ವೃತ್ತಿಯಿಂದ ಕಾರು ಚಾಲಕನಾದ ಚಿಕ್ಕನಾಯಕನಹಳ್ಳಿಯ ಮಹಮದ್ ಹುಸೇನ್ ತನ್ನ ಕಾರನ್ನು ‘ಪಾರ್ಕ್’ ಮಾಡಲು ದಿನಾ ನೆರಳಿರುವ ಜಾಗವನ್ನೇ ಹುಡುಕುತ್ತಿದ್ದಾಗ, ಗಾಳಿ-ನೆರಳು ನೀಡುವ ಮರ-ಗಿಡಗಳ ಪ್ರಾಮುಖ್ಯತೆಯ ಬಗ್ಗೆ ಅರಿವಾಯಿತಂತೆ. ಪರಿಸರ ನಾಶ, ಮರಗಿಡ ನಾಶ, ವಾಯು ಮಾಲಿನ್ಯಗಳು ಹೇಗೆ ಮನುಷ್ಯನ ದೈನಂದಿನ ಬದುಕಿನ ಮೇಲೆ ಎಂಥ ದುಷ್ಪರಿಣಾಮ ಬೀರುತ್ತಿವೆ ಎಂಬ ಭಯ ಶುರುವಾಯಿತಂತೆ. ಈ ಬಗ್ಗೆ, ತಮ್ಮ ‘ಕಾರು ಚಾಲಕ ಮತ್ತು ಮಾಲೀಕರ ಸಂಘ’ದ ಗೆಳೆಯರಾದ ಕೊಡಲಾಗರ ಯೋಗೀಶ್, ಲಕ್ಷ್ಮಿಕಾಂತ್, ಪುನೀತ್ ಮತ್ತು ಗೌಸ್ ಮೊಹಿಯುದ್ದೀನ್ ಅವರ ಜೊತೆ ಚರ್ಚಿಸಿದ್ದಾರೆ. ಗೆಳೆಯರೆಲ್ಲ ಸೇರಿ ಗಿಡ ನೆಡುವ ಅಭಿಯಾನ ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ‘ನೆರಳು-ನಮ್ಮೊಳಗಿನ ಬೆಳಕು’ ಎಂಬ ಪರಿಸರ-ಸ್ನೇಹಿ, ಗಿಡ-ಮರ ಪ್ರೇಮಿ ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ.
ಅರಣ್ಯ ಇಲಾಖೆಯ ಸಹಕಾರದಿಂದ ಮೊದಲಿಗೆ ಸಸ್ಯಸಂತೆ ಎಂಬ ಉಚಿತ ಸಸ್ಯ ವಿತರಣೆ ಮಾಡುವ ಕಾರ್ಯಕ್ರಮವನ್ನು ಸಂಘಟನೆ ನಡೆಸಿತು. ಇದರಿಂದ ಜನರಲ್ಲಿ ಜಾಗೃತಿ ಮೂಡಿಸಿದಂತಾಯ್ತು. ಜನ ಗಿಡಗಳನ್ನು ತಮ್ಮ ಮನೆ-ಜಮೀನುಗಳಿಗೆ ಕೊಂಡೊಯ್ದರು. ಸಸ್ಯಸಂತೆ ಕಾರ್ಯಕ್ರಮವೂ ಯಶಸ್ಸಾಯಿತು.

ನಂತರ, ಸೀಡ್ ಬಾಲ್ (ಬೀಜದುಂಡೆ) ಬಿತ್ತನೆ ಕಾರ್ಯಕ್ರಮ ನಡೆಸಲಾಯ್ತು. ತಾಲ್ಲೂಕು ಆಡಳಿತ, ಅರಣ್ಯ ಇಲಾಖೆ, ಸರ್ಕಾರಿ ನೌಕರರು, ಸಾರ್ವಜನಿಕರು, ಸಂಘ-ಸಂಸ್ಥೆಗಳು, ಶಾಲಾ-ಕಾಲೇಜು ಮಕ್ಕಳನ್ನು ಒಗ್ಗೂಡಿಸಿ ಸುಮಾರು 3 ಲಕ್ಷ ಸೀಡ್ ಬಾಲ್ಸ್ ಬಿತ್ತನೆ ಮಾಡಿಸಲಾಯ್ತು. ಈ ಕಾರ್ಯಕ್ರಮಕ್ಕೆ ಯಲ್ಲಪ್ಪ ರೆಡ್ಡಿಯವರು ಮುಖ್ಯ ಅತಿಥಿಯಾಗಿ ಬಂದಿದ್ದರು.
ಜಲಮೂಲಗಳ ಪುನರುಜ್ಜೀವನ:
ದೇವಸ್ಥಾನಗಳ ಪಾಳುಬಿದ್ದ ಕಲ್ಯಾಣಿಗಳನ್ನು ಶುಚಿಗೊಳಿಸಿ, ಜಲ ಸೆಲೆ ಉಕ್ಕುವಂತೆ ದುರಸ್ತಿಗೊಳಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಯ್ತು. ಈ ನಿಟ್ಟಿನಲ್ಲಿ ನಿರಂತರವಾಗಿ ಜಲಮೂಲಗಳನ್ನು ಪುನರುಜ್ಜೀವಗೊಳಿಸುವ ಅಭಿಯಾನ ನಡೆಸುತ್ತಿರುವ ಮಹಮದ್ ಹುಸೇನ್, ಇಂದು ಜಿಲ್ಲೆಯಾದ್ಯಂತ ಇರುವ ಕೆಲವೇ ಕೆಲಮಂದಿ ಪರಿಸರ-ರಕ್ಷಣಾ ಯೋಧರಲ್ಲಿ ಪರಿಗಣಿಸಲ್ಪಡುವ ಪ್ರಮುಖ ಹೆಸರು.
ತಾತಯ್ಯನ ಗೋರಿ ಎದುರು ಗಿಡ ನೆಡುವ ಕಾರ್ಯಕ್ರಮ ಹಾಗೂ ಪಟ್ಟಣದ ಖಾಲಿ ಜಾಗಗಳಲ್ಲಿ ಗಿಡ ನೆಡುವ ಕೆಲಸ ಸಾಧಿಸಿದ ನೆರಳು ತಂಡ, ಗುಡ್ಡಗಾಡು ಅರಣ್ಯ ಮತ್ತು ತಾಲ್ಲೂಕಿನ ಗುಡ್ಡಬೆಟ್ಟಗಳ ಹುಲ್ಲುಗಾವಲುಗಳ ರಕ್ಷಣೆಯ ಬಗ್ಗೆ ಹೊರಳಿಕೊಂಡಿದೆ. ತೀರ್ಥರಾಮಪುರ ಅರಣ್ಯ ಪ್ರದೇಶ ಮತ್ತು ಸುತ್ತಲಿನ ಬಯಲು ಮತ್ತು ಗುಡ್ಡಗಾಡು ಹುಲ್ಲುಗಾವಲುಗಳ ರಕ್ಷಣೆಗೇ ಈಗ ಪ್ರಾಧಾನ್ಯತೆ ನೀಡಲಾಗಿದೆ.
ತೀರ್ಥರಾಮಪುರ ರಕ್ಷಿತಾರಣ್ಯ:
ಚಿಕ್ಕನಾಯಕನಹಳ್ಳಿ ತಾಲೂಕಿನ ತೀರ್ಥರಾಮಪುರ ಅರಣ್ಯ ಪ್ರದೇಶದಲ್ಲಿ ನೆರಳು ತಂಡದಿಂದ ಪ್ರಾಣಿ, ಪಕ್ಷಿ, ಕಾಡುಪ್ರಾಣಿಗಳ ಕುಡಿಯುವ ನೀರಿನ ವ್ಯವಸ್ಥೆಗಾಗಿ ನೀರು ತೊಟ್ಟಿಗಳನ್ನು ಕಟ್ಟಿಸಲಾಗಿದೆ. ಮತ್ತು ಅಳಿವಿನಂಚಿನಲ್ಲಿರುವ ಕೊಂಡೆಕುರಿ’ಯ ಬಗ್ಗೆ ವಿಶೇಷ ಗಮನ ಕೊಡಲಾಗಿದೆ. ಪರಿಸರ-ಸ್ನೇಹಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪೂರಕವಾದ ಪ್ರವಾಸೋದ್ಯಮಕ್ಕೆ ಇಲ್ಲಿ ಅವಕಾಶವಿದೆ. ಹಾಗಾಗಿ, ಈಯಿಡೀ ತೀರ್ಥರಾಮಪುರ ಗುಡ್ಡಗಾಡು ಅರಣ್ಯ ವಲಯವನ್ನು ರಕ್ಷಿತಾರಣ್ಯ ಅಥವಾ ಸಂರಕ್ಷಿತ ಪ್ರದೇಶವ ಎಂದು ಸರ್ಕಾರ ಘೋಷಿಸಿಬಿಟ್ಟರೆ, ಇಲ್ಲಿರುವ ಅರೆ ಮಲೆನಾಡಿನ ಅತ್ಯಮೂಲ್ಯ ಸಸ್ಯಸಂಪತ್ತು ಉಳಿಯುತ್ತದೆ. ಇರುವ ಕೆಲವೇ ಕೆಲವು ಜಾತಿ ಪ್ರಬೇಧಗಳ ವನ್ಯಜೀವಿಗಳು ನಿರಾತಂಕವಾಗಿ ಉಸಿರಾಡಿಕೊಂಡಿರುತ್ತವೆ.

ಮೂಲತಃ ಗಣಿ ಬಾಧಿತ ಪ್ರದೇಶ ಇದಾದ್ದರಿಂದ ಮತ್ತೆ ಈ ಭಾಗದಲ್ಲಿ ಗಣಿಗಾರಿಕೆ ಆರಂಭಿಸಿಬಿಡುವ ಸಾಧ್ಯತೆಗಳಿವೆ. ಗಣಿಗಾರಿಕೆಯಿಂದ ಇಲ್ಲಿ ಈಗಾಗಲೇ ಸಾಕಷ್ಟು ಹಾನಿಯಾಗಿದೆ. ಇಲ್ಲಿನ ವೈವಿಧ್ಯಮಯ ಪರಿಸರ ನಾಶವಾಗಿದೆ. ಇನ್ನುಮುಂದೆ ಹಾಗಾಗದಂತೆ ಸರ್ಕಾರ ಜಾಗ್ರತೆ ವಹಿಸಿ, ತೀರ್ಥರಾಮಪುರ ಅರಣ್ಯಪ್ರದೇಶವನ್ನು ರಕ್ಷಿತಾರಣ್ಯ ಎಂದು ಘೋಷಿಸಿ ಸುತ್ತ ಸರ್ಕಾರಿ ಕಾವಲು ಹಾಕಲಿ ಎಂದು ಮಹಮದ್ ಹುಸೇನ್ ಆಗ್ರಹಿಸುತ್ತಾರೆ.
ಇವರ ಪರಿಸರ ಸ್ನೇಹಿ ಕಾರ್ಯಗಳನ್ನು ಶ್ಲಾಘಿಸಿ ಇವರನ್ನು ಪ್ರೋತ್ಸಾಹಿಸಿದ ಜನರಿದ್ದಂತೆ, ಇವರ ಇಂಥ ಜನಪರ ಕೆಲಸಗಳ ಕಾರಣಕ್ಕೇ ಇವರನ್ನು ಬಾಧಿಸಿದವರೂ ಬಹಳಷ್ಟು ಜನ ಇದ್ದಾರೆ. ಮಹಮದ್ ಹುಸೇನ್ ಮತ್ತು ಅವರ ನೆರಳು ತಂಡ ಇವೆಲ್ಲಕ್ಕೂ ಪ್ರಕೃತಿಯಂತೆಯೇ ಪ್ರತಿಕ್ರಿಯಿಸಿ ಶಾಂತಚಿತ್ತರಾಗಿ ಸತತ ಕ್ರಿಯಾಶೀಲರಾಗಿದ್ದಾರೆ.
ಬರ್ತ್ ಡೇ ಇದೆಯೇ….!?
ಚಿಕ್ಕನಾಯಕನಹಳ್ಳಿ ಗುಂಡ ಎಂದೇ ಪ್ರಖ್ಯಾತಗೊಂಡಿರುವ ಮಹಮದ್ ಹುಸೇನ್ ಸಾರ್ವಜನಿಕರು, ಪರಿಸರ ಹಿತ ಬಯಸುವವರು ಮತ್ತು ಶಾಲಾ ಮಕ್ಕಳು ಹಾಗೂ ಪೋಷಕರ ಬಳಿ ಕೇಳಿಕೊಳ್ಳುತ್ತಿರುವುದು ಒಂದೇ ಮಾತು, ಬರ್ತ್ ಡೇ ಇದೆಯೇ-ಬನ್ನಿ ಒಂದು ಗಿಡ ನೆಡಿ ಎಂದು ‘ನೆರಳು-ನಮ್ಮೊಳಗಿನ ಬೆಳಕು’ ಕರೆಕೊಟ್ಟಿದೆ.