ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, “ಸದ್ಯ ದರ್ಶನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ನಂತರ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸೇರಿ ಹತ್ತಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ” ಎಂದು ತಿಳಿಸಿದ್ದಾರೆ.
“ಜೂನ್ 9 ರಂದು (ಭಾನುವಾರ) ಕಾಮಾಕ್ಷಿಪಾಳ್ಯದಲ್ಲಿ ಅಪರಿಚಿತ ಶವವೊಂದು ಸಿಕ್ಕಿತ್ತು. ಮೃತದೇಹದ ಮೇಲೆ ಗಾಯಗಳು ಇದ್ದವು. ಇದನ್ನು ಗಮನಿಸಿ ಕಾಮಾಕ್ಷಿಪಾಳ್ಯದ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ಇತರ ತಾಂತ್ರಿಕ ಆಧಾರದ ಮೇಲೆ ಕೆಲವರನ್ನು ಬಂಧಿಸಲಾಯಿತು. ನಂತರ ಅವರ ವಿಚಾರಣೆ ಬಳಿಕ ಇದು ಚಿತ್ರದುರ್ಗದ ರೇಣುಕಾಸ್ವಾಮಿ ಎಂದು ತಿಳಿದು ಬಂದಿದೆ. ಇದರ ಹಿಂದೆ ಚಿತ್ರ ನಟ ದರ್ಶನ್ ಇರುವುದು ತಿಳಿದು ಬಂದಿದೆ. ಈ ಹಿನ್ನೆಲೆ, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.
“ಜೂನ್ 9ರಂದು ಕೊಲೆಯಾಗಿದೆ. ರೇಣುಕಾ ಸ್ವಾಮಿ ದರ್ಶನ್ ಅವರ ಪತ್ನಿಗೆ ಅವಾಚ್ಯ ಸಂದೇಶಗಳನ್ನು ಕಳಿಸಿದ್ದಾನೆ ಎಂಬ ಕಾರಣಕ್ಕೆ ಆತನ ಕೊಲೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಬಂಧಿತ ಆರೋಪಿಗಳಿಂದ ವಿಚಾರಣೆ ನಡೆಸಲಾಗುತ್ತಿದೆ. ನಂತರ ಕ್ರಮ ತೆಗೆದುಕೊಳ್ಳುತ್ತೇವೆ. ಮೃತ ರೇಣುಕಾಸ್ವಾಮಿಗೆ 33 ವರ್ಷ. ಹೆಚ್ಚಿನ ತನಿಖೆ ನಡೆದ ಬಳಿಕವಷ್ಟೇ ನಾವು ಹೆಚ್ಚಿನ ಮಾಹಿತಿ ನೀಡಲು ಸಾಧ್ಯ” ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಬೆಳಗ್ಗೆ 8.30ಕ್ಕೆ ಬೆಂಗಳೂರು ವಿಜಯನಗರ ಎಸಿಪಿ ಚಂದನ್ ನೇತೃತ್ವದಲ್ಲಿ ನಟ ದರ್ಶನ್ ಅವರನ್ನು ಮೈಸೂರಿನ ರ್ಯಾಡಿಸನ್ ಹೋಟೆಲ್ನಲ್ಲಿ ಬಂಧಿಸಲಾಗಿದೆ. ದರ್ಶನ್ ಬಂಧನದ ಬೆನ್ನಲ್ಲೇ ಆರ್.ಆರ್.ನಗರದಲ್ಲಿ ದರ್ಶನ್ ಆಪ್ತೆ ಪವಿತ್ರಾ ಗೌಡ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಕೊಲೆ ಪ್ರಕರಣ; ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ
ಮೃತ ವ್ಯಕ್ತಿ ರೇಣುಕಾಸ್ವಾಮಿ ಮೂಲತಃ ಚಿತ್ರದುರ್ಗದವನು. ಈತ ಬೆಸ್ಕಾಂ ನಿವೃತ್ತ ನೌಕರನ ಮಗ. ಅಪೋಲೋ ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಿದ್ದನು. ಈತ ಕೂಡ ನಟ ದರ್ಶನ್ ಅಭಿಮಾನಿ.
ಈತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ರಾಘವೇಂದ್ರ, ವಿನಯ್ ಎಂಬುವವರನ್ನು ಸಹ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.