ಮೂರನೇ ಅವಧಿಗೆ ಪ್ರಧಾನಿಯಾಗಿ ಮೋದಿ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಲು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರಿಗೆ ಆಹ್ವಾನ ನೀಡಲಾಗಿದ್ದು, ಆಹ್ವಾನವನ್ನು ಮುಯಿಜ್ಜು ಅವರು ಸ್ವೀಕರಿಸಿದ್ದಾರೆ ಎಂದು ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿ ತಿಳಿಸಿದೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿರುವ ಮಾಲ್ಡೀವ್ಸ್ ಕಚೇರಿ, “ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿಗೆ ಭೇಟಿ ನೀಡಿದ್ದ ಭಾರತದ ಹೈಯರ್ ಕಮಿಷನರ್ ಮುನು ಮಹಾವರ್ ಅವರಿಗೆ ಆಹ್ವಾನ ಪತ್ರವನ್ನು ನೀಡಿದ್ದರು. ಆಹ್ವಾನವನ್ನು ಸ್ವೀಕರಿಸಿರುವ ಅಧ್ಯಕ್ಷರು ಸಮಾರಂಭದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ” ಎಂದು ಹೇಳಿದೆ.
ಆಹ್ವಾನಕ್ಕಾಗಿ ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿರುವ ಅಧ್ಯಕ್ಷ ಮುಯಿಝು, “ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಹಾಜರಾಗುವ ಮೂಲಕ ಮೋದಿಗೆ ಅವರಿಗೆ ಗೌರವ ನೀಡಲಾಗುವುದು” ಎಂದು ಹೇಳಿದರು.
“ಭಾರತದೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಭಾರತದ ಪ್ರಧಾನ ಮಂತ್ರಿಯೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ. ಮಾಲ್ಡೀವ್ಸ್-ಭಾರತದ ಸಂಬಂಧಗಳು ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿವೆ ಎಂಬುದು ಹೈಯರ್ ಕಮಿಷನರ್ ಭೇಟಿಯಿಂದ ಸಾಬೀತಾಗಿದೆ” ಎಂದು ಮಾಲ್ಡೀವ್ಸ್ ಪ್ರಕಟಣೆ ತಿಳಿಸಿದೆ.
ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ, ಎನ್ಡಿಎ ಸರ್ಕಾರ ರಚಿಸುವುದು ಖಚಿತವಾದ ಬಳಿಕ ಬುಧವಾರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ಮಾಲ್ಡೀವ್ಸ್ ಅಧ್ಯಕ್ಷರು, “ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೇತೃತ್ವದ ಎನ್ಡಿಎ, 2024ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಸತತ ಮೂರನೇ ಅವಧಿಗೆ ಆಯ್ಕೆಯಾಗಿರುವುದಕ್ಕೆ ಅಭಿನಂದನೆಗಳು. ಸಹಭಾಗಿತ್ವದಲ್ಲಿ ಉಭಯ ರಾಷ್ಟ್ರಗಳ ಹಿತಾಸಕ್ತಿಗಳನ್ನು ಮುನ್ನಡೆಸಲು ಒಟ್ಟಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದಿದ್ದರು.
ಪೋಸ್ಟ್ಗೆ ಪ್ರತಿಕ್ರಿಯಿಸಿದ್ದ ಮೋದಿ, “ಮಾಲ್ಡೀವ್ಸ್ ಅಧ್ಯಕ್ಷರಿಗೆ ಧನ್ಯವಾದಗಳು. ಮಾಲ್ಡೀವ್ಸ್ ಹಿಂದು ಮಹಾಸಾಗರ ಪ್ರದೇಶದಲ್ಲಿ ನಮ್ಮ ಮೌಲ್ಯಯುತ ಪಾಲುದಾರ ಮತ್ತು ನೆರೆಹೊರೆಯ ರಾಷ್ಟ್ರವಾಗಿದೆ. ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಾನು ಸಹಕಾರಕ್ಕಾಗಿ ಎದುರು ನೋಡುತ್ತಿದ್ದೇನೆ” ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿದ್ದರು.
ಚೀನಾ ಪರವಾದ ನಿಲುವು ಹೊಂದಿದ್ದ ಮುಯಿಝು ಅವರು ಕಳೆದ ವರ್ಷ ನವೆಂಬರ್ 17ರಂದು ಮಾಲ್ಡೀವ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು ಈ ವರ್ಷದ ಜನವರಿಯಲ್ಲಿ ತನ್ನ ಮೊದಲ ವಿದೇಶಿ ಭೇಟಿಯಲ್ಲಿ ಮೊದಲು ಟರ್ಕಿ ಮತ್ತು ಚೀನಾಕ್ಕೆ ಭೇಟಿ ನೀಡಿದ್ದರು. ಅಲ್ಲದೆ, ಮಾಲ್ಡೀವ್ಸ್ನಿಂದ ಸುಮಾರು 88 ಭಾರತೀಯ ಸೇನಾ ಸಿಬ್ಬಂದಿಯನ್ನು ಹಿಂಪಡೆಯುವಂತೆ ಭಾರತವನ್ನು ಒತ್ತಾಯಿಸಿದ್ದರು. ಇದು, ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಬಿರುಕಿಗೆ ಕಾರಣವಾಗಿತ್ತು. ಪ್ರತಿಯಾಗಿ, ಭಾರತೀಯರು ‘ಬಾಯ್ಕಾಟ್ ಮಾಲ್ಡೀವ್ಸ್’ ಅಭಿಯಾನ ನಡೆಸಿದ್ದರು.
ಭಾನುವಾರ ನಡೆಯಲಿರುವ ಪ್ರಧಾನಿ ಮೋದಿಯವರ ಪ್ರಮಾಣ ವಚನ ಸಮಾರಂಭದಲ್ಲಿ ಶ್ರೀಲಂಕಾ, ಮಾಲ್ಡೀವ್ಸ್, ಬಾಂಗ್ಲಾದೇಶ, ಮಾರಿಷಸ್, ನೇಪಾಳ ಮತ್ತು ಭೂತಾನ್ ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ” “ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ; ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು; ಸೆಶೆಲ್ಸ್ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಶನಿವಾರ ತಿಳಿಸಿದೆ.