ಹೊಸ ಲೋಕಸಭೆಯಲ್ಲಿ ಬಿಜೆಪಿ ಸ್ಪೀಕರ್ ಹುದ್ದೆಯನ್ನು ಉಳಿಸಿಕೊಂಡರೆ ‘ಸಂಸದೀಯ ಸಂಪ್ರದಾಯಗಳಿಗೆ ಅಪಾಯಕಾರಿ’ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕುದುರೆ ವ್ಯಾಪಾರ ಮತ್ತು ಸಾಂವಿಧಾನಿಕ ನಿಬಂಧನೆಗಳ ಉಲ್ಲಂಘನೆಯ ಸಾಧ್ಯತೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಲಕ್ನೋದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, 16 ಸಂಸದರನ್ನು ಹೊಂದಿರುವ ಎನ್‌ಡಿಎಯ ಎರಡನೇ ಅತಿದೊಡ್ಡ ಸದಸ್ಯ ಪಕ್ಷವಾದ ಟಿಡಿಪಿ ಈ ಹುದ್ದೆಯನ್ನು ಅಲಂಕರಿಸಬೇಕು ಎಂದು ಅಭಿಪ್ರಾಯಿಸಿರುವ ಎಎಪಿ ಸಂಸದ, ಬಿಜೆಪಿ ನಾಯಕರು ಸ್ಪೀಕರ್ ಆದರೆ ಅಪಾಯವಿದೆ ಎಂದಿದ್ದಾರೆ.
ಇದನ್ನು ಓದಿದ್ದೀರಾ? ಮೂವರು ಪ್ರಭಾವಿ ಬಿಜೆಪಿ ನಾಯಕರುಗಳಿಗೆ ಮೋದಿ ಸಂಪುಟದಲ್ಲಿ ಅವಕಾಶವಿಲ್ಲ
“ದೇಶದ ಸಂಸತ್ತಿನ ಇತಿಹಾಸದಲ್ಲಿ ಎಂದಿಗೂ 150ಕ್ಕೂ ಹೆಚ್ಚು ಸಂಸದರನ್ನು ಅಮಾನತುಗೊಳಿಸಿಲ್ಲ. ಆದರೆ ಬಿಜೆಪಿ ಅದನ್ನು ಮಾಡಿದೆ. ಆದ್ದರಿಂದ, ಸ್ಪೀಕರ್ ಬಿಜೆಪಿಯವರಾಗಿದ್ದರೆ, ಸಂವಿಧಾನವನ್ನು ಉಲ್ಲಂಘಿಸುವ ಮೂಲಕ ವಿಧೇಯಕಗಳನ್ನು ಅನಿಯಂತ್ರಿತ ರೀತಿಯಲ್ಲಿ ಅಂಗೀಕರಿಸಲಾಗುತ್ತದೆ” ಎಂದು ಆರೋಪಿಸಿದರು.
“ಮುಂದಿನ ದಿನಗಳಲ್ಲಿ ಟಿಡಿಪಿ, ಜೆಡಿಯು ಮತ್ತು ಇತರ ಸಣ್ಣ ಪಕ್ಷಗಳಲ್ಲಿ ಬಿಜೆಪಿ ಬಿರುಕು ತಂದು ಆ ಪಕ್ಷದ ಮುಖಂಡರು ಬಿಜೆಪಿಗೆ ಬಲವಂತವಾಗಿ ಸೇರಿಕೊಳ್ಳುವಂತೆ ಮಾಡುತ್ತದೆ. ಬಿಜೆಪಿಗೆ ಇಂತಹ ಇತಿಹಾಸವೇ ಇರುವುದು” ಎಂದು ಹೇಳಿದ್ದಾರೆ.
ಸ್ಪೀಕರ್ ಹುದ್ದೆಯನ್ನು ಹೊಸ ಎನ್‌ಡಿಎ ಸರ್ಕಾರದ ‘ಮೊದಲ ಪರೀಕ್ಷೆ’ ಎಂದು ಕರೆದ ಸಿಂಗ್, ಈ ಹುದ್ದೆ ಬಿಜೆಪಿಯಲ್ಲೇ ಉಳಿದರೆ ‘ಧ್ವನಿ ಎತ್ತುವ ಸಂಸದರನ್ನು ಸದನದಿಂದ ಹೊರಹಾಕಲಾಗುತ್ತದೆ’ ಎಂದು ನಾನು ಮತ್ತು ಪಕ್ಷ ನಂಬುತ್ತದೆ ಎಂದು ತಿಳಿಸಿದರು.