ಬೀದರ್ ಜಿಲ್ಲೆಯ ಪ್ರತಿಷ್ಠಿತ ಖಾಸಗಿ ಶಾಲೆಗೆ ಆಯ್ಕೆಯಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಶೀಘ್ರವೇ ಆಂಗ್ಲ ಮಾಧ್ಯಮ ಶಾಲೆಗೆ ಪ್ರವೇಶಾತಿ ದೊರಕಿಸಿಕೊಡುವಂತೆ ಆಗ್ರಹಿಸಿ ಪೋಷಕರು ಹಾಗೂ ಅವರ ಮಕ್ಕಳು ಪ್ರತಿಭಟನೆ ನಡೆಸಿದರು.
ಬೀದರ್ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಕ್ಕಳೊಂದಿಗೆ ಧರಣಿ ನಡೆಸಿ ಪೋಷಕರು, “ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲು ತಾರತಮ್ಯ ಮಾಡುತ್ತಿರುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಮಾನ್ಯತೆ ರದ್ದುಪಡಿಸಬೇಕು. ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.
ಸಮಾಜ ಕಲ್ಯಾಣ ಕಲ್ಯಾಣಯಲ್ಲಿ ದಲಿತ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಿಕ್ಷಣ ಯೋಜನೆಯಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಯ ಆಡಳಿತ ಮಂಡಳಿ ಪ್ರವೇಶಾತಿ ನಿರಾಕರಿಸಿದೆ. ಪರಿಣಾಮ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕದಲ್ಲಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಖಾಸಗಿ ಶಾಲೆಯಲ್ಲಿ ಪ್ರವೇಶಾತಿ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಸಂಜೆ ಭೇಟಿ ನೀಡಿ ಪೋಷಕರಿಂದ ಹಕ್ಕೊತ್ತಾಯ ಪತ್ರ ಸ್ವೀಕರಿಸಿದರು. ಬಳಿಕ ಮಾತನಾಡಿ, ಮಕ್ಕಳ ಪ್ರವೇಶಾತಿ ಪಡೆಯುವಂತೆ ಶಾಲಾ ಆಡಳಿತ ಮಂಡಳಿಗೆ ತಿಳಿಸಿಲಾಗಿದೆ, ಪ್ರತಿಭಟನೆ ಹಿಂಪಡೆಯುವಂತೆ ಪೋಷಕರಿಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಿತ್ತನೆ ಬೀಜ ಖರೀದಿಸಿ ಮನೆಗೆ ತೆರಳುವ ವೇಳೆ ಅಪಘಾತ; ಇಬ್ಬರು ರೈತರು ಸಾವು
ಪ್ರತಿಭಟನೆಯಲ್ಲಿ ಲಕ್ಷ್ಮೀಪುತ್ರ ಮಾಳಗೆ, ಗೌತಮ ಚವ್ಹಾಣ, ಶ್ರೀನಿವಾಸ ಕಟ್ಟಿಮನಿ, ಬಸವರಾಜ ಮೋರೆ, ಸುಧಾಕರ ರಾಜಗೀರಾ, ಬಾಬು ನಾರಾಯಣಪುರ, ಸಚಿನ್ ರಾಠೋಡ್, ದೇವಿದಾಸ ಚವ್ಹಾಣ, ಸೇರಿದಂತೆ ಇತರರಿದ್ದರು.