ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಂಧನಕ್ಕೆ ನ್ಯಾಯಾಲಯ ಜಾಮೀನುರಹಿತ ವಾರಂಟ್ ಹೊರಡಿಸಿದೆ. ವಾರಂಟ್ ಬಂದ ಬೆನ್ನಲ್ಲೇ ಯಡಿಯೂರಪ್ಪರನ್ನು ಬಿಜೆಪಿ ಸಮರ್ಥಿಸಿಕೊಳ್ಳುತ್ತಿದೆ. ಇದೇ ವೇಳೆ, ಯಡಿಯೂರಪ್ಪ ಪರವಾಗಿ ಮಾತನಾಡುವ ಭರದಲ್ಲಿ ಬಿಜೆಪಿ ಮುಖಂಡ ಜಿ ಮರಿಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಯಡಿಯೂರಪ್ಪರನ್ನು ಎದುರು ಹಾಕಿಕೊಂಡವರು ಯಾರೂ ಉಳಿದಿಲ್ಲ. ದೂರುದಾರ ಮಹಿಳೆಯೂ ಸತ್ತುಹೋದಳು’ ಎಂದು ಹೇಳಿದ್ದಾರೆ. ಅವರ ಹೇಳಿಕೆ ಮಹಿಳೆಯ ಸಾವಿನ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.
ಸಕಲೇಶಪುರದಲ್ಲಿ ಮಾತನಾಡಿರುವ ಮರಿಸ್ವಾಮಿ, “ಯಡಿಯೂರಪ್ಪ ಸಾಹೇಬ್ರನ್ನು ಎದುರು ಹಾಕಿಕೊಂಡವರು ಯಾರೂ ಉಳಿದಿಲ್ಲ. ಅವಳೂ ಕೂಡ ಹದಿನೈದು ದಿನಗಳ ಹಿಂದೆ ಸತ್ತುಹೋದಳು” ಎಂದು ಹೇಳಿದ್ದಾರೆ.
“ಲಿಂಗಾಯಿತ ಸಮುದಾಯದವಳೇ ಆದ ಮಹಿಳೆಯೊಬ್ಬಳು ತನ್ನ ಮಗಳೊಂದಿಗೆ ಯಡಿಯೂರಪ್ಪನವರ ನಿವಾಸಕ್ಕೆ ಬಂದಿದ್ದಳು. ಬಜಾಜ್ ಕಂಪನಿಯಿಂದ ನನಗೆ 5,000 ಕೋಟಿ ರುಪಾಯಿ ಬರುವುದಿದೆ. ಇದಕ್ಕೆ ಸಹಾಯ ಮಾಡಿ ಎಂದಳು. ಯಡಿಯೂರಪ್ಪ ಸಾಹೇಬ್ರು ಪೊಲೀಸ್ ಕಮಿಷನರ್‌ಗೆ ಫೋನ್ ಮಾಡಿ, ಇವರ ಸಮಸ್ಯೆ ಏನಿದೆಯೋ ನೋಡಿ ಎಂದು ಹೇಳಿ ಅವರ ಬಳಿ ಆಕೆಯನ್ನು ಕಳಿಸಿದರು. ನಂತರ ಆಕೆ ಸಾಹೇಬ್ರ ವಿರುದ್ಧ ಇಲ್ಲಸಲ್ಲದ ದೂರು ದಾಖಲಿಸಿದರು. ಈ ಪ್ರಕರಣದಲ್ಲಿ ನನ್ನ ಹೆಸರೂ ಇದೆ. ನಾನೂ ಮತ್ತು ನನ್ನ ಸ್ನೇಹಿತ ರುದ್ರೇಶ್ ಇಂದು ಸಿಐಡಿ ಮುಂದೆ ಹೇಳಿಕೆ ನೀಡಿದ್ದೇವೆ” ಎಂದು ಮರಿಸ್ವಾಮಿ ಹೇಳಿದ್ದಾರೆ.
“ಯಡಿಯೂರಪ್ಪ ಸಾಹೇಬ್ರನ್ನು ಬಂಧಿಸುತ್ತಾರೆ ಎಂದು ಟಿವಿ ಚಾನಲ್‌ಗಳಲ್ಲಿ ಸುದ್ದಿ ಬರುತ್ತಿದೆ. ಯಡಿಯೂರಪ್ಪ ಸಾಹೇಬ್ರನ್ನು ಎದುರು ಹಾಕಿಕೊಂಡವರು ಯಾರೂ ಉಳಿದಿಲ್ಲ. ಅವಳೂ (ಸಂತ್ರಸ್ತೆಯ ತಾಯಿ) ಹದಿನೈದು ದಿನಗಳ ಹಿಂದೆ ಸತ್ತು ಹೋದಳು” ಎಂದು ಅವರು ಹೇಳಿದರು.
ಯಡಿಯೂರಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದ ಸಂತ್ರಸ್ತೆಯ ತಾಯಿ ಇತ್ತೀಚಿಗೆ ಸಾವನ್ನಪ್ಪಿದ್ದಾರೆ. ಅವರು ಅನಾರೋಗ್ಯದಿಂದ ಸಾವನ್ನಪ್ಪಿದರು ಎಂದು ಹೇಳಲಾಗಿದೆ. ಆದರೂ, ಅವರು ಆಕೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇದೀಗ, ಆ ಅನುಮಾನಗಳಿಗೆ ಮರಿಸ್ವಾಮಿ ಹೇಳಿಕೆ ಮತ್ತಷ್ಟು ಪುಷ್ಟಿ ನೀಡಿದೆ.
17 ವರ್ಷದ ಸಂತ್ರಸ್ತೆ ತನ್ನ ಮೇಲೆ ಅತ್ಯಾಚಾರ ನಡೆದಿದೆ. ತನಗೆ ನ್ಯಾಯ ಕೊಡಿಸಿ ಎಂದು ಕೋರಿ ತನ್ನ ತಾಯಿಯೊಂದಿಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ, ರೇಪ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವ ನೆಪದಲ್ಲಿ ಹದಿನೇಳು ವರ್ಷದ ಬಾಲಕಿಯನ್ನು ರೂಮಿನಲ್ಲಿ ಕರೆದುಕೊಂಡು ಆಕೆಯ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಯಡಿಯೂರಪ್ಪ ವಿರುದ್ಧ ಮಾರ್ಚ್ 14ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣವನ್ನು ದಾಖಲಿಸಲಾಗಿತ್ತು. ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿತ್ತು. ಇದೀಗ, ಯಡಿಯೂರಪ್ಪ ಬಂಧನಕ್ಕೆ ನ್ಯಾಯಾಲಯ ವಾರಂಟ್ ಹೊರಡಿಸಿದೆ.