ಲೋಕಸಭೆ ಚುನಾವಣೆಯ ಜನಾದೇಶವು ‘ವಿಭಜನೆ ಮತ್ತು ದ್ವೇಷ ರಾಜಕೀಯ’ವನ್ನು ನಿರ್ಣಾಯಕವಾಗಿ ನಿರಾಕರಿಸಿದೆ. ‘ಇಂಡಿಯಾ’ ಮೈತ್ರಿಕೂಟವು ಸಂತ್ತಿನ ಒಳಗೆ ಮತ್ತು ಹೊರಗೆ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಅವರು ಮಾತನಾಡಿದರು. “ಪಕ್ಷವು ತನ್ನ ಪ್ರಬಲ್ಯವನ್ನು ಪಡೆಯಲು ಮರಳುತ್ತಿದೆ. ಆದರೂ, ಕೆಲವು ರಾಜ್ಯಗಳಲ್ಲಿ ತನ್ನ ಸಾಮರ್ಥ್ಯ ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಅಲ್ಲದೆ, ನಾವು ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಸರ್ಕಾರ ರಚಿಸಿದ್ದ ರಾಜ್ಯಗಳಲ್ಲಿಯೂ ಲೋಕಸಭಾ ಚುನಾವಣೆಯಲ್ಲಿ ಎಡವಿದ್ದೇವೆ” ಎಂದು ಪರಾಮರ್ಶೆ ಮಾಡಿದ್ದಾರೆ.
“ಅಂತಹ ಪ್ರತಿಯೊಂದು ರಾಜ್ಯಗಳ ಬಗ್ಗೆ ಪ್ರತ್ಯೇಕ ಚರ್ಚೆಗಳನ್ನು ಶೀಘ್ರದಲ್ಲೇ ನಡೆಸಲಾಗುವುದು. ನಾವು ತುರ್ತು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಆ ರಾಜ್ಯಗಳಲ್ಲಿ ನಮಗೆ ಅವಕಾಶಗಳಿವೆ. ಅದನ್ನು ನಾವು ನಮ್ಮ ಸ್ವಂತ ಲಾಭಕ್ಕಾಗಿ ಬಳಸದೆ, ಜನರ ಅನುಕೂಲಕ್ಕಾಗಿ ಬಳಸಿಕೊಳ್ಳಬೇಕು. ಎಲ್ಲ ರಾಜ್ಯಗಳಲ್ಲಿ ಚರ್ಚೆಗಳನ್ನು ನಾನು ಶೀಘ್ರದಲ್ಲೇ ನಡೆಸಲು ಪ್ರಸ್ತಾಪಿಸುತ್ತೇನೆ” ಎಂದು ಹೇಳಿದರು.
“ಪಕ್ಷ ಅಧಿಕಾರದಲ್ಲಿದ್ದರೂ ಇಲ್ಲದಿದ್ದರೂ ಜನರ ನಡುವೆ 24 ಗಂಟೆ 365 ದಿನವೂ ಕೆಲಸ ಮಾಡಬೇಕು. ಆಡಳಿತ ಪಕ್ಷದ ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವ ವಿರೋಧಿ ಧೋರಣೆಯ ಬಗ್ಗೆ ಜನರ ಮಾತನಾಡುತ್ತಿದ್ದಾರೆ. ಇದು ಕಳೆದ 10 ವರ್ಷಗಳ ರಾಜಕೀಯದ ನಿರ್ಣಾಯಕ ನಿರಾಕರಣೆಯಾಗಿದೆ. ನಾವು ಜನರ ದನಿಯಾಗಿ ಮುಂದುವರೆಯಬೇಕು” ಎಂದರು.
“ಭಾರತ್ ಜೋಡೋ ಯಾತ್ರೆ ಹೋದಲ್ಲೆಲ್ಲ ಕಾಂಗ್ರೆಸ್‌ಗೆ ಶೇಕಡಾವಾರು ಮತಗಳು ಮತ್ತು ಸ್ಥಾನಗಳನ್ನು ಹೆಚ್ಚಾಗಿರುವುದನ್ನು ಕಂಡಿದ್ದೇವೆ. ಮಣಿಪುರದ ಎರಡೂ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ನಾಗಾಲ್ಯಾಂಡ್, ಅಸ್ಸಾಂ ಮತ್ತು ಮೇಘಾಲಯದಲ್ಲೂ ಪಕ್ಷವು ನಾನಾ ಕ್ಷೇತ್ರಗಳನ್ನು ಗೆದ್ದಿದೆ” ಎಂದು ಹೇಳಿದರು.
“ಮಹಾರಾಷ್ಟ್ರದಲ್ಲಿ ನಾವು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ. ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಸಮಾಜದ ಎಲ್ಲ ವರ್ಗಗಳ ಜನರು ಕಾಂಗ್ರೆಸ್‌ಅನ್ನು ಬೆಂಬಲಿಸಿದ್ದಾರೆ” ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
“ಇದಲ್ಲದೆ, ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಮತದಾರರ ಪ್ರಾಬಲ್ಯವಿರುವ ಸ್ಥಾನಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಪಕ್ಷವು ಹಲವು ಸ್ಥಾನಗಳನ್ನು ಗೆದ್ದಿದೆ. ನಗರ ಪ್ರದೇಶಗಳಲ್ಲೂ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಗಿದೆ” ಎಂದರು.
“ಇಂಡಿಯಾ ಮೈತ್ರಿಕೂಟದ ಪ್ರತಿಯೊಂದು ಪಕ್ಷಗಳೂ ವಿವಿಧ ರಾಜ್ಯಗಳಲ್ಲಿ ದೊಡ್ಡ ಕೊಡುವೆ ನೀಡಿವೆ. ‘ಇಂಡಿಯಾ’ ಕೂಟ ಮುಂದುವರೆಯಬೇಕು ಎಂಬುದು ನಮ್ಮ ಸಂಕಲ್ಪವಾಗಿದೆ. ನಾವು ಸಂಸತ್ತಿನಲ್ಲಿ ಮತ್ತು ಹೊರಗೆ ಒಗ್ಗಟ್ಟಾಗಿ ಮತ್ತು ಸಾಮೂಹಿಕವಾಗಿ ಕಾರ್ಯನಿರ್ವಹಿಸಬೇಕು” ಎಂದು ಅವರು ಹೇಳಿದರು.
ಚುನಾವಣೆಯಲ್ಲಿ ನಿರ್ಣಾಯಕ ಕೆಲಸ ಮಾಡಿದ ರೈತರು, ಹಿಂದುಳಿದ ವರ್ಗಗಳ ಪರವಾಗಿ ಕೆಲಸ ಮಾಡುವ ಸಂಘಟನೆಗಳು, ನಾಗರಿಕ ಸಮಾಜ ಗುಂಪುಗಳು, ಎನ್‌ಜಿಒಗಳು, ಸಣ್ಣ ವ್ಯಾಪಾರಿಗಳು, ವಕೀಲರು, ಬುದ್ಧಿಜೀವಿಗಳು, ಸ್ವತಂತ್ರ ಮಾಧ್ಯಮಗಳು ಮತ್ತು ಇತರರಿಗೆ ಖರ್ಗೆ ಧನ್ಯವಾದ ಹೇಳಿದರು.
ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ಜೈರಾಮ್ ರಮೇಶ್ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖರು, ಇತರ ನಾಯಕರು ಭಾಗವಹಿಸಿದ್ದರು.