ದನಗಳನ್ನು ಸಾಗಿಸುತ್ತಿದ್ದ ಇಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದ ರಾಯ್ಪುರ ಜಿಲ್ಲೆಯಲ್ಲಿ ನಡೆದಿದೆ. ಅವರ ಮೃತದೇಹಗಳ ಮೇಲೆ ಗಂಭೀರ ಗಾಯಗಳು ಕಂಡುಬಂದಿದ್ದು, ಅವರನ್ನು ಗುಂಪುಹತ್ಯೆ ಮಾಡಲಾಗಿದೆ ಎಂದು ಅವರ ಕುಟುಂಬಸ್ಥರು ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆದರೆ, ಅವರನ್ನು ಗುಂಪು ಹತ್ಯೆ ಮಾಡಲಾಗಿದೆ ಎಂಬುದನ್ನು ಯಾವುದೇ ಪುರಾವೆಗಳಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಪ್ರಕರಣದಲ್ಲಿ ಮತ್ತಷ್ಟು ಮಾಹಿತಿ ತಿಳಿಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಯ್ಪುರ-ಮಹಾಸಮುಂಡ್ ಜಿಲ್ಲೆಗಳ ಗಡಿಯ ಪ್ರದೇಶದಲ್ಲಿ ಮಹಾನದಿಯ ಬಳಿ ಮೃತದೇಹಗಳು ಪತ್ತೆಯಾಗಿವೆ. ಅವರ ದನಗಳನ್ನು ಸಾಗಿಸುತ್ತಿದ್ದ ಟ್ರಕ್ ನದಿಯ ಸೇತುವೆ ಮೇಲೆ ಮತ್ತೆಯಾಗಿದೆ ಎಂದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ರಾಯಪುರ ಗ್ರಾಮಾಂತರ) ಕೀರ್ತನ್ ರಾಥೋಡ್ ತಿಳಿಸಿದ್ದಾರೆ.
ಮೂವರಲ್ಲಿ ಒಬ್ಬರು ಶವವಾಗಿ ಪತ್ತೆಯಾಗಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಮಹಾಸಮುಂಡ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೃತರನ್ನು ಗುಡ್ಡು ಖಾನ್ ಅಲಿಯಾಸ್ ಮೊಹಮ್ಮದ್ ತೆಹ್ಸಿನ್ (35) ಮತ್ತು ಚಾಂದ್ ಮಿಯಾ (33) ಎಂದು ಗುರುತಿಸಲಾಗಿದೆ. ಗಾಯಗೊಂಡ ಸದ್ದಾಂ ಕುರೇಶಿಯನ್ನು ನಂತರ ರಾಯ್ಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.