್ಲಿ ಏ.22 ರಿಂದ ಮೇ 11 ರವರೆಗೆ ಶೂನ್ಯ ನೆರಳಿನ ದಿನ ಇರಲಿದೆ
ರಾಜ್ಯದಲ್ಲಿ ಏ.22 ರಿಂದ ಮೇ 11 ರವರೆಗೆ ಶೂನ್ಯ ನೆರಳಿನ ದಿನ ಇರಲಿದ್ದು, ಬೆಂಗಳೂರಿನಲ್ಲಿ ಏ. 25ರಂದು ಇರಲಿದೆ.
ಬೆಂಗಳೂರಿನಲ್ಲಿ ಏ. 25 ರಂದು ಮಧ್ಯಾಹ್ನ 12.17ಕ್ಕೆ ಸೂರ್ಯನು ನೇರವಾಗಿ ತಲೆಯ ಮೇಲೆ ಇರುತ್ತಾನೆ. ಹಾಗಾಗಿ, ನಮ್ಮ ನೆರಳು ನೇರವಾಗಿ ನಮ್ಮ ಕಾಲ ಕೆಳಗೆ ಇರುತ್ತದೆ.
“ಇದು ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ನಡುವಿನ ಸ್ಥಳಗಳಲ್ಲಿ ಸಂಭವಿಸುತ್ತದೆ. ಬೆಂಗಳೂರಿನಲ್ಲಿ ಏ.25 ಮತ್ತು ಆ. 18ರಂದು ಸಂಭವಿಸುತ್ತದೆ” ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಹೇಳಿದೆ.
“ಈ ಶೂನ್ಯ ನೆರಳು ದಿನವನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಕ್ಯಾಂಪಸ್ನಲ್ಲಿ ಆಚರಿಸಲಾಗುತ್ತಿದೆ. ಶೂನ್ಯ ನೆರಳು ದಿನವನ್ನು ಪ್ರದರ್ಶಿಸಲು ಸಾರ್ವಜನಿಕ ಭಾಷಣವನ್ನು ಆಯೋಜಿಸುತ್ತಿದ್ದೇವೆ. ವಸ್ತುಗಳ ಬದಲಾಗುತ್ತಿರುವ ನೆರಳಿನ ಉದ್ದದ ಪರಿಣಾಮವನ್ನು ಗಮನಿಸುವುದರ ಜೊತೆಗೆ ಭೇಟಿ ನೀಡುವ ಸಾರ್ವಜನಿಕರಿಂದ ನೆರಳಿನ ಉದ್ದ ಅಳೆಯುವುದು ಒಳಗೊಂಡಿರುತ್ತದೆ” ಎಂದಿದೆ.
“ಬೇರೆ ಶಾಲೆಗಳ ಸಹಯೋಗದೊಂದಿಗೆ ಭೂಮಿಯ ವ್ಯಾಸವನ್ನು ಅಳೆಯುತ್ತೇವೆ. ಬೆಂಗಳೂರಿನಲ್ಲಿ ಏ. 25ರಂದು ಮಧ್ಯಾಹ್ನ 12:17ಕ್ಕೆ ಸೂರ್ಯನು ನೇರವಾಗಿ ತಲೆಯ ಮೇಲಿರುವುದು ಶೂನ್ಯ ನೆರಳುಗಳ ಕ್ಷಣ” ಎಂದು ಹೇಳಿದೆ.
ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾದ ಪ್ರಕಾರ, ಈ ವಾರ್ಷಿಕ ಆಕಾಶ ವಿದ್ಯಮಾನವು +23.5 ಮತ್ತು -23.5 ಡಿಗ್ರಿ ಅಕ್ಷಾಂಶದ ನಡುವಿನ ಸ್ಥಳಗಳಲ್ಲಿ ವರ್ಷಕ್ಕೆ ಎರಡು ಬಾರಿ ಸಂಭವಿಸುತ್ತದೆ. ಸೂರ್ಯನು ಮಧ್ಯಾಹ್ನದ ಸಮಯದಲ್ಲಿ ನಿಖರವಾಗಿ ತಲೆಯ ಮೇಲೆ ಇರುವುದಿಲ್ಲ. ಆದರೆ ಸಾಮಾನ್ಯವಾಗಿ ಎತ್ತರದಲ್ಲಿ ಸ್ವಲ್ಪ ಕಡಿಮೆ, ಸ್ವಲ್ಪ ಉತ್ತರಕ್ಕೆ ಅಥವಾ ಸ್ವಲ್ಪ ದಕ್ಷಿಣಕ್ಕೆ ಸಾಗುತ್ತಾನೆ.
ಜವಾಹರಲಾಲ್ ನೆಹರು ತಾರಾಲಯವು ಏ.25ರಂದು ಶೂನ್ಯ ನೆರಳು ದಿನದ ಕುರಿತು ಜನತೆಗೆ ಅರಿವು ಮೂಡಿಸಲು ಮತ್ತು ಇದರ ವಿಶೇಷತೆಗಳೆಡೆಗೆ ಬೆಳಕು ಚೆಲ್ಲುವ ಸಲುವಾಗಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ ಹಲವು ಆಸಕ್ತಿದಾಯಕ ವಿಜ್ಞಾನ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.
ಏನಿದು ಶೂನ್ಯ ನೆರಳು?
ಸೂರ್ಯ ನಡುನೆತ್ತಿಗೆ ಬರುವ ಸಮಯದಲ್ಲಿ ‘ಶೂನ್ಯ ನೆರಳಿನ ದಿನ’ವು ಘಟಿಸುತ್ತದೆ. 13 ಡಿಗ್ರಿ ಉತ್ತರ ರೇಖಾಂಶದ ಮೇಲಿರುವ ಇತರ ಸ್ಥಳಗಳಲ್ಲಿ ವಿವಿಧ ಸಮಯದಲ್ಲಿ ಈ ಶೂನ್ಯ ನೆರಳಿನ ಘಟನೆಯು ಸಂಭವಿಸುತ್ತದೆ.
ಆಗಸದಲ್ಲಿ ಸೂರ್ಯ ಉತ್ತರ ದಿಕ್ಕಿಗೆ ಚಲಿಸುವ ವೇಳೆ ನಮ್ಮ ತಲೆಯ ನೇರದಲ್ಲಿ ಹಾದು ಹೋಗುತ್ತಾನೆ. ಸೂರ್ಯನು ನಮ್ಮ ತಲೆಯ ಮೇಲಿರುವಾಗ ನಮ್ಮ ನೆರಳು ನೇರವಾಗಿ ನಮ್ಮ ಕಾಲ ಕೆಳಗಿರುತ್ತದೆ. ಹೀಗಾಗಿ, ನೆರಳು ಗೋಚರಿಸುವುದಿಲ್ಲ. ಯಾವುದೇ ಲಂಬ ವಸ್ತುವಿನ ನೆರಳು ನೆಲಕ್ಕೆ ಬೀಳುವುದಿಲ್ಲ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮತದಾನ ಅತ್ಯಮೂಲ್ಯ; ತಪ್ಪದೆ ಮತದಾನ ಮಾಡಲು ಬಿಬಿಎಂಪಿ ವಿಶೇಷ ಆಯುಕ್ತ ಮನವಿ
ಭೂಮಿಯು 23.5 ಡಿಗ್ರಿ ಕೋನದಲ್ಲಿ ಬಾಗಿರುವುದರಿಂದ, ಭೂಮಿಯು ಸೂರ್ಯನ ಸುತ್ತ ಚಲಿಸುವಾಗ ಸೂರ್ಯ ಉತ್ತರದಿಂದ ದಕ್ಷಿಣಕ್ಕೆ ಚಲಿಸುವಂತೆ ಕಾಣುತ್ತದೆ. ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ನಡುವೆ ವಾಸಿಸುವ ಜನರಿಗೆ ಏಪ್ರಿಲ್, ಮೇ ಮತ್ತು ಆಗಸ್ಟ್ನಲ್ಲಿ ವರ್ಷದ ಎರಡು ದಿನ ಸೂರ್ಯ ಉತ್ತುಂಗದಲ್ಲಿ ಕಾಣಿಸಿಕೊಳ್ಳುತ್ತಾನೆ.
ಶೂನ್ಯ ದಿನ ಎಲ್ಲೆಲ್ಲಿ? ಯಾವತ್ತು?
ಏ.23ರಂದು ಮಂಡ್ಯ, ಪುತ್ತೂರು
ಏ.24ರಂದು ದಕ್ಷಿಣ ಕನ್ನಡ, ಹಾಸನ, ಬೆಂಗಳೂರು
ಏ.25ರಂದು ಉಡುಪಿ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ
ಏ.26ರಂದು ಕುಂದಾಪುರ, ತೀರ್ಥಹಳ್ಳಿ, ಗೌರಿಬಿದನೂರು
ಏ.27ರಂದು ಭಟ್ಕಳ, ಶಿವಮೊಗ್ಗ, ಚನ್ನಗಿರಿ
ಏ.28ರಂದು ಹೊನ್ನಾವರ, ಕುಮಟಾ, ಶಿಕಾರಿಪುರ, ಚಿತ್ರದುರ್ಗ
ಏ.29ರಂದು ಗೋಕರ್ಣ, ಶಿರಸಿ, ರಾಣೆಬೆನ್ನೂರು, ದಾವಣಗೆರೆ
ಏ.30ರಂದು ಕಾರವಾರ, ಹಾವೇರಿ,
ಮೇ 1ರಂದು ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ
ಮೇ 2ರಂದು ಧಾರವಾಡ, ಗದಗ
ಮೇ 3ರಂದು ಬೆಳಗಾವಿ, ಸಿಂಧನೂರು
ಮೇ 4ರಂದು ಗೋಕಾಕ್, ಬಾಗಲಕೋಟೆ, ರಾಯಚೂರು
ಮೇ 6ರಂದು ಯಾದಗಿರಿ
ಮೇ 7ರಂದು ವಿಜಯಪುರ
ಮೇ 9ರಂದು ಕಲಬುರಗಿ
ಮೇ 10ರಂದು ಹುಮ್ನಾಬಾದ್
ಮೇ 11 ರಂದು ಬೀದರ್.