“ಎತ್ತಿನಹೊಳೆ ಕಾಮಗಾರಿಗೆ ಅಡಚಣೆ ಉಂಟು ಮಾಡಿರುವ 500 ಎಕರೆ ಜಾಗವನ್ನು ಹಸ್ತಾಂತರಿಸಲು ಅರಣ್ಯ ಇಲಾಖೆ ಒಪ್ಪಿಗೆ ಸೂಚಿಸಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ನೀರಾವರಿ ಸಚಿವರೂ ಆಗಿರುವ ಶಿವಕುಮಾರ್ ಅವರು ಈ ಯೋಜನೆ ಸಂಬಂಧ ವಿಕಾಸಸೌಧದಲ್ಲಿ ಗುರುವಾರ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಅರಣ್ಯ ಸಚಿವ ಈಶ್ವರ ಖಂಡ್ರೆ, ದೆಹಲಿಯಲ್ಲಿ ಕರ್ನಾಟಕ ಸರಕಾರದ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಹಾಗೂ ಸಂಬಂಧಪಟ್ಟ ಇಲಾಖೆಗಳ ಪ್ರಮುಖ ಅಧಿಕಾರಿಗಳ ಜತೆ ಸಭೆ ನಡೆಸಿದರು.
ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಎಂ ಶಿವಕುಮಾರ್, “ಎತ್ತಿನಹೊಳೆ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಕೆಲಸ ತ್ವರಿತಗತಿಯಲ್ಲಿ ನಡೆಸಲು ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ದೆಹಲಿ ಪ್ರತಿನಿಧಿ ಟಿ.ಬಿ ಜಯಚಂದ್ರ, ಕಂದಾಯ, ಅರಣ್ಯ, ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಇಂದು ಚರ್ಚೆ ಮಾಡಿದ್ದೇವೆ. ಈ ಯೋಜನೆಗೆ ಅಗತ್ಯವಿರುವ ಜಾಗವನ್ನು ಅರಣ್ಯ ಇಲಾಖೆ ನೀಡುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಕಂದಾಯ ಇಲಾಖೆಯು ಅರಣ್ಯ ಇಲಾಖೆಗೆ 500 ಎಕರೆ ಜಾಗ ನೀಡಲಿದೆ. ಈ ಪ್ರಕ್ರಿಯೆಯನ್ನು ಕಾನೂನು ಚೌಕಟ್ಟಿನಲ್ಲಿ ಪೂರ್ಣಗೊಳಿಸುತ್ತೇವೆ” ಎಂದು ತಿಳಿಸಿದರು.
“ಈ ಯೋಜನೆಗಳ ಕಾಮಗಾರಿಗೆ ಎದುರಾಗಿರುವ ಸಮಸ್ಯೆಗಳನ್ನು ಅಧಿಕಾರಿಗಳು ಗುರುತಿಸಿದ್ದು, ಅವುಗಳಿಗೆ ಪರಿಹಾರ ಹುಡುಕಲು ಸಭೆಯಲ್ಲಿ ಚರ್ಚಿಸಿದ್ದೇವೆ. 260 ಕಿ.ಮೀ ಉದ್ಧದ 20 ಸ್ಥಳಗಳಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು ಇವೆ. ಈ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ಅಗತ್ಯವಿದ್ದ ಕಾರಣ ನಮ್ಮ ಅರಣ್ಯ ಸಚಿವರು ಹಾಗೂ ಇಲಾಖೆ ಸಚಿವರ ಜತೆ ಚರ್ಚೆ ಮಾಡಿದ್ದೇವೆ. ಈ ವಿಚಾರವಾಗಿ ಕಂದಾಯ, ನೀರಾವರಿ ಹಾಗೂ ಅರಣ್ಯ ಇಲಾಖೆ ಸೇರಿ ಒಟ್ಟಾಗಿ ಜಂಟಿ ಸರ್ವೇ ಮಾಡುತ್ತಿದ್ದೇವೆ. ಅರಣ್ಯ ಇಲಾಖೆಗೆ ಬದಲಿ ಜಮೀನು ನೀಡಲು ಕಂದಾಯ ಇಲಾಖೆ ಒಪ್ಪಿದೆ. ಕೂಡಲೇ ಈ ಕಾಮಗಾರಿ ನಡೆಸಲು ಮನವಿ ಮಾಡಿದ್ದೇವೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಪೋಕ್ಸೋದಂತಹ ಕಾನೂನನ್ನೂ ಪಾಲಿಸದ ರಾಜ್ಯ ಸರ್ಕಾರ; ಯಡಿಯೂರಪ್ಪ ಬಂಧನಕ್ಕೆ ಯಾಕಿಷ್ಟು ವಿಳಂಬ?: ಹೋರಾಟಗಾರರ ಆಕ್ರೋಶ
“ಈ ಮಧ್ಯೆ ಕೆಲವು ಜಾಗದಲ್ಲಿ ರೈತರಿಗೆ 51 ಕೋಟಿ ನೀಡಬೇಕಾಗಿದೆ. ಈ ಪೈಕಿ 10 ಕೋಟಿ ಹಣ ನೀಡಲಾಗಿದ್ದು, 41 ಕೋಟಿ ಬಾಕಿ ಇದೆ. ಈ ಜಾಗದ ವಿಚಾರವಾಗಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ನಡುವೆ ಗೊಂದಲವಿದೆ. ಹೀಗಾಗಿ ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಇನ್ನು ದೊಡ್ಡಬಳ್ಳಾಪುರದ ಲಕ್ಕೇನಹಳ್ಳಿಯಲ್ಲಿ ಸಮತೋಲಿತ ಜಲಾನಯನ ಯೋಜನೆ ಬಾಕಿ ಇದ್ದು ಇದರ ಕಾಮಗಾರಿ ಆರಂಭಿಸಲು ತಯಾರಿ ಮಾಡಲಾಗಿದೆ. ಮುಂದಿನ ತಿಂಗಳ ಒಳಗಾಗಿ ನೀರನ್ನು ಹೊರತರಲು ನಿರ್ದೇಶನ ನೀಡಲಾಗಿದೆ. ಮೊದಲ ಹಂತದಲ್ಲಿ 48 ಕಿ.ಮೀ ನೀರು ಹರಿಸುವಂತೆ ಸೂಚನೆ ನೀಡಲಾಗಿದೆ. ಈ ಯೋಜನೆಯಿಂದ ಮತ್ತಷ್ಟು ಪ್ರಯೋಜನ ಪಡೆಯುವ ಉದ್ದೇಶದೊಂದಿಗೆ ಇದರ ಜತೆಗೆ ಸಮುದ್ರಕ್ಕೆ ಸೇರುತ್ತಿರುವ ನೀರನ್ನು ಹೇಗೆ ಎಲ್ಲೆಲ್ಲಿ ನಾವು ಹಿಡಿದಿಟ್ಟು ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಅಧ್ಯಯನ ನಡೆಸಲು ಉನ್ನತ ಮಟ್ಟದ ತಾಂತ್ರಿಕ ಸಮಿತಿ ರಚಿಸಲಿದ್ದೇವೆ” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
