ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿರುವ ನೀಟ್ (ಯುಜಿ) ಪರೀಕ್ಷೆಯ ಫಲಿತಾಂಶದಲ್ಲಿ ಅಕ್ರಮ ನಡೆದಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಕುರಿತು ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಭಾರತೀಯ ವಿದ್ಯಾರ್ಥಿ ಪರಿಷತ್ (ಎಸ್‌ಎಫ್‌ಐ) ಜಿಲ್ಲಾ ಘಟಕದ ಮುಖಂಡ ಗಣೇಶ ರಾಠೋಡ್ ಆಗ್ರಹಿಸಿದರು.
ಜೂನ್ 4ರಂದು ನೀಟ್ -ಯುಜಿ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾದ ನಂತರ, ಎನ್‌ಟಿಎ ನಡವಳಿಕೆಯ ಬಗ್ಗೆ ದೇಶಾದ್ಯಂತ ಸಾಕಷ್ಟು ದೂರುಗಳು ಬರುತ್ತಿವೆ. ಎನ್‌ಟಿಎ ಜಾರಿಗೆ ಬಂದಾಗಿನಿಂದ ಪ್ರಮುಖ ಪರೀಕ್ಷೆಗಳ ಗಂಭೀರ ಅವ್ಯವಹಾರಗಳ ಮುಂದುವರಿಕೆಯಾಗಿದೆ.ಎನ್‌ಟಿಎ ಸಂಸ್ಥೆಯು ಪ್ರವೇಶವನ್ನು ನಡೆಸಲು ಅಸಮರ್ಥ ಮತ್ತು ಅನರ್ಹವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಗಜೇಂದ್ರಗಡದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ಎಂಬಿಬಿಎಸ್ -ಬಿಡಿಎಸ್ ಪದವಿ ಹಂತದ ಪ್ರವೇಶ ಪರೀಕ್ಷೆಯಲ್ಲಿ ಒಟ್ಟು ಅಂಕಗಳು 720. ಪ್ರತಿ ಸರಿಯಾದ ಉತ್ತರಕ್ಕೆ 4 ಅಂಕಗಳನ್ನು ನೀಡಲಾಗುತ್ತದೆ. ಆದರೆ ಪ್ರತಿ ತಪ್ಪು ಉತ್ತರಕ್ಕೆ 1 ಅಂಕ ಕಡಿತಗೊಳಿಸಲಾಗುತ್ತದೆ. ಆದರೆ, ಉತ್ತರಿಸದ ಪ್ರಶ್ನೆಗಳನ್ನು ಗುರುತಿಸಿಲ್ಲ. ಆ ಸಂದರ್ಭದಲ್ಲಿ, ಗಣಿತದ ಪ್ರಕಾರ 719 ಮತ್ತು 718 ನಂತಹ ಅಂಕಗಳನ್ನು ಪಡೆಯಲು ಸಾಧ್ಯವಿಲ್ಲ. ಆದರೆ ಅಂತಹ ಪ್ರಕರಣಗಳು ಬಂದಿರುವ ಫಲಿತಾಂಶಗಳಲ್ಲಿ ಕಂಡುಬರುತ್ತಿದೆ. ಈ ವರ್ಷದ ಫಲಿತಾಂಶವು ಗ್ರೇಸ್ ಮಾರ್ಕಿಂಗ್‌ಗಾಗಿ ಎಂದು ಎನ್‌ಟಿಎ ಪ್ರಾಸಂಗಿಕವಾಗಿ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಈ ವರ್ಷ ಪರೀಕ್ಷೆಗೆ ಮುನ್ನ ಎನ್‌ಟಿಎ ಪ್ರಕಟಿಸಿದ ಮಾರ್ಗಸೂಚಿಗಳಲ್ಲಿ ಎಲ್ಲಿಯೂ ಈ ಗ್ರೇಸ್ ಮಾರ್ಕಿಂಗ್ ಯೋಜನೆಯ ಬಗ್ಗೆ ಉಲ್ಲೇಖಸಿಲ್ಲ” ಎಂದು ದೂರಿದರು.
“ಒಂದೇ ಕೇಂದ್ರದ ಸತತ ರೋಲ್ ಸಂಖ್ಯೆ ಹೊಂದಿರುವ ಹಲವು ವಿದ್ಯಾರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿವೆ. ಆ ವಿದ್ಯಾರ್ಥಿಗಳು ಖಾಸಗಿ ಕೋಚಿಂಗ್ ಕೇಂದ್ರಗಳಿಗೆ ಸೇರಿದ ವಿದ್ಯಾರ್ಥಿಗಳಾಗಿದ್ದಾರೆ. ಕೇಂದ್ರದ ಸರ್ಕಾರ ವೈದ್ಯಕೀಯ ಶಿಕ್ಷಣದ ಪಠ್ಯಕ್ರಮದಲ್ಲಿ ಗಮನಾರ್ಹವಾದ ಕಡಿತಗೊಳಿಸಿ ಕಾಲೇಜು ಶುಲ್ಕಗಳನ್ನು ಹೆಚ್ಚಿಸಿ ಶ್ರೀಮಂತರ ಮಕ್ಕಳಿಗೆ ಮಾತ್ರ ವೈದ್ಯಕೀಯ ಶಿಕ್ಷಣ ಎಂಬ ಖಾಸಗೀಕರಣ ನೀತಿಗಳನ್ನು ಎನ್‌ಎಂಸಿ ಮತ್ತು ಎನ್‌ಟಿಎ ಸಂಸ್ಥೆಗಳು ಜಂಟಿಯಾಗಿ ಪ್ರೋತ್ಸಾಹಿಸುತ್ತಿವೆ ಇದು ದೇಶದ ಭವಿಷ್ಯಕ್ಕೆ ತುಂಬಾ ಅಪಾಯಕಾರಿ. ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯ ಆಧಾರಿತ ಪ್ರವೇಶ ಪರೀಕ್ಷೆ ಪದ್ಧತಿಯನ್ನು ಬದಲಾಯಿಸಲು ಭ್ರಷ್ಟಾಚಾರ ನಡೆಯುತ್ತಿದೆ. ಈಗ ನೀಟ್-ಯುಜಿಗೆ ಸಂಬಂಧಿಸಿದಂತಾಗಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಟಿ20 ವಿಶ್ವಕಪ್ | ಅಲ್ಪಮೊತ್ತದ ಕಾಳಗದಲ್ಲಿ ರೋಚಕ ಜಯ ಗಳಿಸಿದ ಟೀಮ್ ಇಂಡಿಯಾ; ಪಾಕ್‌ಗೆ ಭಾರೀ ಮುಖಭಂಗ
ಈ ಬಗ್ಗೆ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಎನ್‌ಟಿಎ ರದ್ದುಪಡಿಸಿ ಮತ್ತು ಇಲ್ಲಿಯವರೆಗಿನ ಅದರ ಎಲ್ಲ ಹಗರಣಗಳನ್ನು ತನಿಖೆ ನಡೆಸಬೇಕು. ರಾಜ್ಯದಲ್ಲಿ ಎನ್‌ಟಿಎ ಮೂಲಕ ಶಿಕ್ಷಣದ ಕೇಂದ್ರೀಕರಣ ನಡೆಸುವವರ ವಿರುದ್ಧ ಹೋರಾಟ ರೂಪಿಸಿ ವಿದ್ಯಾರ್ಥಿಗಳ ಪರವಾಗಿ ನಡೆಯುತ್ತಿರುವ ಹೋರಾಟಕ್ಕೆ ಎಸ್‌ಎಫ್‌ಐ ಬೆಂಬಲಿಸುತ್ತದೆ ಎಂದು ಹೇಳಿದರು.