ಈ ದಿನ ಸಂಪಾದಕೀಯ | ಮೂರು ಪ್ರಕರಣಗಳು ಮತ್ತು ‘ಮಾನವಂತ’ ಮಾಧ್ಯಮಗಳು

Date:

Advertisements

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ, ನಟ ದರ್ಶನ್-ಪವಿತ್ರಾ ಗೌಡ ಆರೋಪಿಗಳಾಗಿರುವ ರೇಣುಕಸ್ವಾಮಿ ಕೊಲೆ ಪ್ರಕರಣ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪೋಕ್ಸೊ ಪ್ರಕರಣ- ಇತ್ತೀಚಿನ ದಿನಗಳಲ್ಲಿ ಭಾರಿ ಸದ್ದು ಮಾಡಿದ ಸುದ್ದಿಗಳು.

ಈ ಮೂರೂ ಪ್ರಕರಣಗಳಲ್ಲಿ ಪಾಲ್ಗೊಂಡಿರುವವರು ಆರ್ಥಿಕವಾಗಿ ಬಲಿಷ್ಠರು. ಬಹುಸಂಖ್ಯಾತ ಜಾತಿಗೆ ಸೇರಿದವರು. ರಾಜಕೀಯವಾಗಿ ಪ್ರಭಾವಿಗಳು. ಜನಪ್ರಿಯ ವ್ಯಕ್ತಿಗಳು. ಮೂವರಿಗೂ ಅವರದೇ ಆದ ಅಭಿಮಾನಿ ಬಳಗಗಳಿವೆ. ಸ್ಥಾನ-ಮಾನಗಳಿವೆ.

ಆ ಕಾರಣದಿಂದ ಸುದ್ದಿ ಮಾಧ್ಯಮಗಳು ಸಹಜವಾಗಿಯೇ ಪ್ರಮುಖ ಸುದ್ದಿಯನ್ನಾಗಿ ಪರಿಗಣಿಸಿ ಪ್ರಕಟಿಸುತ್ತವೆ. ಪ್ರಕರಣದ ಗಂಭೀರತೆಯನ್ನು ಅರಿತು, ಪೊಲೀಸು-ಕಾನೂನಿನ ಮಾಹಿತಿ ಕಲೆಹಾಕಿ ಸಮಾಜದ ಮುಂದಿಡುತ್ತವೆ. ಸರಿ-ತಪ್ಪುಗಳ ತೀರ್ಮಾನವನ್ನು ಜನರಿಗೇ ಬಿಡುತ್ತವೆ. ಹೀಗೆ ಮಾಡುವಲ್ಲಿ ನಾಡಿನ ಮುದ್ರಣ ಮಾಧ್ಯಮ, ಅದರಲ್ಲೂ ಕೆಲವು ಮಾತ್ರ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿವೆ. ಪತ್ರಿಕೋದ್ಯಮದ ಘನತೆಗೆ ಧಕ್ಕೆಯಾಗದಂತೆ ನೋಡಿಕೊಂಡಿವೆ.

Advertisements

ಆದರೆ, ಇದೇ ಮಾತುಗಳನ್ನು ಮಿಕ್ಕ ಮಾಧ್ಯಮಗಳಿಗೆ ಹೇಳಲಾಗುವುದಿಲ್ಲ. ಹಲವು ಮುದ್ರಣ ಮಾಧ್ಯಮಗಳು ಪ್ರಭಾವಿಗಳ ಪರವಾಗಿವೆ. ಜಾತಿಯ ಜಾಡ್ಯಕ್ಕೆ ಅಂಟಿಕೊಂಡಿವೆ. ಆಳುವ ಸರ್ಕಾರದ ಮರ್ಜಿ-ಮುಲಾಜುಗಳಿಗೆ ಒಳಗಾಗಿವೆ. ಪ್ರಶ್ನಿಸುವುದನ್ನು ಮರೆತು ಪುಸಲಾವಣೆಗೆ ನಿಂತಿವೆ. ಸಮಾಜಕ್ಕೆ ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಲೇ ಬೆಳೆದು ಬೆಟ್ಟವಾಗಿವೆ. ಅದರಲ್ಲೂ ದೃಶ್ಯಮಾಧ್ಯಮಗಳ ನಿರೂಪಣೆ ಮತ್ತು ಧೋರಣೆ ಪತ್ರಿಕೋದ್ಯಮದ ಪಾವಿತ್ರ್ಯತೆಗೇ ಧಕ್ಕೆ ತಂದು, ಸಾರ್ವಜನಿಕ ವಲಯದಲ್ಲಿ ತಿರಸ್ಕಾರಭಾವ ಮೂಡುವಂತೆ ಮಾಡಿವೆ.

ಏಪ್ರಿಲ್ 23ನೇ ತಾರೀಖು ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಬಹಿರಂಗವಾಯಿತು. ಆದರೆ, ಬ್ರೇಕಿಂಗ್ ಸುದ್ದಿಗೆ ಬಾಯ್ದೆರೆದು ಕೂತ ಟಿವಿ ಚಾನಲ್‌ಗಳಾವುವೂ ಈ ಪೆನ್ ಡ್ರೈವ್ ಸುದ್ದಿ ಮಾಡಲಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಕೆಲ ಯೂ ಟ್ಯೂಬರ್‍‌ಗಳ ಕಡೆಯಿಂದ ಸುದ್ದಿ ಹರಡಿತು. ಒಂದೇ ಒಂದು ದೃಶ್ಯಮಾಧ್ಯಮ, ಅದೂ ಕೂಡ ಹೆಣ್ಣಿನ ಘನತೆಯನ್ನು ಮಣ್ಣು ಮಾಡಿ ಸುದ್ದಿ ಬಿತ್ತರಿಸಿತು. ಆನಂತರ ಹೊಳೆನರಸೀಪುರದಲ್ಲಿ ಸಂತ್ರಸ್ತೆಯಿಂದ ದೂರು ದಾಖಲಾಯಿತು. ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದಾಗ, ಸಾಮಾಜಿಕ ಜಾಲತಾಣ ಸದ್ದು ಮಾಡಿದಾಗ, ಸುದ್ದಿ ಮಾಡಲೇಬೇಕಾದ ಅನಿವಾರ್ಯತೆ ಎದುರಾದಾಗ- ದೃಶ್ಯಮಾಧ್ಯಮಗಳು ಅಖಾಡಕ್ಕೆ ಇಳಿದವು. ಆದರೂ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಬದಲಿಗೆ, ಪ್ರಕರಣದ ಮೂಲ ಸ್ವರೂಪವನ್ನೇ ಬದಲಿಸಿಬಿಟ್ಟವು. ಅನವಶ್ಯಕ ಚರ್ಚೆಗೆ ಇಳಿದು ರಾಜಕೀಯ ಕೆಸರೆರಚಾಟಕ್ಕೆ ಮಹತ್ವ ಕೊಟ್ಟವು. ಸಂತ್ರಸ್ತ ಮಹಿಳೆಯರನ್ನು ಅವಮಾನಿಸಿ, ಅಪರಾಧದ ಮೂಲವನ್ನೇ ಮರೆಮಾಚಿಬಿಟ್ಟವು.

ಇದನ್ನು ಓದಿದ್ದೀರಾ?: ಕಾನೂನಿನ ಮುಂದೆ ಕೆಲವರು ಹೆಚ್ಚು ಸಮಾನರು | ಯಂಕ ನಾಣಿ ಸೀನ ನೀವು ಶಿಕ್ಷೆಗೆ ಸದಾ ಅರ್ಹರು..!!

ಇನ್ನು ದರ್ಶನ್ ಪ್ರಕರಣದಲ್ಲಿ… ಆತ ಕೊಲೆ ಕೇಸಿನಲ್ಲಿ ಭಾಗಿಯಾಗಿದ್ದರೆ, ಶಿಕ್ಷೆಯಾಗಲಿ. ದುರಹಂಕಾರಿಯಾಗಿದ್ದರೆ ಅಭಿಮಾನಿಗಳೇ ಹದ್ದುಬಸ್ತಿನಲ್ಲಿಡಲಿ. ಆದರೆ, ದರ್ಶನ್ ಪ್ರಕರಣದಲ್ಲಿ ದೃಶ್ಯಮಾಧ್ಯಮಗಳ ವರ್ತನೆ, ಆತನ ಮೇಲೆ ಯುದ್ಧ ಸಾರಿದಂತಿದೆ. ಎರಡು ವರ್ಷಗಳ ಹಿಂದೆ ನಟ ದರ್ಶನ್ ದೃಶ್ಯ ಮಾಧ್ಯಮಗಳ ರೀತಿ-ನೀತಿ ಕುರಿತು ಕಟುವಾಗಿ ಟೀಕಿಸಿದ್ದ. ಆ ಸಿಟ್ಟು ಈಗ ಸೇಡಿನ ರೂಪ ತಾಳಿದೆ. ಹಳ್ಳಕ್ಕೆ ಬಿದ್ದ ತೋಳಕ್ಕೆ ಆಳಿಗೊಂದು ಕಲ್ಲು ಹಾಕಲಾಗುತ್ತಿದೆ. ಬಡಪಾಯಿ ರೇಣುಕಸ್ವಾಮಿಯ ಹತ್ಯೆಗಿಂತ ದರ್ಶನ್ ಮೇಲಿನ ದ್ವೇಷವೇ ಮುಖ್ಯವಾಗಿ ಟಿವಿ ಚಾನಲ್‌ಗಳ ಅಬ್ಬರ ಅತಿರೇಕಕ್ಕೆ ಹೋಗುತ್ತಿದೆ.

ಒಂದು ಚಾನಲ್‌ನ ಒಬ್ಬ ಆಂಕರ್, ‘ಇಷ್ಟೆಲ್ಲ ಆದಮೇಲೂ ಆ ನಟನ ಚಿತ್ರಗಳನ್ನು ಜನ ನೋಡ್ತರೆ ಅಂದರೆ, ಈ ಸಮಾಜಕ್ಕೆ ಏನೋ ಆಗಿದೆ’ ಎಂಬ ಸಂದೇಶ ರವಾನಿಸುತ್ತಾರೆ. ಅದೇ ಮಾತುಗಳು ಆತನಿಗೂ ಅನ್ವಯಿಸುವುದಿಲ್ಲವೇ? ‘ಇಷ್ಟೆಲ್ಲ ಸುಳ್ಳು ಸುದ್ದಿಗಳನ್ನು ಬಿತ್ತರಿಸಿದರೂ, ದ್ವೇಷ ಬಿತ್ತಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದರೂ, ಜನ ಇನ್ನೂ ಆ ಚಾನಲ್ ನೋಡ್ತರೆ ಅಂದರೆ, ಈ ಸಮಾಜಕ್ಕೆ ಏನೋ ಆಗಿದೆ’ ಎಂದು ಹೇಳಬಹುದಲ್ಲವೇ? ದರ್ಶನ್ ವಿರುದ್ಧದ ದೃಶ್ಯ ಮಾಧ್ಯಮಗಳ ಸಂಘಟಿತ ದಾಳಿ, ಪ್ರತೀಕಾರ ಮನೋಭಾವ ಏನನ್ನು ಹೇಳುತ್ತದೆ?

ಏತನ್ಮಧ್ಯೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪೋಕ್ಸೋ ಪ್ರಕರಣ ಎದ್ದು ನಿಂತಿದೆ. ಈ ಪ್ರಕರಣದಲ್ಲಂತೂ ಸುದ್ದಿ ಮಾಧ್ಯಮಗಳು, ದೂರುದಾರ ಮಹಿಳೆಯ ನಡತೆ ಸರಿ ಇಲ್ಲ, ಗಣ್ಯರ ವಿರುದ್ಧ ಆಕೆ 53 ದೂರು ನೀಡಿದ್ದಾಳೆ, ಆಕೆಯ ಪ್ರವೃತ್ತಿ ಮತ್ತು ದೂರುಗಳು ಅಪ್ರಾಮಾಣಿಕತೆಯಿಂದ ಕೂಡಿವೆ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿವೆ. ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಎನ್ನುವುದನ್ನು ಮುಂದೆ ಮಾಡಿ, ಪ್ರಕರಣದ ಗಂಭೀರತೆಯನ್ನು ಮರೆಮಾಚುತ್ತಿವೆ. ಪ್ರಕರಣವನ್ನು ಮುಚ್ಚಿಹಾಕಲು ಹಣ ಕೊಟ್ಟಿದ್ದು, ಬೆದರಿಕೆ ಒಡ್ಡಿದ್ದು, ಸಾಕ್ಷ್ಯ ನಾಶ ಮಾಡಿದ್ದರ ಬಗೆಗಿನ ಪ್ರಶ್ನೆ ಎತ್ತುವುದನ್ನು ಪ್ರಜ್ಞಾಪೂರ್ವಕವಾಗಿ ಹಿನ್ನೆಲೆಗೆ ಸರಿಸಿವೆ.

ಈ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್, ಯಡಿಯೂರಪ್ಪನವರನ್ನು ಬಂಧಿಸುವುದು ಸದ್ಯಕ್ಕೆ ಬೇಡ, ವಿಚಾರಣೆಗೆ ಹಾಜರಾಗುತ್ತಾರೆ ಎಂದಿದೆ. ಆತುರಕ್ಕೆ ಬಿದ್ದ ದೃಶ್ಯ ಮಾಧ್ಯಮಗಳು, ಬಿಗ್ ರಿಲೀಫ್, ಜಾಮೀನು ಮಂಜೂರು ಎಂದು ಬ್ರೇಕಿಂಗ್ ನ್ಯೂಸ್ ಬಿತ್ತರಿಸಿಬಿಟ್ಟವು. ಅಷ್ಟೇ ಅಲ್ಲ, ಯಡಿಯೂರಪ್ಪನವರ ಮಗ, ಹಿತೈಷಿಗಳು, ಪಕ್ಷದ ನಾಯಕರ ಮೂತಿಗೆ ಮೈಕ್ ಹಿಡಿದು, ಯಡಿಯೂರಪ್ಪನವರನ್ನು ಹಸು ಎಂಬಂತೆ ಚಿತ್ರಿಸಿಟ್ಟವು. ಬದಲಿಗೆ ಪ್ರಾಸಿಕ್ಯೂಷನ್ ಪರ ವಕೀಲರಾದ ಶಶಿಕಿರಣ್ ಶೆಟ್ಟಿ, ಜಗದೀಶ್, ಬಾಲನ್‌ರ ಅಭಿಪ್ರಾಯ ಕೇಳಲಿಲ್ಲ. ಅಷ್ಟೇ ಏಕೆ, ಸಂತ್ರಸ್ತೆಯ ಅಣ್ಣನ ಅನಿಸಿಕೆಯನ್ನೂ ದಾಖಲಿಸಲಿಲ್ಲ. ಇದು ಮಾಧ್ಯಮಗಳು ಮಾಡುವ ಕೆಲಸವೇ? ಇವರು ಯಾರ ಪರ?

ಈ ‘ಮಾನವಂತ’ ಮಾಧ್ಯಮಗಳನ್ನು ಜನ ತಿರಸ್ಕರಿಸುವ ತುರ್ತಿದೆ. ಇಲ್ಲದಿದ್ದರೆ, ಇವತ್ತು ಜನರ ಚಿಂತನಾಕ್ರಮವನ್ನು ಕೊಲ್ಲುತ್ತಿರುವವರು, ನಾಳೆ ಜನರನ್ನೇ ಕೊಂದರೂ ಆಶ್ಚರ್ಯವಿಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X