ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್ ಸೇರಿದಂತೆ 14 ಆರೋಪಿಗಳನ್ನು ಮತ್ತೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣ ಪ್ರಮುಖ ಹಂತಕ್ಕೆ ತಲುಪುವ ಹೊತ್ತಿನಲ್ಲಿ ಈ ಪ್ರಕರಣದ ತನಿಖೆ ಮಾಡುತ್ತಿದ್ದ ತನಿಖಾಧಿಕಾರಿಯನ್ನು ಬದಲಾವಣೆ ಮಾಡಲಾಗಿತ್ತು. ಆದರೆ, ಇದೀಗ ಮತ್ತೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ತನಿಖಾ ತಂಡಕ್ಕೆ ಮರು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಪ್ರಕರಣದ ತನಿಖೆಯನ್ನು ಕಾಮಾಕ್ಷಿಪಾಳ್ಯದ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್ ಅವರು ನಡೆಸುತ್ತಿದ್ದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಗಿರೀಶ್ ನಾಯ್ಕ್ ಅವರು ತನಿಖೆ ನಡೆಸಿ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಒಟ್ಟು 13 ಜನರನ್ನು ಬಂಧಿಸಿದ್ದರು. ಈ ಪ್ರಕರಣವನ್ನು ಸಮರ್ಥವಾಗಿ ನಡೆಸುತ್ತಿದ್ದರು.
ಲೋಕಸಭಾ ಚುನಾವಣೆಯ ಹಿನ್ನೆಲೆ, ಗಿರೀಶ್ ನಾಯ್ಕ್ ಅವರನ್ನು ಸಿ.ಕೆ.ಅಚ್ಚುಕಟ್ಟು ಠಾಣೆಯಿಂದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಈ ಮಧ್ಯೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಜವಾಬ್ದಾರಿ ಇವರ ಹೆಗಲಿಗೆ ಬಿದ್ದಿತ್ತು. ಪ್ರಕರಣದ ತನಿಖೆ ನಡೆಸುತ್ತಿದ್ದ ಅವರನ್ನು ಮತ್ತೆ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ತೆರವಾದ ಸ್ಥಾನಕ್ಕೆ ಪ್ರಕರಣದ ನೂತನ ತನಿಖಾಧಿಕಾರಿಯಾಗಿ ವಿಜಯನಗರ ಉಪವಿಭಾಗ ಎಸಿಪಿ ಚಂದನ್ ತನಿಖಾಧಿಕಾರಿಯಾಗಿ ಬಂದಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಕಾರು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸಾವು
ಇದೀಗ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಅಗತ್ಯ ಇರುವ ಹಿನ್ನೆಲೆ, ಗಿರೀಶ್ ನಾಯ್ಕ್ ಅವರನ್ನು ಸಹಾಯಕ ತನಿಖಾಧಿಕಾರಿಯನ್ನಾಗಿ ಮತ್ತೆ ನಿಯುಕ್ತಿಗೊಳಿಸಲಾಗಿದೆ. ಆರೋಪಿ ದರ್ಶನ್ ಅವರನ್ನು ಮೈಸೂರಿನಿಂದ ಕರೆತಂದಿದ್ದ ತಂಡದಲ್ಲಿ ಗಿರೀಶ್ ನಾಯ್ಕ್ ಪ್ರಮುಖ ಪಾತ್ರ ವಹಿಸಿದ್ದರು.
