ಜುಲೈ 10ರಂದು ನಾಲ್ಕು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ಇತ್ತೀಚೆಗೆ ಚುನಾವಣಾ ಆಯೋಗ ಘೋಷಿಸಿದ ನಂತರ, ಸಂಸದರಾಗಿ ಆಯ್ಕೆಯಾದ ಬಳಿಕ ತೃಣಮೂಲ ಕಾಂಗ್ರೆಸ್ ಶಾಸಕರಿಂದ ತೆರವಾಗಲಿರುವ ಇತರ ಆರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವಂತೆ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಟಿಎಂಸಿ ಪತ್ರ ಬರೆದಿದೆ.
“ಆರು ಸ್ಥಾನಗಳು ಖಾಲಿಯಾದ ನಂತರ ಎಲ್ಲಾ 10 ವಿಧಾನಸಭೆ ಸ್ಥಾನಗಳಿಗೆ ಉಪಚುನಾವಣೆ ನಡೆಸುವುದು ವಿವೇಕಯುತ ಮತ್ತು ಸಂಪನ್ಮೂಲ ಪರಿಣಾಮಕಾರಿಯಾಗಿದೆ. ಶಾಸಕರು ಆರು ತಿಂಗಳೊಳಗೆ ರಾಜೀನಾಮೆ ನೀಡಬೇಕಾಗುತ್ತದೆ” ಎಂದು ಟಿಎಂಸಿ ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಪೊಲೀಸ್ ಭದ್ರತೆಯಲ್ಲಿ ಪಂಚಾಯತ್ ಚುನಾವಣೆಯ ಮರು ಮತದಾನ
ರಾಯಗಂಜ್, ರಣಘಾಟ್ ದಕ್ಷಿಣ್, ಬಾಗ್ದಾ ಮತ್ತು ಮಾಣಿಕ್ತಾಲಾ ಕ್ಷೇತ್ರಗಳಿಗೆ ಚುನಾವಣಾ ಆಯೋಗವು ಉಪಚುನಾವಣೆ ಘೋಷಿಸಿದೆ. ಇನ್ನು ಮದರಿಹತ್, ನೈಹತಿ, ತಲ್ದಂಗ್ರಾ, ಮೇದಿನಿಪುರ್, ಸೀತಾಯ್ ಮತ್ತು ಹರೋವಾ ಸೀಟುಗಳು ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿರುವ ಕಾರಣ ಖಾಲಿಯಾಗಲಿದೆ.
“ಒಂದೇ ರಾಜ್ಯದಲ್ಲಿ ಖಾಲಿ ಇರುವ ಮತ್ತು ಶೀಘ್ರದಲ್ಲೇ ಖಾಲಿಯಾಗಲಿರುವ ವಿವಿಧ ವಿಧಾನಸಭೆ ಸ್ಥಾನಗಳಿಗೆ ಬೇರೆ ಬೇರೆ ಉಪಚುನಾವಣೆಗಳನ್ನು ನಡೆಸಲು ಯಾವುದೇ ಮಾನ್ಯ ಅಥವಾ ತರ್ಕಬದ್ಧ ಕಾರಣವಿಲ್ಲ. ಇದು ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಮತ್ತು ರಾಜ್ಯವನ್ನು ನಿರಂತರವಾಗಿ ಚುನಾವಣೆಯ ಗುಂಗಿನಲ್ಲೇ ಇರಿಸುವ ಮೂಲಕ ಆಡಳಿತದ ಸುಗಮ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.