ಬೀದರ್ ತಾಲೂಕಿ ಮಾಳೆಗಾಂವ ಗ್ರಾಮ ಪಂಚಾಯತ್‌ನಲ್ಲಿ ವಿವಿಧ ಯೋಜನೆಯಡಿ ನಡೆಸಿರುವ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಜಾನಸನ್ ಘೋಡೆ ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಕ್ಕೊತ್ತಾಯ ಪತ್ರ ಬರೆದಿರುವ ಅವರು, “ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜೆಜೆಎಂ ಹಾಗೂ ಮನರೇಗಾ ಯೋಜನೆಯಡಿ ನಡೆದಿರುವ ಕಳಪೆ ಕಾಮಗಾರಿಗಳ ಬಗ್ಗೆ ತನಿಖೆ ನಡೆಸುವಂತೆ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ನೇತ್ರತ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ದೂರು ಸಲ್ಲಿಸಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ಈ ಅವ್ಯವಹಾರದಲ್ಲಿ ಮೇಲಾಧಿಕಾರಿಗಳೂ ಶಾಮೀಲಾಗಿರುವುದು ಮೇಲ್ನೋಟಕ್ಕೆ ಅನುಮಾನ ಬರುತ್ತಿದೆ” ಎಂದು ದೂರಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳ ಬಹುತೇಕ ಮನೆಗಳಿಗೆ ಕುಡಿಯುವ ನೀರು ಸರಬರಾಜು ಆಗದಿದ್ದರೂ ಕಾಮಗಾರಿ ಸಂಬಂಧಪಟ್ಟ ಗುತ್ತಿಗೆದಾರರಿಂದ ಹಣ ಪಡೆದು ಕಾಮಗಾರಿ ಹಸ್ತಾಂತರ ಮಾಡಿಕೊಂಡಿದ್ದಾರೆ. ಈ ಹಿನ್ನಲೆ ಗ್ರಾ.ಪಂ.ನಲ್ಲಿ ನಡೆದ ಅವ್ಯವಹಾರದ ಬಗ್ಗೆ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ತನಿಖೆ ನಡೆಸದಿರುವುದು ಶೋಚನೀಯವಾಗಿದೆ ಎಂದರು.
ಸರ್ಕಾರದ ಯೋಜನೆಗಳನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸದೆ ಭಾರೀ ಅವ್ಯವಹಾರ ಎಸಗಿದ ಮಾಳೆಗಾಂವ್ ಗ್ರಾಮ ಪಂಚಾಯತ್ ಪಿಡಿಒ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿ ತಪ್ಪಿಸ್ಥ ಪಿಡಿಒ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸಿಎಂ ಅವರಿಗೆ ಬರೆದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.