ಐಐಟಿ-ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 17 ವರ್ಷದ ಯುವಕ ರಾಜಸ್ಥಾನದ ಕೋಟಾ ನಗರದಲ್ಲಿ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಬಿಹಾರದ ಮೋತಿಹಾರಿ ನಿವಾಸಿ ಆಯುಷ್ ಜೈಸ್ವಾಲ್ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಮಹಾವೀರ್ ನಗರ ಪ್ರದೇಶದ ಸಾಮ್ರಾಟ್ ಚೌಕ್ ಬಳಿಯ ಪೇಯಿಂಗ್ ಗೆಸ್ಟ್ ಹೌಸ್‌ನಲ್ಲಿ (ಪಿಜಿ) ತಂಗಿದ್ದರು.
ಆಯುಷ್ ಶನಿವಾರ ರಾತ್ರಿಯವರೆಗೂ ಕೊಠಡಿಯಿಂದ ಹೊರಗೆ ಬಾರದಿರುವುದನ್ನು ನೋಡಿದ ಆತನ ಸ್ನೇಹಿತರು ಪಿಜಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿ ಬಾಗಿಲು ತೆರೆಯದ ಕಾರಣ ಪಿಜಿ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು | ನ್ಯಾಯ ಸಿಗದಿದ್ದಕ್ಕೆ ಮನನೊಂದು ಕೋರ್ಟ್ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ತಂಡ ಬಾಗಿಲ ಬೀಗ ಒಡೆದು ನೋಡಿದಾಗ ವಿದ್ಯಾರ್ಥಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪೊಲೀಸರು ಆತನನ್ನು ಕೆಳಗಿಳಿಸಿ ಹೊಸ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಬಾಲಕ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ.
“ಶನಿವಾರ ರಾತ್ರಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಆತನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಯಾವುದೇ ಆತ್ಮಹತ್ಯೆ ಪತ್ರ ಇನ್ನೂ ಪತ್ತೆಯಾಗಿಲ್ಲ” ಎಂದು ಹೇಳಿದ್ದಾರೆ.
ಬಾಲಕನ ಕುಟುಂಬ ಸದಸ್ಯರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಮಹಾವೀರ್ ನಗರ ಎಸ್‌ಎಚ್‌ಒ ಮಹೇಂದ್ರ ಮಾರು ತಿಳಿಸಿದ್ದಾರೆ.
ಶಿಕ್ಷಣ ಕೇಂದ್ರ ಕೋಟಾದಲ್ಲಿ ಈ ವರ್ಷ ಐಐಟಿ-ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಸಾವಿನ 11ನೇ ಪ್ರಕರಣ ಇದಾಗಿದೆ.