ವರ್ಷಾನುಗಟ್ಟಲೆ ನನೆಗುದಿಗೆ ಬಿದ್ದಿದ್ದ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯನ್ನು ಸರ್ಕಾರವು 2023ರ ನವೆಂಬರ್ 4ರಂದು ವಿಶೇಷ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಿತ್ತು. ಸಹಾಯಕ ಪ್ರಾಧ್ಯಾಪಕರ ನೇಮಕಾತಿ-2021ರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪ್ರತಿಯ ವಿಳಂಬದಿಂದಾಗಿ ಇದೀಗ ಆಯ್ಕೆಯಾದ ಅಭ್ಯರ್ಥಿಗಳು ಕಂಗಾಲಾಗಿದ್ದು, ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಒಂದಾದ ಮೇಲೊಂದು ಕಾರಣಗಳನ್ನು ಕೊಡುತ್ತಲೇ ಬಂದಿರುವುದರಿಂದ ಬೇಸತ್ತಿರುವ ಪ್ರತಿಭಟನಾನಿರತ ಅಭ್ಯರ್ಥಿಗಳು ನೇಮಕಾತಿ ಆದೇಶಪ್ರತಿ ನೀಡುವವರೆಗೂ ಪ್ರತಿಭಟನಾ ಸ್ಥಳದಿಂದ ಹೋಗಲಾರೆವು ಎಂದು ಪಟ್ಟು ಹಿಡಿದಿದ್ದಾರೆ.
ಸ್ಥಳ ನಿಯುಕ್ತಿಯ ಸಮಸ್ಯೆ ಬಗ್ಗೆ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿ ರವಿ ಎಂಬುವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ನೆಪದಲ್ಲಿ ನೇಮಕಾತಿ ಆದೇಶವನ್ನು ಹಿಂಪಡೆದಿದ್ದರು. ಇದೀಗ ಲೋಕಸಭಾ ಚುನಾವಣೆ ಕಳೆದು ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾದರೂ ಕೂಡಾ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ ಮುನ್ಸೂಚನೆಯನ್ನೂ ನೀಡಿಲ್ಲ. ಕಾಲೇಜು ಶಿಕ್ಷಣ ಇಲಾಖೆಯ ಕಮಿಷನರ್ ಈವರೆಗೂ ಭೇಟಿ ಮಾಡಲಿಲ್ಲ” ಎಂದು ಆರೋಪಿಸಿದ್ದಾರೆ.

“ಮುಖ್ಯ ಆಡಳಿತ ಅಧಿಕಾರಿಗಳು, ʼಈಗ ನೀವು ಹೋಗಬೇಕು. ಇಲ್ಲವಾದರೆ ಪೊಲೀಸ್ ಕರೆಸಲಾಗುವುದುʼ ಎಂದು ಬೆದರಿಸುತ್ತಿದ್ದಾರೆ. ಆದರೂ ಕೂಡಾ ಮಳೆ ಬರುತ್ತಿದ್ದರೂ ಅಭ್ಯರ್ಥಿಗಳು ಪ್ರತಿಭಟನೆಯಲ್ಲಿ ಕೂತಿದ್ದಾರೆ. ಆದೇಶಪ್ರತಿ ಗೆಜೆಟ್ ಆಗಲಿ, ಈಗಲೇ ಹೋಗುತ್ತೇವೆ” ಎಂದು ಪಟ್ಟು ಹಿಡಿದಿದ್ದಾರೆ.
ಘಟನೆ ಹಿನ್ನೆಲೆ
ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಆದೇಶದ ಗೆಜೆಟ್ ಮತ್ತು ಸ್ಥಳ ನಿಯುಕ್ತಿಯ ವೇಳಾಪಟ್ಟಿಯನ್ನು ಹೊರಡಿಸಿ ನೇಮಕಾತಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳು ಈ ಹಿಂದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದರು. ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿಯನ್ನೂ ಸಲ್ಲಿಸಿದ್ದರು. ಮನವಿ ಸ್ವೀಕರಿಸಿದ ಅಧಿಕಾರಿಗಳು ಉನ್ನತ ಅಧಿಕಾರಿಗಳ ಗಮನಕ್ಕೆ ತರುವುದಾಗಿಯೂ ಭರವಸೆ ನೀಡಿದ್ದರು.
ಸ್ಥಳ ನಿಯುಕ್ತಿಯ ಸಮಸ್ಯೆ ಬಗ್ಗೆ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿ ರವಿ ಎಂಬುವರು ಈ ದಿನ.ಕಾಮ್‌ನೊಂದಿಗೆ ಈ ಹಿಂದೆ ಮಾತನಾಡಿ, “2021ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕರ 26 ವಿಷಯಗಳ 1242 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯಾಗಿ, 2023ರ ಮಾರ್ಚ್ 3ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿತ್ತು. ಈ ಆಯ್ಕೆ ಪಟ್ಟಿಯಲ್ಲಿ ಒಟ್ಟು 1208 ಮಂದಿ ಅಭ್ಯರ್ಥಿಗಳು ಎಲ್ಲ ರೀತಿಯಲ್ಲೂ ಆಯ್ಕೆಯಾಗಿದ್ದಾರೆ” ಎಂದು ತಿಳಿಸಿದ್ದರು.
“ಉನ್ನತ ಶಿಕ್ಷಣ ಇಲಾಖೆಯೂ ಕೂಡ ಹೊಸದಾಗಿ ಆಯ್ಕೆಗೊಂಡಿರುವ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳಿಗೆ ಸ್ಥಳನಿಯುಕ್ತಿಗೊಳಿಸುವ ಸಲುವಾಗಿ 2024ರ ಫೆಬ್ರವರಿ 26ರಂದು ಹೊರಡಿಸಿದ ಅಧಿಕೃತ ಜ್ಞಾಪನ ಪತ್ರವನ್ನು ಒಂದೇ ದಿನದಲ್ಲಿ ಹಿಂಪಡೆದಿದೆ. ಇಲಾಖೆಯ ಅಧಿಕೃತ ಜ್ಞಾಪನ ಪತ್ರವನ್ನು ಹಿಂಪಡೆಯಲು ಕಾರಣವೇನು? ಮರುದಿವಸ ಅಂದರೆ, ಫೆಬ್ರವರಿ 27ರಂದು ಪ್ರಕಟವಾದ ಇಲಾಖೆಯ ಅಧಿಕೃತ ಜ್ಞಾಪನ ಪತ್ರದಲ್ಲಿ ಹೊಸದಾಗಿ ಆಯ್ಕೆಗೊಂಡಿರುವ ಸಹಾಯಕ ಪ್ರಾಧ್ಯಾಪಕರುಗಳ ಸ್ಥಳನಿಯುಕ್ತಿಗೆ ಸಂಬಂಧಿಸಿದಂತೆ ಪ್ರತ್ಯೇಕ ವೇಳಾಪಟ್ಟಿ ಪ್ರಕಟಿಸುವಂತೆ ಸೂಚಿಸಿದ್ದಾರೆ” ಎಂದು ಹೇಳಿದ್ದರು.
“ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ಅವರು ಡಿಸೆಂಬರ್ ತಿಂಗಳ ಅಂತ್ಯಕ್ಕೆ ಆದೇಶ ಕೊಡಲಾಗುವುದೆಂದು ಭರವಸೆ ನೀಡಿದ್ದರು. ಬಳಿಕ ಜನವರಿ, ಫೆಬ್ರವರಿ ಹೀಗೆ ತಿಂಗಳುಗಳನ್ನು ದೂಡುತ್ತಾ ಬಂದಿದ್ದು, ಫೆ. 26ರಂದು ಅಧಿಕೃತ ಆದೇಶ ಬಿಡುಗಡೆ ಮಾಡಿದ್ದರಾದರೂ ಮರುದಿನವೇ ಆದೇಶವನ್ನು ಹಿಂಪಡೆದಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಸಚಿವರು ಯಾರದೋ ಪ್ರಭಾವಿಗಳ ಒತ್ತಡಕ್ಕೆ ಮಣಿದಿರಬಹುದು. ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ನೆಪದಲ್ಲಿ ಆದೇಶವನ್ನು ಹಿಂಪಡೆದಿದ್ದಾರೆ” ಎಂದು ಆರೋಪಿಸಿದ್ದರು.
“ಲೋಕಸಭಾ ಚುನಾವಣೆ ಮುಗಿದ ಬಳಿಕ ಬೇರೆ ಬೇರೆ ರೀತಿಯ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ನಾಳೆ ನಾಳೆ ಎಂದು ಮುಂದೂಡುತ್ತ ಆಯ್ಕೆಯಾಗಿರುವ ಸಹಾಯಕ ಪ್ರಾಧ್ಯಾಪಕರ ನೇಮಕ ಮಾಡಲು ಅನ್ಯಾಯ ಎಸಗುತ್ತಿದ್ದಾರೆ. ಹೀಗೆ ಮುಂದುವರೆದರೆ ನಮ್ಮ ಭವಿಷ್ಯ ಡೋಲಾಯಮಾನವಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದ್ದರು.
ಇತರೆ ಮೀಸಲಾತಿ ಹೊಂದಿರುವ 50 ಮಂದಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ಆಯ್ಕೆಯಾಗಿರುವ 908 ಮಂದಿ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳಿಗೆ ಅನ್ಯಾಯ ಎಸಗುತ್ತಿದ್ದಾರೆ” ಎಂದು ಆರೋಪಿಸಿದ್ದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ತೆಂಗು ಬೆಳೆಗಾರಿಗೆ ಅನ್ಯಾಯ; ನಾಫೆಡ್ ಕೊಬ್ಬರಿ ಖರೀದಿ ಕೇಂದ್ರಗಳ ಮೇಲೆ ಆರೋಪ
“ಉನ್ನತ ಶಿಕ್ಷಣ ಸಚಿವರು ಕೊಟ್ಟ ಮಾತಿಗೆ ಬದ್ಧವಾಗಿದ್ದರೆ 2024ರ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೆ, ಯಾವುದೇ ತೊಂದರೆ ಇಲ್ಲದ ಆದೇಶ ಪಡೆಯಲು ಸಿದ್ಧವಾಗಿರುವ 908 ಮಂದಿ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶದ ರಾಜ್ಯಪತ್ರವನ್ನು ಹೊರಡಿಸುವಂತಹ ಇಚ್ಛಾಶಕ್ತಿಯನ್ನು ತೋರಿಸಬೇಕು. ಸರ್ಕಾರವು ಕೂಡಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದರು.
ನೇಮಕಾತಿ ಆದೇಶಕ್ಕಾಗಿ ಕಾಯುತ್ತಿರುವ ಬಹುತೇಕ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳು ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
