ಶಿಲ್ಪಕಲೆಗಳ ತವರೂರು, ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ, ಚನ್ನಕೇಶವನ ನಾಡು ವಗೈರೆ ಹೆಸರಿನಿಂದ ಕರೆಸಿಕೊಳೊತ್ತಿರುವ ಪಟ್ಟಣ ಹಾಸನ ಜಿಲ್ಲೆಯ ಬೇಲೂರು. ಚನ್ನಕೇಶವ ದೇವಾಲಯದ ಸುತ್ತಮುತ್ತ ನಾನಾ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸಿ, ಬದುಕು ದೂಡುತ್ತಿದ್ದಾರೆ. ಆದರೆ, ಎಂದಿನಂತೆ ಬುಧವಾರ ರಾತ್ರಿ ತಮ್ಮ ವ್ಯಾಪಾರ ಸಾಮಾನುಗಳನ್ನು ಜೋಡಿಸಿಟ್ಟು, ತಮ್ಮ ಗುಡಿಸಲಿಗೆ ತೆರಳಿದ್ದ ವ್ಯಾಪಾರಿಗಳು ಗುರುವಾರ ಬೆಳಗ್ಗೆ ಬಂದು ನೋಡುವುದರಲ್ಲಿ ತಾವು ಇಟ್ಟಿದ್ದ ಎಲ್ಲ ಸರಕು-ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ನಾಶವಾಗಿದ್ದವು. ಇದನ್ನು ಕಂಡ ವ್ಯಾಪಾರಿಗಳು ದಂಗಾಗಿದ್ದು, ದಿಕ್ಕೆಟ್ಟವರಾಗಿದ್ದಾರೆ. ಅವರ ಜೀವನ ಆಧಾರವಾಗಿದ್ದ ವ್ಯಾಪಾರವನ್ನು ಪುರಸಭೆ ಅಧಿಕಾರಿಗಳು ಕಸಿದುಕೊಂಡಿದ್ದಾರೆ.
ಬೇಲೂರು ಪುರಸಭಾ ಆರೋಗ್ಯ ಅಧಿಕಾರಿ ಲೋಹಿತ ಮತ್ತು ಮೇಸ್ತ್ರಿ ಹರೀಶ್ ನೇತೃತ್ವದ ಸಿಬ್ಬಂದಿಗಳು ಬೀದಿ ಬದಿ ವ್ಯಾಪಾರಿಗಳು ಹಾಕಿಕೊಂಡಿದ್ದ ಗುಡಾರಗಳನ್ನು ಕೊಯ್ಡು, ತಾಟುಗಳನ್ನು ಹರಿದು ಹಾಕಿದ್ದಾರೆ. ವ್ಯಾಪಾರ ಸಾಮಗ್ರಿಗಳನ್ನು ಒಡೆದು, ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ವ್ಯಾಪಾರಿಗಳಲ್ಲಿ ಹೆಚ್ಚಿನವರು ತರಕಾರಿ-ಹಣ್ಣು ವ್ಯಾಪಾರಿಗಳು. ಅವರು ಸಾವಿರಾರು ರೂಪಾಯಿ ಬೆಕೆಯ ಬೆಳ್ಳುಳ್ಳಿ, ಈರುಳ್ಳಿ, ತರಕಾರಿ, ಹಣ್ಣುಗಳನ್ನು ಹಾಗೂ ವ್ಯಾಪಾರದ ಬಟ್ಟೆಗಳನ್ನು ತಮ್ಮ ಗುಡಾರದಲ್ಲಿ ಮುಚ್ಚಿಟ್ಟು ಹೋಗಿದ್ದರು. ಅವುಗಳನ್ನು ಅಧಿಕಾರಿಗಳು ಬೀದಿಗೆಸೆದು ಹಾಳು ಮಾಡಿದ್ದಾರೆ ಎಂದು ವ್ಯಾಪಾರಿಗಳು ದೂರಿದ್ದಾರೆ.
“ನಮಗೆ ಒಂದು ದಿನ ಮುಂಚಿತವಾಗಿ ಹೇಳಿದ್ದರೂ, ನಾವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ಆದರೆ, ಹೇಳದೆ-ಕೇಳದೆ ನಮ್ಮ ಸಾಮಗ್ರಿಗಳನ್ನು ನಾಶ ಮಾಡಿ, ನಮ್ಮ ಬದುಕನ್ನು ಬೀದಿ ಪಾಲು ಮಾಡಿದ್ದಾರೆ” ಎಂದು ಅಧಿಕಾರಿಗಳಿಗೆ ವ್ಯಾಪಾರಿಗಳು ಶಾಪ ಹಾಕಿದ್ದಾರೆ.
“ಉಳ್ಳವರು ಹಣವಂತರು ಜೀವನೋಪಾಯಕ್ಕಾಗಿ ಸ್ವಂತ ಬಾಡಿಗೆ ಕಟ್ಟಡಗಳಲ್ಲಿ ವ್ಯಾಪಾರ ಮಾಡುತ್ತಿದ್ದರೆ, ಜೀವನೋಪಾಯಕ್ಕೆ ಒಂದು ಹೊತ್ತಿನ ಗಂಜಿಗಾಗಿ ಬೀದಿ ಬದಿಗಳಲ್ಲಿ ದಿನದ ಸುಂಕ ಕೊಟ್ಟು ತರಕಾರಿ, ಹಣ್ಣು ಹಂಪಲು, ಪ್ಲಾಸ್ಟಿಕ್ ಸಾಮಾನು, ಪಾನಿಪುರಿ ಇನ್ನಿತರೇ ವ್ಯಾಪಾರವನ್ನು ಮಾಡಿ, ಜೀವನ ದೂಡುತ್ತಿದ್ದೇವೆ. ನಮ್ಮ ಬದುಕನ್ನು ಅಧಿಕಾರಿಗಳು ಕಸಿದುಕೊಂಡಿದ್ದಾರೆ. ನಮ್ಮ ಕಷ್ಟಗಳಿಗೆ ಜನಪ್ರತಿನಿಧಿಗಳೂ ಸ್ಪಂದಿಸುತ್ತಿಲ್ಲ” ಎಂದು ಈದಿನ.ಕಾಮ್ ಜೊತೆಗೆ ಮಾತನಾಡಿದ ಬೀದಿ ಬದಿ ವ್ಯಾಪಾರಿಗಳು ದೂರಿದ್ದಾರೆ.
ಪುರಸಭಾ ಆರೋಗ್ಯ ಅಧಿಕಾರಿ ಲೋಹಿತ ಮತ್ತು ಮೇಸ್ತ್ರಿ ಹರೀಶ್ ಎಂಬಾತನ ಸಿಬ್ಬಂದಿಗಳ ದಬ್ಬಾಳಿಕೆಗೆ ಕಡಿವಾಣ ಹಾಕದೆ, ಜನಪ್ರತಿನಿಧಿಗಳು ಕಂಡೂ ಕಾಣದಂತಿದ್ದಾರೆ. ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮತಕ್ಕಾಗಿ ನಮ್ಮ ಗುಡಿಸಲುಗಳ ಬಳಿ ಬಂದವರು, ಈಗ ನಮ್ಮ ಅಳಲು ಕೇಳಲು ಕಾಣೆಯಾಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಬೇಲೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಯಾವುದೇ ಸಮಸ್ಯೆ ಇಲ್ಲ. ಅದರೂ, ನಮ್ಮ ಮೇಲೆ ಅಧಿಕಾರಿಗಳು ದರ್ಪ ತೋರುತ್ತಿದ್ದಾರೆ. ಆದರೆ, ಸರ್ಕಾರಿ ಉದ್ಯಾನವನ, ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಬಲಾಢ್ಯರ ವಿಚಾರದಲ್ಲಿ ಅಧಿಕಾರಿಗಳು ಮೂಕರಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದಿದ್ದ ಶಾಸಕರು ಈಗ ನಮ್ಮ ಕರೆಯನ್ನೇ ಸ್ವೀಕರಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಸಮಸ್ಯೆಯನ್ನು ಪರಿಹರಿಸಬೇಕು. ಜಿಲ್ಲಾಧಿಕಾರಿಗಳು ಕೂಲಂಕುಶವಾಗಿ ತನಿಖೆ ನಡೆಸಿ, ಕಾನೂನು ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.