ಹೊಳೆಆಲೂರು ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಇದ್ದರೂ ಇಲ್ಲದಂತಾಗಿದೆ. ಆಸ್ಪತ್ರೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ವೈದ್ಯರು, ಶುಶ್ರೂಷಕರು ಮತ್ತು ಹೆರಿಗೆ ವೈದ್ಯರನ್ನು ಕೂಡಲೇ ನೇಮಿಸಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಮುಖಂಡ ಬಸವರಾಜ್ ಕಾಳೆ ಆಗ್ರಹಿಸಿದೆ.
ಗದಗ ಜಿಲ್ಲೆ ರೋಣ ತಾಲೂಕು ಹೊಳೆಅಲೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆಯನ್ನು ಸರಿಪಡಿಸಿ, ವೈದ್ಯರ ನೇಮಕಾತಿಗಾಗಿ ಆಗ್ರಹಿಸಿ ರೋಣದಲ್ಲಿ ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆಯಲ್ಲಿ ಮಾತನಾಡಿದ ಬಸವರಾಜ್ ಕಾಳೆ, “ಹೊಳೆಅಲೂರು ಹೋಬಳಿ ಕೇಂದ್ರವಾಗಿದ್ದು, ಇಲ್ಲಿನ ಆಸ್ಪತ್ರೆಗೆ ಸುಮಾರು 20 ಹಳ್ಳಿಗಳ ಜನರು ಚಿಕಿತ್ಸೆಗಾಗಿ ಬರುತ್ತಾರೆ. ಆದರೆ, ಆ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯದೆ, ಪರದಾಡುವಂತಾಗಿದೆ. ಆಸ್ಪತ್ರೆಗೆ ಹೆರಿಗೆ ವೈದ್ಯರು ಸೇರಿದಂತೆ ಅಗತ್ಯವಿರುವಷ್ಟು ಮಂದಿ ವೈದ್ಯರನ್ನು ನೇಮಕ ಮಾಡಬೇಕು. 24 ಗಂಟೆಗಳೂ ಚಿಕಿತ್ಸೆ ದೊರೆವಂತೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
ಸಂಘಟನೆಯ ತಾಲೂಕು ಗೌರವಾಧ್ಯಕ್ಷ ವೀರಣ್ಣ ತೆಗ್ಗಿನಮನಿ ಮಾತನಾಡಿ, “ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ 8 ದಿನಗಳ ಕಾಲಾವಕಾಶ ನೀಡುತ್ತೇವೆ. ಈ ಅವಧಿಯೊಳಗೆ ಆಸ್ಪತ್ರೆಯ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲವಾದಲ್ಲಿ, ಬೃಹತ್ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ಕಾಸಿಂ ಮನ್ನಾಪುರ, ರಿನ್ ತಾಲೂಕು ಉಪಾಧ್ಯಕ್ಷ ರಾಜು ಉಳ್ಳಾಗಡ್ಡಿ, ತಾಲೂಕು ಸಂಚಾಲಕ ಸಂತೋಷ ನರೇಗಲ್, ವಾಸುದೇವ ಪವಾರ, ಶರಣಪ್ಪ ಕಾಶಪ್ಪನವರ, ಸುರೇಶ್ ಉಸಲಕೊಪ್ಪ, ರಾಜು ಅತ್ತಾರ, ಕಾಳಿಂಗಪ್ಪ ಉಪ್ಪಾರ, ಅನಿಲ್ ಬಟ್ಟಡ, ಸಾಗರ್ ಕಲಾಲ್, ಶಿವಾನಂದ ಭಜಂತ್ರಿ, ಕಳಕಪ್ಪ ಪೋತ ಇನ್ನೂ ಅನೇಕರು ಉಪಸ್ಥಿತರಿದ್ದರು.