ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರ ಅಧಿಕಾರಾವಧಿಯು ಜೂನ್ 30ರಂದು ಕೊನೆಗೊಳ್ಳಲಿದೆ. ಜೊತೆಗೆ ನಡ್ಡಾ ಮೋದಿ 3.0 ಸಂಪುಟದ ಭಾಗವಾಗಿರುವುದರಿಂದ, ಬಿಜೆಪಿ ಈಗ ಮುಂದಿನ ಅಧ್ಯಕ್ಷರ ಹುಡುಕಾಟದಲ್ಲಿದೆ.
ನಡ್ಡಾ ಈ ಬಾರಿ ಪಿಯೂಷ್ ಗೋಯಲ್ ಅವರಿಂದ ಅಧಿಕಾರ ಸ್ವೀಕರಿಸಿ ರಾಜ್ಯಸಭೆಯ ಸಭಾನಾಯಕರಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ. ಈ ವರ್ಷ ಹಲವಾರು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಇರುವ ಕಾರಣದಿಂದಾಗಿ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಆದಷ್ಟು ಬೇಗ ತುಂಬಲು ಚುನಾವಣೆಯನ್ನು ನಡೆಸುವ ನಿರೀಕ್ಷೆಯಿದೆ.
ಇನ್ನು “ನಡ್ಡಾ ಅವರ ಅವಧಿಯು ಈ ತಿಂಗಳು ಕೊನೆಗೊಳ್ಳಲಿದ್ದು, ಪಕ್ಷವನ್ನು ಮುನ್ನಡೆಸಲು ಬಿಜೆಪಿ ಉತ್ತರಾಧಿಕಾರಿಯ ಹುಡುಕಾಟದಲ್ಲಿದೆ” ಎಂದು ಬಿಜೆಪಿಯ ಹಿರಿಯ ನಾಯಕರು ಹೇಳಿರುವುದಾಗಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬಿಜೆಪಿಯಲ್ಲಿ ಈ ಹುದ್ದೆಗೆ ಹಲವು ಹೆಸರುಗಳು ಕೇಳಿಬರುತ್ತಿದೆ. ಆದರೆ ಈ ಸ್ಥಾನವನ್ನು ಪಡೆಯಲು ಮುಂಚೂಣಿಯಲ್ಲಿರುವುದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ. ಪ್ರಸ್ತುತ ಬಿಹಾರದಲ್ಲಿ ಬಿಜೆಪಿ ಉಸ್ತುವಾರಿ ವಹಿಸಿರುವ ವಿನೋದ್ ತಾವ್ಡೆ ಸಂಘಟನೆ ವಿಚಾರದಲ್ಲಿ ಹೆಸರುವಾಸಿಯಾಗಿದ್ದಾರೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ತೆಲಂಗಾಣ ಉಸ್ತುವಾರಿ ಸುನಿಲ್ ಬನ್ಸಾಲ್, ಒಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಸಮಿತಿ ಸದಸ್ಯ ಡಾ ಕೆ ಲಕ್ಷ್ಮಣ್, ರಾಜಸ್ಥಾನದ ಸಂಸದ ಓಂ ಮಾಥುರ್, ಹಮೀರ್‌ಪುರ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್, ಬಿಹಾರ ಸಂಸದ ಸಂಜಯ್ ಜೈಸ್ವಾಲ್ ಹೆಸರು ಕೂಡಾ ಕೇಳಿಬರುತ್ತಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ವಿಜಯೇಂದ್ರ, ಮಾಳವಿಯಾಗೆ ನೋಟಿಸ್
ಬನ್ಸಾಲ್ ಇತ್ತೀಚೆಗೆ ಚುನಾವಣೆಗಳಲ್ಲಿ ಉಸ್ತುವಾರಿ ವಹಿಸಿದ ಮೂರು ರಾಜ್ಯಗಳ ಪೈಕಿ ಎರಡರಲ್ಲಿ ಬಿಜೆಪಿ ಉತ್ತಮವಾಗಿ ಕಾರ್ಯನಿರ್ವಹಿಸಿರುವುದರಿಂದ ಅವರ ಹೆಸರನ್ನು ಕೂಡಾ ಪರಿಗಣಿಸಬಹುದು. ಆರ್‌ಎಸ್‌ಎಸ್‌ನೊಂದಿಗೆ ದೀರ್ಘಾವಧಿಯ ಸಂಬಂಧ ಹೊಂದಿರುವ ಕಾರಣ ಗುಜರಾತ್‌ನ ಉಸ್ತುವಾರಿಯೂ ಆಗಿರುವ ಮಾಥುರ್ ಕೂಡಾ ಈ ಸ್ಥಾನ ಗಳಿಸುವ ಸಾಧ್ಯತೆಯಿದೆ.
ಇನ್ನು ಬಿಜೆಪಿ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಮುಖ್ಯಸ್ಥರನ್ನಾಗಿ ನೇಮಿಸಲು ನಿರ್ಧರಿಸಿದರೆ, ವನತಿ ಶ್ರೀನಿವಾಸನ್ ಪ್ರಮುಖ ಸ್ಪರ್ಧಿಯಾಗಲಿದ್ದಾರೆ.