ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಗೋಲಿಬಾರ್‌ನಲ್ಲಿ ಮರಣ ಹೊಂದಿದ್ದ ರೈತ ಚೂರಿ ಸಿದ್ಲಿಂಗಪ್ಪ ಹಾಗೂ ಪುಟ್ಟಪ್ಪ ಹೊನ್ನತ್ತಿಯವರ ಅವರ 17ನೇ ವರ್ಷದ ಹುತಾತ್ಮ ದಿನಾಚರಣೆಯನ್ನು ರೈತಸಂಘ ಹಾವೇರಿಯಲ್ಲಿ ಆಚರಿಸಿದೆ. ರೈತರಿಗೆ ಬೆಳೆ ಪರಿಹಾರ, ಬೆಳೆ ವಿಮೆ ಹಾಗೂ ವಿವಿಧ ಹಾಕ್ಕೋತ್ತಾಯಗಳನ್ನು ಈಡೇರಿಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದೆ.
ಹುತಾತ್ಮ ದಿನಾಚರಣೆ ಆಚರಿಸಿ, ಸಿದ್ದಪ್ಪ ಸರ್ಕಲ್‌ನಲ್ಲಿ ರಸ್ತೆ ತಡೆ ಚಳುವಳಿ ಹಾಗೂ ಬೃಹತ್ ಪ್ರತಿಭಟಿಸಿದ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನಾಕಾರರ ಹಕ್ಕೊತ್ತಾಯಗಳು;
1) 2022-23 ಹಾಗೂ 2023-24 ರ ಮುಂಗಾರು ಬೆಳೆ ವಿಮಾ ವಿತರಣೆಯಲ್ಲಿ ತಾರತಮ್ಯವಾಗಿದ್ದು, 2023- 24ರಲ್ಲಿ ಭೀಕರ ಬರಗಾಲದಿಂದ ಬೆಳೆ ನಷ್ಟವಾಗಿದೆ. ಬೆಳೆ ವಿಮಾ ಮಧ್ಯಂತರ ಪರಿಹಾರ ನೀಡಲಾಗಿದ್ದು, ಇನ್ನೂ 75%ರಷ್ಟು ವಿಮಾ ಪರಿಹಾರ ವಿತರಣೆ ಬಾಕಿ ಇದೆ. ಪಾರದರ್ಶಕವಾಗಿ ಸಮೀಕ್ಷೆ ನಡೆಸದೆ ರೈತರಿಗೆ ಅನ್ಯಾಯವಾಗಿದೆ. ಸಮೀಕ್ಷೆಯನ್ನು ಮರು ಪರಿಶೀಲನೆ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು.
2) ಬರಗಾಲದಿಂದ ಬೆಳೆ ನಷ್ಟ ಹೊಂದಿದ ರೈತರಿಗೆ ಸಮರ್ಪಕವಾಗಿ ಬೆಳೆ ಹಾನಿ ಪರಿಹಾರ ಕೊಟ್ಟಿಲ್ಲ. ಸಮರ್ಪಕವಾಗಿ ಬೆಳೆ ಪರಿಹಾರ ಕೊಡಬೇಕು ಹಾಗೂ ರಾಜ್ಯ ಸರ್ಕಾರದ ಎಸ್, ಡಿ, ಆರ್, ಎಫ್ ಪ್ರಕಾರ ಪ್ರತಿ ಹೆಕ್ಟೇರ್ ಗೆ 8500 ರೂ ಬರ ಪರಿಹಾರ ಕೊಡಬೇಕು.
3) ಹಾವೇರಿ ಜಿಲ್ಲೆಯಲ್ಲಿ ಬಿತ್ತನೆ ಬೀಜದ ಬೆಲೆ ದುಪ್ಪಟ್ಟು ಹೆಚ್ಚಾಗಿದ್ದು ಕೃಷಿ ಇಲಾಖೆ ಬೆಲೆ ನಿಯಂತ್ರಿಸಬೇಕು. ಹಾಗೂ ರಸಗೊಬ್ಬರ ಡಿ.ಎ.ಪಿ ಯೂರಿಯಾ ಗೊಬ್ಬರ ಕೊರತೆ ಇದ್ದು ವ್ಯವಸಾಯ ಸಂಘ ಹಾಗೂ ರೈತ ಉತ್ಪಾದಕ ಕಂಪನಿಗಳಿಂದ ಕೂಡಲೇ ಗೊಬ್ಬರ ಕೊರತೆಯಾಗದಂತೆ ಪೂರೈಸಬೇಕು.
4) ಜಿಲ್ಲೆಯ ಬಹುದಿನದ ಬೇಡಿಕೆಯಾದ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಮಂಜೂರು ಮಾಡಬೇಕು. ಕಾರಣ ಸರ್ಕಾರ 5 ಲಕ್ಷ ಈವರೆಗೆ ಬಡ್ಡಿ ರೈತ ಸಾಲ ಪಡೆಯುವಲ್ಲಿ ಹಾವೇರಿ ಗದಗ ಧಾರವಾಡ ಜಿಲ್ಲೆಯ ರೈತರು ಅವಕಾಶ ವಂಚಿತರಾಗಿದ್ದು ಕೂಡಲೇ ಬ್ಯಾಂಕ್ ಮಂಜೂರು ಮಾಡಬೇಕು.
5) ಹಾವೇರಿ ಜಿಲ್ಲೆಯ ರೈತರಿಗೆ ಕೆ.ಎಂ.ಎಫ್ ಸಹಾಯಧನ ಕಳೆದ 8 ತಿಂಗಳಿನಿಂದ ರೈತರ ಖಾತೆಗೆ ಜಮಾ ಮಾಡಿಲ್ಲ ರೈತರು ಸಂಕಷ್ಟದಲ್ಲಿ ಇರುವುದರಿಂದ ಈ ಕೂಡಲೇ ಸಹಾಯಧನ ಕೊಡಬೇಕು.
6) ರೈತರ ಜೀವನಾಡಿಯಾದ ಕೆರೆಗಳಿಗೆ ಕುಮದ್ವತಿ ತುಂಗಭದ್ರ ವರದಾ ನದಿಯಿಂದ ನೀರು ತುಂಬಿಸುವ ಯೋಜನೆ ಮಂಜೂರಾಗಿದ್ದು ಕಾಮಗಾರಿ ಕುಂಟುತ್ತ ಸಾಗಿದ್ದು ತ್ವರಿತ ಗತಿಯಲ್ಲಿ ನೀರು ತುಂಬಿಸಬೇಕು.
7) ಹಾವೇರಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ತಜ್ಞ ವೈದ್ಯರು ಹಾಗೂ ವೈದ್ಯರ ಕೊರತೆ ಇದ್ದು ಮುಖ್ಯವಾಗಿ ರಟ್ಟಿಹಳ್ಳಿ. ಹಿರೇಕೇರೂರು ತಾಲೂಕುಗಳಲ್ಲಿ ಹೆರಿಗೆ ತಜ್ಞರು ಎಲುಬು ಮೂಳೆ ತಜ್ಞರ ಕೊರತೆಯಿದ್ದು ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದ್ದು ಕೂಡಲೇ ವೈದ್ಯರನ್ನು ನೇಮಕ ಮಾಡಬೇಕು.
8) ಅಕ್ರಮ ಸಕ್ರಮ ಯೋಜನೆ ಅಡಿ ರೈತರಿಂದ ಹಣ ತುಂಬಿಸಿಕೊಂಡು ನಾಲ್ಕು ವರ್ಷ ಗತಿಸಿದೆ ಸಕಾಲಕ್ಕೆ ಕಂಬ ವಯರ್. ಟಿ.ಸಿ ಕೊಡಬೇಕು ಮತ್ತು ಮಂಜೂರಾದ ಗ್ರೀಡ್ ಗಳನ್ನು ತ್ವರಿತವಾಗಿ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡಬೇಕು.
9) ನೀರಾವರಿಗೆ ಬೇಕಾದ ಹನಿ ನೀರಾವರಿ ತುಂತುರು/ ಸ್ಪಿಂಕ್ಲರ್ ತೋಟಗಾರಿಕೆ ಹಾಗೂ ಕೃಷಿ ಇಲಾಖೆಗೆ ಪೂರೈಸುತ್ತಿದ್ದು ಎರಡರಷ್ಟು ಬೆಲೆ ಹೆಚ್ಚಾಗಿದ್ದು ಹಳೆಯ ದರದಲ್ಲಿ ಪೂರೈಸಬೇಕು.
10) ರೈತರ ಜಮೀನುಗಳಿಗೆ ಎರಡು ಸರ್ವೆ ನಂಬರ್ ಮಧ್ಯ ಜಮೀನು ವಶಪಡಿಸಿಕೊಂಡು ರಸ್ತೆ ನಿರ್ಮಾಣ ಮಾಡಬೇಕು.
11) ಬ್ಯಾಂಕುಗಳಲ್ಲಿ ಸಾಲ ಪಡೆದು ಕಟ್ ಬಾಕಿ ಹೊಂದಿದ ರೈತರಿಗೆ ಓ.ಟಿ.ಎಸ್. ನಲ್ಲಿ ಸಾಲ ಮರುಪಾವತಿ ಮಾಡಬೇಕು ಮತ್ತು ಅದೇ ಬ್ಯಾಂಕಿನಲ್ಲಿ ಕೃಷಿ ಸಾಲಕ್ಕೆ ಸಿಬಿಲ್ ಅನ್ವಯಿಸಬಾರದು.
ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ರಾಮಣ್ಣ ಕೆಚಳ್ಳೆರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಮೊಹಮ್ಮದ್ ಗೌಸ್ ಪಾಟೀಲ್, ಅಡಿವೆಪ್ಪ ಆಲದಕಟ್ಟಿ, ಗಂಗಣ್ಣ ಎಲಿ, ಮಾಲತೇಶ ಪೂಜಾರ, ಶಿವಯೋಗಿ ಹೊಸಗೌಡ್ರ, ಎಚ್.ಎಚ್ ಮುಲ್ಲಾ, ಶಿವಬಸಪ್ಪ ಗೋವಿ, ಮಂಜುನಾಥ ಕದಂ, ಮರಿಗೌಡ್ರ ಪಾಟೀಲ್, ರುದ್ರಗೌಡ ಕಾಡನಗೌಡ್ರ, ಪ್ರಭುಗೌಡ ಪ್ಯಾಟಿ, ದಿಳ್ಳೆಪ್ಪ ಮಣ್ಣೂರ, ಮುತ್ತಪ್ಪ ಗುಡಗೇರಿ, ಸುರೇಶ್ ಹೊನ್ನಪ್ಪನವರ, ಸುರೇಶ್ ಚಲವಾದಿ, ಮಾಲತೇಶ ಪರಪ್ಪನವರ, ಬಸನಗೌಡ ಗಂಗಪ್ಪನವರ, ಚನ್ನಪ್ಪ ಮರಡೂರ ರಾಜು ತರ್ಲಗಟ್ಟ ಇತರರು ಇದ್ದರು.