ಗದಗ ಜಿಲ್ಲಾಧಿಕಾರಿ ಕಚೇರಿ ಮುಂದೆ ‘ದಲಿತ ಮಿತ್ರ ಮೇಳ ಗದಗ’ ಎಂಬ ಬ್ಯಾನರ್ ಅಡಿಯಲ್ಲಿ ತೋಂಟದಾರ್ಯ ಮಠದ ವಿರುದ್ಧ ಕೆಲವರು ಪ್ರತಿಭಟನೆ ಮಾಡುತ್ತಿದ್ದಾರೆ. ಅವರು ತಮ್ಮ ಸಂಘಟನೆ ಅಡಿಯಲ್ಲಿ ಪ್ರತಿಭಟನೆ ಮಾಡುವುದು ಬಿಟ್ಟು, ದಲಿತ ಯುವಜನರ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿರುವುದು ದಲಿತ ಸಮಾಜ ತೋಂಟದಾರ್ಯ ಮಠದ ವಿರುದ್ಧ ಇದೆ ಎಂಬ ತಪ್ಪು ಸಂದೇಶ ನೋಡುತ್ತದೆ ಎಂದು ಹೋರಾಟಗಾರ ಮುತ್ತು ಬಿಳಿಯಲಿ ಕಿಡಿಕಾರಿದ್ದಾರೆ.
“ಗದಗನಲ್ಲಿರುವ ಯಾವುದೇ ದಲಿತ ಸಂಘಟನೆಗಳು ಈ ಪ್ರತಿಭಟನೆಯ ಪರವಾಗಿಲ್ಲ. ದಲಿತರ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ನಮ್ಮ ವಿರೋಧವಿದೆ. ಇಂದು ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಫೋಟೋ ಜೊತೆಗೆ ಈ ದೇಶದ ದೇಶದ್ರೋಹಿ ಸಾವರ್ಕರ್ ಫೋಟೊ ಇಟ್ಟಿದ್ದರು. ಇದರಿಂದಲೇ ತಿಳಿಯುತ್ತದೆ ಅವರು ದಲಿತ ಸಂಘಟನೆಯವರಲ್ಲ ಕೋಮುವಾದಿ ಸಂಘಟನೆಯವರು” ಎಂದು ಆರೋಪಿಸಿದ್ದಾರೆ.
“ನಾನು ಬಾಲರಾಜ್ ಅರಬರ, ಆನಂದ ಸಿಂಗಾಡಿ, ಯಲ್ಲಪ್ಪ ರಾಮಗಿರಿ,ಅನಿಲ ಕಾಳೆ,ಪರಶು ಕಾಳೆ,ಪೊಕ್ಕು ರಾಮಗಿರಿ, ಬಸೂ ಬಿಳೆಯಲಿ ಎಲ್ಲರೂ ಒಂದೆಡೆ ಸೇರಿ ಈ ಪ್ರತಿಭಟನೆಯನ್ನು ಖಂಡಿಸಿ, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇಮಗೌಡ ಅವರಿಗೆ ಫೋನ್ ಮುಖಾಂತರ ಸಂಪರ್ಕಿಸಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಫೋಟೊ ಜೊತೆಗೆ ಸಾವರ್ಕರ್ ಫೋಟೊ ಯಾವುದೇ ಕಾರಣಕ್ಕೂ ಇರಬಾರದು. ಕೂಡಲೇ ಸಾವರ್ಕರ್ ಫೋಟೊ ತೆರವುಗೊಳಿಸುವಂತೆ ಆಗ್ರಹಿಸಿದೆವು. ಎಚ್ಚೆತ್ತ ಪೊಲೀಸರು ಸಾವರ್ಕರ್ ಫೋಟೋ ತೆರವುಗೊಳಿಸಿದ್ದಾರೆ” ಎಂದು ಹೇಳಿದರು.