ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದಲ್ಲಿ ತೆಲುಗು ದೇಶಂ ಪಕ್ಷದ ಚಂದ್ರಶೇಖರ್ ಪೆಮ್ಮಸಾನಿ ಅತ್ಯಂತ ಶ್ರೀಮಂತ ಸಂಸದ ಎಂಬ ಸ್ಥಾನವನ್ನು ಪಡೆದಿದ್ದಾರೆ.
ಚಂದ್ರಬಾಬು ನಾಯ್ಡು ಪಕ್ಷದ ಅಭ್ಯರ್ಥಿಯಾಗಿ ಆಂಧ್ರಪ್ರದೇಶದ ಗುಂಟೂರು ಕ್ಷೇತ್ರದಲ್ಲಿ ಕಣಕ್ಕಿಳಿದು ಗೆದ್ದ 48 ವರ್ಷದ ಚಂದ್ರಶೇಖರ್ ಪೆಮ್ಮಸಾನಿ ಬರೋಬ್ಬರಿ 5,700 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ.
ಚಂದ್ರಶೇಖರ್ ವೈಎಸ್‌ಆರ್‌ಸಿಪಿಯ ಕಿಲಾರಿ ವೆಂಕಟ ರೋಸಯ್ಯರನ್ನು 3.4 ಲಕ್ಷ ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಟಿಡಿಪಿ ನಾಯಕ ಜಯದೇವ್ ಗಲ್ಲಾ ಪ್ರಕಾರ, ಭಾನುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿರುವ ಸಂಸತ್ತು ಸಚಿವರಲ್ಲಿ ಪೆಮ್ಮಸಾನಿ ಕೂಡಾ ಒಬ್ಬರಾಗಲಿದ್ದಾರೆ.
ಇದನ್ನು ಓದಿದ್ದೀರಾ? ಮೋದಿ ಮೊದಲ ಸಮ್ಮಿಶ್ರ ಸರ್ಕಾರ | ಪ್ರಮುಖ ಖಾತೆಗಳಿಗೆ ಜೆಡಿಯು-ಟಿಡಿಪಿ ಪಟ್ಟು: ರೈಲ್ವೆಗಾಗಿ ಹಗ್ಗಜಗ್ಗಾಟ!
ಟಿಡಿಪಿ ಸಂಸದ ಚಂದ್ರಶೇಖರ್ ಪೆಮ್ಮಸಾನಿ ಯಾರು?
ಆಂಧ್ರಪ್ರದೇಶದ ಗುಂಟೂರಿನ ಬುರ್ರಿಪಾಲೆಮ್ ಗ್ರಾಮದಲ್ಲಿ ಜನಿಸಿದ ಚಂದ್ರಶೇಖರ್ ಪೆಮ್ಮಸಾನಿ ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಎಂಬಿಬಿಎಸ್ ಅನ್ನು ಪೂರ್ಣಗೊಳಿಸಿದರು. ಪೆನ್ಸಿಲ್ವೇನಿಯಾದ ಡ್ಯಾನ್‌ವಿಲ್ಲೆಯಲ್ಲಿರುವ ಗೀಸಿಂಗರ್ ವೈದ್ಯಕೀಯ ಕೇಂದ್ರದಲ್ಲಿ ರೆಸಿಡೆನ್ಸಿ ಪಡೆದರು.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ-ಸಿನೈ ಆಸ್ಪತ್ರೆಯಲ್ಲಿ ಸುಮಾರು ಐದು ವರ್ಷಗಳ ಕಾಲ ವೈದ್ಯರಾಗಿ ಕೆಲಸ ಮಾಡಿದ್ದು ಅಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಿಸಿದರು.
ಜೊತೆಗೆ ಆನ್‌ಲೈನ್ ಕಲಿಕಾ ವೇದಿಕೆಯಾದ ಯುವಲ್ಡ್‌ನ (UWorld) ಸ್ಥಾಪಕರು ಮತ್ತು ಸಿಇಒ ಕೂಡಾ ಹೌದು. ಟಿಡಿಪಿ ಎನ್‌ಆರ್‌ಐ ಸೆಲ್‌ನಲ್ಲಿ ಸಕ್ರಿಯ ನಾಯಕರಾಗಿದ್ದಾರೆ ಮತ್ತು ಯುಎಸ್‌ನಲ್ಲಿದ್ದ ಸಮಯದಲ್ಲಿ ಪಕ್ಷದ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಬೇಡಿಕೆಯಿಟ್ಟ ಚಂದ್ರಬಾಬು ನಾಯ್ಡು; ರಾಜಕೀಯದಲ್ಲಿ ಏರಿಳಿತ ಸಾಮಾನ್ಯ ಎಂದ ಟಿಡಿಪಿ ನಾಯಕ
ಚಂದ್ರಶೇಖರ್ ಪೆಮ್ಮಸಾನಿ 2020ರಲ್ಲಿ ಯುಎಸ್‌ನಲ್ಲಿ ಯುವ ಉದ್ಯಮಿಯಾಗಿ ಅರ್ನ್ಸ್ಟ್ ಮತ್ತು ಯಂಗ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪೆಮ್ಮಸಾನಿ ಫೌಂಡೇಶನ್ ಅನ್ನು ಅವರು ಸ್ಥಾಪಿಸಿದ್ದು ಇದು ಆರೋಗ್ಯ ಶಿಬಿರಗಳನ್ನು ನಡೆಸುತ್ತದೆ. ಹಾಗೆಯೇ ಗುಂಟೂರು ಮತ್ತು ನರಸರಾವ್‌ಪೇಟೆಯ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುತ್ತದೆ.
ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ವಿಶ್ಲೇಷಿಸಿದ ಚುನಾವಣಾ ಅಫಿಡವಿಟ್‌ಗಳ ಪ್ರಕಾರ, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ 8,360 ಅಭ್ಯರ್ಥಿಗಳಲ್ಲಿ ಪೆಮ್ಮಸಾನಿ ಅತಿ ಹೆಚ್ಚು ಆಸ್ತಿಯನ್ನು ಹೊಂದಿದ್ದವರು. ಈಗ ಚುನಾವಣೆಯಲ್ಲಿ ಗೆದ್ದ ಬಳಿಕ ಅತೀ ಶ್ರಿಮಂತ ಸಂಸದ ಎನಿಸಿಕೊಂಡಿದ್ದಾರೆ.