ಮಹಿಳೆಯರಿಗೂ, ಸಾರಿಗೆ ನಿಗಮಗಳಿಗೂ ಶಕ್ತಿ ತುಂಬಿದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ʼಶಕ್ತಿʼ ಯೋಜನೆ ಜಾರಿಗೆ ಬಂದು ಜೂನ್ 11ಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ʼಶಕ್ತಿʼ ಯೋಜನೆಯಡಿ ಬೀದರ್ ಜಿಲ್ಲೆಯಲ್ಲಿ 3,99,06,130 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ ಹಾಗೂ ಅವರಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (ಕೆಕೆಆರ್‌ಟಿಸಿ) 110,00,71,383 ರೂ. ವರಮಾನ ಬಂದಿದೆ.
2023ರ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ರಾಜ್ಯ ಕಾಂಗ್ರೆಸ್ ಘೋಷಿಸಿದ ʼಗ್ಯಾರಂಟಿʼಗಳಲ್ಲಿ ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಯೋಜನೆ ಇದಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ನೇತ್ರತ್ವದ ಸರಕಾರ ಜಾರಿಗೆ ಬಂದ ನಂತರ ಮಹಿಳೆಯರಿಗಾಗಿ ಘೋಷಿಸಿದ ʼಶಕ್ತಿʼ ಯೋಜನೆಯನ್ನು ಜೂ.11 ರಂದು ಜಾರಿಯಾಗಿತ್ತು. ಇದರಿಂದ ಮಹಿಳೆಯರು ರಾಜ್ಯದಲ್ಲಿ ಯಾವುದೇ ಮೂಲೆಗೆ ಹೋದರೂ ಸಾರಿಗೆ ನಿಗಮದ ಕೆಂಪು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಈ ಯೋಜನೆಯಿಂದ ಸಾರಿಗೆ ನಿಗಮಗಳಿಗೂ ಆರ್ಥಿಕ ʼಶಕ್ತಿʼ ಬರುವ ಮೂಲಕ ಇತರೆ ರಾಜ್ಯಗಳಿಗೆ ಮಾದರಿಯಾಗಿ ಒಂದು ವರ್ಷ ಪೂರೈಸಿ ಯಶಸ್ವಿಯಾಗಿ ಮುಂದುವರಿಯುತ್ತಿದೆ.
ಕಳೆದ ಒಂದು ವರ್ಷದಲ್ಲಿ ಬೀದರ್ ವಿಭಾಗದಲ್ಲಿ 3.99 ಕೋಟಿ ಮಹಿಳೆಯರು ʼಶಕ್ತಿʼ ಯೋಜನೆಯಡಿ ಟಿಕೆಟ್ ಸಹಿತ ಉಚಿತವಾಗಿ ಪ್ರಯಾಣಿಸಿದ್ದಾರೆ. ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 110 ಕೋಟಿ ರೂ. ಆಗಿದೆ. ಶಕ್ತಿ ಯೋಜನೆ ಜಾರಿಯಾದ ಮೇಲೆ ಪ್ರತಿ ದಿನವೂ ಶೇ.85% ಭರ್ತಿಯಾಗುತ್ತಿವೆ. ಕಳೆದ 11 ತಿಂಗಳಲ್ಲಿ 3 ಕೋಟಿಗೂ ಅಧಿಕ ಬಾರಿ ಮಹಿಳೆಯರು ಭರ್ಜರಿಯಾಗಿ ಓಡಾಡಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ʼಶಕ್ತಿʼ ಯೋಜನೆಯಡಿ 3.71 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಮಹಿಳೆಯರ ಉಚಿತ ಪ್ರಯಾಣದಿಂದ ಸಂಸ್ಥೆಗೆ 10.26 ಕೋಟಿ ರೂ. ಆದಾಯ ಸಂದಾಯವಾಗಿದೆ. ಇದು ಒಂದು ವರ್ಷದಲ್ಲಿ ಗಳಿಸಿದ ಗರಿಷ್ಠ ವರಮಾನದ ಮಾಸವಾಗಿದೆ. ಅಕ್ಟೋಬರ್ ತಿಂಗಳಲ್ಲಿ ಪ್ರಯಾಣದ ಪ್ರಮಾಣ ಕಡಿಮೆಯಾಗಿದೆ. ಆದರೆ, ಎಪ್ರಿಲ್ ತಿಂಗಳಲ್ಲಿ ʼಶಕ್ತಿʼ ಪ್ರಯಾಣಿಕರಿಂದ ಸಂಸ್ಥೆಗೆ 10.11 ಕೋಟಿ ರೂ. ವರಮಾನ ಬಂದಿದ್ದರೆ, ಮೇ ತಿಂಗಳಲ್ಲಿ 10.24 ಕೋಟಿ ರೂ. ಸಂದಾಯವಾಗಿದೆ. ಎಪ್ರಿಲ್-ಮೇ ತಿಂಗಳಲ್ಲಿ ಒಟ್ಟು 6 ಕೋಟಿಗೂ ಅಧಿಕ ಬಾರಿ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ.
ʼಶಕ್ತಿʼ ಯೋಜನೆ 70 ಹೊಸ ಬಸ್ ಸೇರ್ಪಡೆ :
“ಜಿಲ್ಲೆಯಲ್ಲಿ ʼಶಕ್ತಿʼ ಯೋಜನೆ ಜಾರಿಯಾಗುವ ಮುನ್ನ ಬೀದರ್ ವಿಭಾಗದಲ್ಲಿ ಒಟ್ಟು 534 ಬಸ್‌ಗಳಿದ್ದವು. ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಜಿಲ್ಲೆಯಲ್ಲಿ 70 ಹೊಸ ಬಸ್‌ಗಳನ್ನು ʼಶಕ್ತಿʼ ಯೋಜನೆಗೆ ಸೇರ್ಪಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 604 ಬಸ್‌ಗಳಿದ್ದು, ಅದರಲ್ಲಿ ರಾಜ್ಯದ ಗಡಿಭಾಗದ ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ 89 ಬಸ್‌ಗಳಿಗೆ ಅನುಮತಿ ನೀಡಿ ಓಡಿಸಲಾಗುತ್ತಿದೆ” ಎಂದು ಕೆಕೆಆರ್‌ಟಿಸಿ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ (ಡಿಸಿ) ಚಂದ್ರಕಾಂತ್ ಫುಲೇಕರ್ ʼಈದಿನ.ಕಾಮ್ʼ ಜೊತೆಗೆ ಮಾತನಾಡಿ ಮಾಹಿತಿ ನೀಡಿದರು.

“ಬೀದರ್ ಜಿಲ್ಲೆಯಿಂದ ಕಲಬುರಗಿ, ಕೊಪ್ಪಳ, ಗುಡ್ಡಾಪುರ, ಕೂಡಲಸಂಗಮ, ಮುಗಳಖೇಡ್, ಹುಬ್ಬಳಿ, ಬೆಂಗಳೂರು, ಶಿವಮೊಗ್ಗ, ಯಾದಗಿರಿ, ವಿಜಯಪುರ ಜಿಲ್ಲೆಗಳು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಿಗೆ ಪ್ರಯಾಣಿಸಲು 70 ಹೊಸ ಬಸ್‌ಗಳನ್ನು ಓಡಿಸಲಾಗುತ್ತಿದೆ. ಇದರಿಂದ ಒಟ್ಟು 310 ಟ್ರಿಪ್ ಪ್ರಮಾಣ ಜಾಸ್ತಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಬಸ್ ಸೇವೆ ವಿಸ್ತರಿಸಲಾಗುವುದು” ಎಂದು ಹೇಳಿದರು.
ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳ :
“ಜಿಲ್ಲೆಯಲ್ಲಿ ʼಶಕ್ತಿʼ ಯೋಜನೆ ಜಾರಿಗೆ ಬಂದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಅಂದಾಜು ಶೇ.45% ಹೆಚ್ಚಳವಾಗಿದೆ. ಜೊತೆಗೆ ಪುರುಷರ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳವಾಗಿದೆ. ಇದರಿಂದ ಕೆಕೆಆರ್‌ಟಿಸಿ ಲಾಭವಾಗಿದೆ. 2023ರ ಜೂ.11 ರಿಂದ 2024 ಜೂ.10ರವರೆಗೆ ಬೀದರ್ ವಿಭಾಗದ ಬಸ್‌ಗಳಲ್ಲಿ ಪ್ರತಿದಿನ ಸರಾಸರಿ 1.09 ಲಕ್ಷ ಮಹಿಳೆಯರು ಪ್ರಯಾಣಿಸಿ ಶಕ್ತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಮಹಿಳಾ ಪ್ರಯಾಣಿಕರಿಂದ ಬೀದರ್ ವಿಭಾಗಕ್ಕೆ ಪ್ರತಿದಿನ ಸರಾಸರಿ 30.06 ಲಕ್ಷ ರೂ. ಆದಾಯ ಸಂದಾಯವಾಗುತ್ತಿದೆ” ಎಂದು ಚಂದ್ರಕಾಂತ ಫುಲೇಕರ್ ಮಾಹಿತಿ ನೀಡಿದರು.
“ಶಕ್ತಿ ಯೋಜನೆಯಿಂದ ಕೆಕೆಆರ್‌ಟಿಸಿಗೆ ಬಹಳಷ್ಟು ಪ್ರಯೋಜನವಾಗಿದೆ. ಬೀದರ್ ವಿಭಾಗದಲ್ಲಿ ಬಸ್‌ಗಳ ಸಂಖ್ಯೆ ಹೆಚ್ಚಿಸಿ ಮಹಿಳಾ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟು ʼಶಕ್ತಿʼ ಯೋಜನೆಗೆ ಬಲ ತುಂಬಿದ್ದೇವೆ. ಇದರಿಂದ ನಮ್ಮ ಗಡಿ ಜಿಲ್ಲೆಯ ಗ್ರಾಮೀಣ ಭಾಗದ ಮಹಿಳೆಯರು ದೇವಸ್ಥಾನ, ಪ್ರವಾಸಿ ತಾಣ ಸೇರಿ ವಿವಿಧೆಡೆ ಭೇಟಿ ನೀಡಲು ಅನುಕೂಲವಾಗಿದೆ. ಅಲ್ಲದೇ ನೌಕರರು, ಕೂಲಿ-ಕಾರ್ಮಿಕರು, ವಿದ್ಯಾರ್ಥಿಗಳಿಗೂ ಉಚಿತ ಪ್ರಯಾಣ ತುಂಬಾ ಅನುಕೂಲವಾಗಿದೆ. ಶಕ್ತಿ ಜಾರಿಯಾದ ಮೇಲೆ ಸಾರಿಗೆ ನಿಗಮದ ಆದಾಯ ಏರಿಕೆಯಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಿವಿಧ ಬೇಡಿಕೆ ಈಡೇರಿಕೆಗೆ ರೈತ ಸಂಘ ಆಗ್ರಹ
ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ನಂತರ ಯೋಜನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸಿನಿಕತನದ ವೀಡಿಯೊಗಳು, ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂಬ ಚರ್ಚೆಗಳು ಪುರುಷ ಪ್ರಧಾನತೆಯ ಮೂಲ ಶಿಕ್ಷಣ. ಯೋಜನೆಯ ಕೆಟ್ಟ ಪರಿಣಾಮಗಳನ್ನು ಹೆಚ್ಚಾಗಿ ಬಿಂಬಿಸುವುದು, ಅದನ್ನೇ ಆಧಾರವಾಗಿಟ್ಟುಕೊಂಡ ಜನಪ್ರತಿನಿಧಿಗಳು ಮಹಿಳೆಯರ ಕುರಿತು ನೀಡುವ ಅಸಂಬದ್ಧ ಹೇಳಿಕೆಗಳು ಬಹುಚರ್ಚೆಗೆ ಒಳಪಟ್ಟಿದ್ದವು. ಆದರೆ, ಒಂದು ಕಲ್ಯಾಣ ಯೋಜನೆ ಮಹಿಳಾ ಸಬಲೀಕರಣಕ್ಕೆ ಹೇಗೆ ಪೂರಕವಾಗಬಲ್ಲದು ಎನ್ನುವುದಕ್ಕೆ ʼಶಕ್ತಿʼ ಯೋಜನೆ ಸಾಬೀತುಪಡಿಸಿದೆ ಎನ್ನಬಹುದು.