ಭಾರತವು ವಿವಿಧತೆಯಲ್ಲಿ ಏಕತೆ ಕಂಡ ದೇಶವಾಗಿದೆ. ಹಿಂದು ಮುಸ್ಲಿಮರು ಶಾಂತಿ ಮತ್ತು ಸೌಹಾರ್ದದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಕ್ರಿದ್ ಹಬ್ಬ ಆಚರಿಸಬೇಕು ಎಂದು ಪಿಎಸ್‌ಐ ಲಕ್ಕಪ್ಪ ಜೋಡಹಟ್ಟಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಹುನಗುಂದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಪಿಎಸ್‌ಐ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಮಾತನಾಡಿದ ಪಿಎಸ್‌ಐ ಲಕ್ಕಪ್ಪ, “ಎಲ್ಲ ಹಬ್ಬಗಳನ್ನು ಸೌಹಾರ್ದ ಭಾವದಿಂದ ಆಚರಿಸುತ್ತಾರೆ. ಅದು ಈ ಮಣ್ಣಿನ ಗುಣವಾಗಿದೆ. ಇದಕ್ಕೆಲ್ಲ ಹಿರಿಯರ ಮಾರ್ಗದರ್ಶನ ಕಾರಣ” ಎಂದರು.
“ಪ್ರತಿಯೊಬ್ಬರು ಯಾವುದೇ ಧರ್ಮಕ್ಕೆ ತೊಂದರೆಯಾಗದಂತೆ ತಮ್ಮ ತಮ್ಮ ಧರ್ಮದ ಪದ್ಧತಿಯಂತೆ ಹಾಗೂ ಕೋರ್ಟ್ ನೀಡಿದ ಮಾರ್ಗಸೂಚಿಯಂತೆ ಬಕ್ರೀದ್ ಹಬ್ಬವನ್ನು ಆಚರಿಸಬೇಕು” ಎಂದು ತಿಳಿಸಿದರು.
ಮುಸ್ಲಿಂ ಸಮುದಾಯದ ಮುಖಂಡ ಶಬ್ಬೀರ್ ಮೌಲ್ವಿ ಮಾತನಾಡಿ, “ಪಟ್ಟಣದಲ್ಲಿ ನಾವೆಲ್ಲರೂ ಅಣ್ಣತಮ್ಮಂದಿರಂತೆ ಬಾಳು ಬದುಕುತ್ತಿದ್ದೇವೆ. ನಮ್ಮ ಪಟ್ಟಣವು ಸಾಮರಸ್ಯಕ್ಕೆ ಹೆಸರಾಗಿದೆ ಅನೇಕ ವರ್ಷಗಳಿಂದ ಹಿಂದು-ಮುಸ್ಲಿಮರು ಅಣ್ಣ ತಮ್ಮಂದಿರಂತೆ ಬಾಳಿದ್ದು ಮುಂದೆಯೂ ಕೂಡ ಅದೇ ಮಾರ್ಗದಲ್ಲಿ ನಡೆಯುತ್ತೇವೆ” ಎಂದರು.
ಸಭೆಯಲ್ಲಿ ಸ್ಥಳೀಯ ನ್ಯಾಯವಾದಿ ಮಹಾಂತೇಶ ಅವಾರಿ, ರೈತ ಮುಖಂಡ ಅಮರೇಶ ನಾಗೂರ, ಅಪ್ಪು ಆಲೂರ ಶಾಂತಿ ಸಭೆ ಕುರಿತು ಮಾತನಾಡಿದರು. ಸಭೆಯಲ್ಲಿ ಮುನ್ನಾ ಭಗವಾನ, ಮಹಾಂತೇಶ ಮದುರಿ, ಪರ್ವೀಜ್ ಖಾಜಿ, ಫಕ್ರುದ್ದೀನ್ ತಾಳಿಕೋಟಿ, ಶಿವಾನಂದ ಕಂಠಿ, ಇತರರು ಇದ್ದರು.