ಗುಜರಾತ್‌ನ ಬಿಜೆಪಿ ಆಡಳಿತವಿರುವ ವಡೋದರ ಮಹಾನಗರ ಪಾಲಿಕೆ(ವಿಎಂಸಿ) ಮಾಜಿ ಟೀಂ ಇಂಡಿಯಾ ಕ್ರಿಕೆಟಿಗ ಹಾಗೂ ನೂತನವಾಗಿ ಪಶ್ಚಿಮ ಬಂಗಾಳದಿಂದ ಆಯ್ಕೆಯಾಗಿರುವ ಸಂಸದ ಯೂಸುಫ್ ಪಠಾಣ್ ಅವರಿಗೆ ಪಾಲಿಕೆಗೆ ಸೇರಿದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಆರೋಪದ ಮೇಲೆ ನೋಟಿಸ್ ನೀಡಿದೆ.
ಬಿಜೆಪಿಯ ಮಾಜಿ ಪಾಲಿಕೆ ಸದಸ್ಯರಾದ ವಿಜಯ್ ಪವಾರ್ ದೂರಿನ ಮೇರೆಗೆ ವಿಎಂಸಿಯ ಸ್ಥಾಯಿ ಸ್ಥಮಿತಿ ಅಧ್ಯಕ್ಷರಾದ ಶೀತಲ್ ಮಿಸ್ತ್ರಿ ಅವರು ಜೂನ್ 6 ರಂದು ನೋಟಿಸ್ ಜಾರಿಗೊಳಿಸಿದ್ದಾರೆ.
“ನಮಗೆ ಯೂಸುಫ್ ಪಠಾಣ್ ಅವರ ಮೇಲೆ ಯಾವುದೇ ದ್ವೇಷವಿಲ್ಲ. ಮಾಜಿ ಕ್ರಿಕೆಟಿಗರ ಬಳಿಯಿರುವ ಜಾಗ ವಿಎಂಸಿ ವ್ಯಾಪ್ತಿಗೆ ಸೇರಿದೆ. ಒತ್ತುವರಿ ಮಾಡಿಕೊಂಡಿರುವ ವಿಎಂಸಿಯ ಜಾಗವನ್ನು 2012ರಲ್ಲಿ ನಿರ್ಮಾಣ ಕಾಮಗಾರಿ ಪ್ರಯುಕ್ತ ತಮಗೆ ನೀಡುವಂತೆ ಪ್ರತಿ ಚದುರ ಮೀಟರ್‌ಗೆ 57 ಸಾವಿರ ರೂ. ನೀಡುವುದಾಗಿ ತಿಳಿಸಿದ್ದರು. ಆದರೆ ವಿಎಂಸಿ ಆಡಳಿತ ಮಂಡಳಿ ಅನುಮತಿ ನೀಡಿದ್ದರೂ ರಾಜ್ಯ ಸರ್ಕಾರ ಅನುಮತಿ ನೀಡಿರಲಿಲ್ಲ” ಎಂದು ವಿಜಯ್ ಪವಾರ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೊಡುವ ಸ್ಥಾನದಲ್ಲಿರುವವರು ಒಳ್ಳೆಯದನ್ನೇ ಕೊಡಬೇಕು ಎಂದು ರಾಜ್ ಹೇಳಿದ್ದು ಯಾರಿಗೆ?
ಒತ್ತುವರಿ ಜಾಗಕ್ಕೆ ಯೂಸುಫ್ ಪಠಾಣ್ ತಂತಿ ಬೇಲಿಯನ್ನು ಅಳವಡಿಸಿಕೊಂಡಿದ್ದು, ಪಾಲಿಕೆರ ಅಧಿಕಾರಿಗಳ ತನಿಖೆ ವೇಳೆ ತಿಳಿದುಬಂದಿದೆ. ನಂತರದಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಪವಾರ್ ತಿಳಿಸಿದ್ದಾರೆ.
“ಜಾಗ ತೆರವುಗೊಳಿಸಲು ನೋಟಿಸ್ ಜಾರಿಗೊಳಿಸಿದ್ದು, ಕೆಲವು ವಾರಗಳ ಕಾಲ ನಾವು ಕಾಯುತ್ತೇವೆ. ಜಾಗವನ್ನು ಬಿಡದಿದ್ದಲ್ಲಿ ಮುಂದಿನ ಕ್ರಮ ಜರುಗಿಸುವ ಬಗ್ಗೆ ನಿರ್ಧರಿಸಲಾಗುತ್ತದೆ” ಎಂದು ಶೀತಲ್ ಮಿಸ್ತ್ರಿ ತಿಳಿಸಿದ್ದಾರೆ.
